ಶಿರಸಿ: ಆರುವರೆ ದಶಕಗಳ ಕಾಲ ಯಕ್ಷಗಾನ ರಂಗಭೂಮಿಯಲ್ಲಿ ಅನೇಕ ಪೌರಾಣಿಕ ಪಾತ್ರಗಳನ್ನು ಕಟ್ಟಿಕೊಟ್ಟ, ಕೌರವ ಪಾತ್ರದ ಮೂಲಕ ಮನೆಮಾತಾದ ಸರಳ ಸಜ್ಜನಿಕೆಯ ಕಲಾವಿದ ಗೋಡೆ ನಾರಾಯಣ ಹೆಗಡೆ ಅವರ ರಂಗಭೂಮಿ ಬದುಕಿನ ಕುರಿತ ಸಾಕ್ಷ್ಯ ಚಿತ್ರವೊಂದು ನಿರ್ಮಾಣವಾಗುತ್ತಿದೆ. ಅವರ ಕಲಾ ಬದುಕಿನ ಅನಾವರಣ ದಾಖಲಿಸುವ ಕಾರ್ಯವನ್ನು ಯಕ್ಷಗಾನ ಅಕಾಡೆಮಿ ಮಾಡಿಸುತ್ತಿದೆ.
ಯಕ್ಷಗಾನ ಕಲೆಯನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡ, ಅನೇಕ ಪಾತ್ರಗಳ ಸೃಷ್ಟಿಯೊಂದಿಗೆ ಯಕ್ಷಗಾನಕ್ಕೆ ಮಹೋನ್ನತ ಕೊಡುಗೆ ನೀಡಿದ ಪ್ರಸಿದ್ಧ ಕಲಾವಿದ ಗೋಡೆ ನಾರಾಯಣ ಹೆಗಡೆಯವರು. ಸಾವಿರಕ್ಕೂ ಅಧಿಕ ಕೌರವ ಪಾತ್ರದಲ್ಲಿ ಮಿಂಚಿದ, ಅದನ್ನು ಅಷ್ಟೇ ಮನೋಜ್ಞವಾಗಿ ಕಟ್ಟಿಕೊಟ್ಟ ಗೋಡೆ ನಾರಾಯಣ ಹೆಗಡೆಯವರ ಬದುಕು ಮತ್ತು ಕಲಾಸಾಧನೆ
ಕುರಿತು ಸಾಕ್ಷ್ಯಚಿತ್ರ ಇದಾಗಲಿದೆ. ಈ ಕುರಿತಾದ ಚಿತ್ರೀಕರಣ ಕೂಡ ಪೂರ್ಣಗೊಂಡಿದೆ. ಅಕಾಡೆಮಿ ಅಧ್ಯಕ್ಷ ಪ್ರೊ| ಎಂ.ಎ. ಹೆಗಡೆ ದಂಟ್ಕಲರ ಮಹತ್ವದ ಯೋಚನೆಯ ಪ್ರತಿಫಲ ಇದಾಗಿದೆ. ಈಗಾಗಲೇ ನೆಬ್ಬೂರು ನಾರಾಯಣ ಭಾಗವತರ ಕುರಿತಾದ ಸಾಕ್ಷ್ಯಚಿತ್ರ ಬಿಡುಗಡೆ ಹಂತದಲ್ಲಿದ್ದು, ಗೋಡೆ ಅವರ ಕುರಿತ ಸಾಕ್ಷ್ಯಚಿತ್ರ ಈ ವರ್ಷದ ಕೊನೆಯೊಳಗೆ ಅಭಿಮಾನಿಗಳ ಕೈ ಸೇರಲಿದೆ.
ಈ ಸಾಕ್ಷಚಿತ್ರವನ್ನು ಶ್ರೀಧರ ಹೆಗಡೆ ಬೆಂಗಳೂರು ಮತ್ತು ಪ್ರಸಿದ್ಧ ಚಿತ್ರನಟ ರಮೇಶ್ ಪಂಡಿತ್ ನಿರ್ದೇಶಿಸಿದ್ದಾರೆ. ಸಂಶೋಧಕ ಲಕ್ಷಿಶ್ ಸೋಂದಾ ಅವರ ಸಂಯೋಜನೆಯಲ್ಲಿ ಈಗಾಗಲೇ ಮಲೆನಾಡಿನ ಸುಂದರ ಪರಿಸರದಲ್ಲಿ ಚಿತ್ರೀಕರಣ ಮುಗಿದಿದೆ. ಈ ಸಾಕ್ಷ್ಯಚಿತ್ರದ ವಿಶೇಷತೆ ಎಂದರೆ ಗೋಡೆಯವರ ಬಾಲ್ಯದ ಬದುಕು, ಅವರಿಗೆ ಯಕ್ಷಗಾನದೆಡೆಗೆ ಆಸಕ್ತಿ ಬರಲು ಕಾರಣವಾದ ಘಟನೆ, ನಂತರದಲ್ಲಿ ಕೊಳಗಿ ಸೀತಾರಾಮ ಭಾಗವತರಲ್ಲಿ ಅವರಿಗೆ ಕಲಿಯಲು ದೊರಕಿದ ಅವಕಾಶ ಎಲ್ಲ ಘಟನೆಗಳನ್ನ ಮರುಸೃಷ್ಟಿ ಮಾಡಲಾಗಿದೆ. ಹಾಗಲ್ಲದೆ ಅವರ ಪ್ರಸಿದ್ಧ ಮತ್ತು ಸ್ಥಾಪಿತ ಪಾತ್ರಗಳ ವಿಶ್ಲೇಷಣೆ ಕೂಡ ಇದೆ. ಗೋಡೆಯವರ ಕುರಿತು ಪತ್ರಕರ್ತ ಎಂ.ಕೆ. ಭಾಸ್ಕರ್‌ರಾವ್, ಕಲಾವಿದರಾದ ಸುಬ್ರಹ್ಮಣ್ಯ ಧಾರೇಶ್ವರ, ಎಂ.ಎಲ್. ಸಾಮಗ, ಶ್ರೀಧರ ಹೆಗಡೆ ಚಪ್ಪರಮನೆ, ನಿರ್ಮಲಾ ಹೆಗಡೆ ಮುಂತಾದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಸಾಕ್ಷ್ಯಚಿತ್ರ ಗೋಡೆಯವರ ಇದುವರೆಗಿನ ಕಲಾ ಬದುಕಿನ ಕನ್ನಡಿಯಾಗಿ ಕೈ ಸೇರಲಿದೆ.
ಯಕ್ಷರಂಗದ ಕೌರವ ಎಂದೇ ಜನಜನಿತರಾದ ಗೋಡೆ ಅವರಿಗೆ ಅಕಾಡೆಮಿ ಸಾಕ್ಷ್ಯಚಿತ್ರದ ಮೂಲಕ ಗೌರವಿಸುತ್ತಿರುವದು ವಿಶೇಷವಾಗಿದೆ.