ಬೆಂಗಳೂರು: “ಗೋ ಹತ್ಯೆ ನಿಷೇಧ ಕಾಯ್ದೆಯು ವ್ಯವಸ್ಥಾಯ, ಹೈನುಗಾರಿಕೆ, ಮಾಂಸ ಮತ್ತು ಚರ್ಮೋದ್ಯಮಕ್ಕೆ ಸಂಬಂಧಿಸಿದ ದೇಶೀಯ ಉದ್ದಮೆಗಳನ್ನು ನಾಶ ಮಾಡಲಿದೆ,’ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್ವಾದಿ) ಆರೋಪಿಸಿದೆ.
ಕಾಯ್ದೆ ಮೂಲಕ ಜನರ ಆಹಾರ ಸಂಸ್ಕೃತಿ, ಬದುಕುವ ಹಕ್ಕು ಮತ್ತು ಜಾನುವಾರು ಸಂತತಿಯ ದೊಡ್ಡ ದಾಳಿ ನಡೆಸಲಾಗಿದೆ. ಇದನ್ನು ತೀವ್ರವಾಗಿ ಖಂಡಿಸಲಾಗುವುದು. ಕೇಂದ್ರ ಸರ್ಕಾರ ಕೂಡಲೇ ಕಾಯ್ದೆಯನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಪಕ್ಷದ ವತಿಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಪಕ್ಷದ ರಾಜ್ಯ ಸಮಿತಿ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಎಚ್ಚರಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಗೋಹತ್ಯೆ ನಿಷೇಧ ಕಾಯ್ದೆಯಿಂದ ಬಿಕ್ಕಟ್ಟಿನಲ್ಲಿರುವ ಕೃಷಿ ರಂಗ ಮತ್ತು ರೈತರು, ಕೂಲಿಕಾರರು ಮತ್ತಷ್ಟು ಸಂಕಷ್ಟ ಎದುರಿಸುವಂತಾಗಿದೆ. ನಿರುಪಯೋಗಿ ಜಾನುವಾರುಗಳನ್ನು ಅವುಗಳ ಸಾವಿನವರೆಗೆ ಸಾಕಲೇ ಬೇಕಾದ ಒತ್ತಡಕ್ಕೆ ರೈತರು ಸಿಲುಕಿದ್ದು, ಅವರ ಜೀವನ ಮತ್ತಷ್ಟು ದುಸ್ಥರವಾಗಲಿದೆ. ಜತೆಗೆ ವ್ಯವಸಾಯ ಹಾಗೂ ಹೈನುಗಾರಿಕೆ ಆಧಾರಿತ ಉದ್ದಿಮೆಗಳು ಈ ಕಾಯ್ದೆಯಿಂದ ಮುಚ್ಚುವ ಸಾಧ್ಯತೆ,’ ಇದೆ ಎಂದು ಹೇಳಿದರು.
ದನದ ಮಾಂಸ ರಫ್ತಿನಲ್ಲಿ ಭಾರತ ಪ್ರಮುಖ ದೇಶವಾಗಿದೆ. ಈ ಕಾಯ್ದೆ ಕಾರಣದಿಂದ ಮಾಂಸದ ಕೊರತೆಯುಂಟಾಗಿ ಇಡೀ ಕೈಗಾರಿಕೆ ಮತ್ತು ಅದರಲ್ಲಿ ತೊಡಗಿದ್ದ ಭಾರೀ ಉದ್ಯೋಗವೂ ಇಲ್ಲದಂತಾಗಲಿದೆ. ಚರ್ಮೋದ್ಯಮವೂ ಅದರ ಉದ್ಯೋಗಾವಕಾಶಗಳು ನಾಶಗೊಳ್ಳಲಿವೆ. ಇಷ್ಟಲ್ಲದೇ ದನಗಳ ಹೆಸರೇಳಿಕೊಂಡು ಮನುಷ್ಯರ ಮೇಲೆ ಆಗಾಗ ದಾಳಿ ನಡೆಸುತ್ತಿರುವ ಸಂಘಪರಿವಾರದ ಕಾರ್ಯಕರ್ತರಿಂದ ದೇಶದಲ್ಲಿ ಅಶಾಂತಿ ಉಂಟಾಗಲಿದೆ. ಸಾವು, ನೋವು ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ಕೂಡಲೇ ಕೇಂದ್ರ ಸರ್ಕಾರ ಈ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ಏನು ಮಾಡುತ್ತದೆ ತಿಳಿಸಲಿ?: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ವಿಷಯವಾಗಿ ತನ್ನ ನಿಲುವೇನು ಎಂಬುದನ್ನು ಇಂದಿಗೂ ಸ್ಪಷ್ಟಪಡಿಸಿಲ್ಲ. ಇಲ್ಲಿನ ಕಾಂಗ್ರೆಸ್ ಸರ್ಕಾರ ಕಾಯ್ದೆಯನ್ನು ಬೆಂಬಲಿಸುತ್ತದೆಯೋ? ವಿರೋಧಿಸುತ್ತದೆಯೋ ಎಂಬುದನ್ನು ಸ್ಪಷ್ಟಪಡಿಸಬೇಕ ಎಂದು ಆಗ್ರಹಿಸಿದರು.