ಚನ್ನರಾಯಪಟ್ಟಣ/ಬಾಗೂರು: ಮೇವಿನೊಂದಿಗೆ ಹೊಟ್ಟೆಯ ಒಳಕ್ಕೆ ಸೇರಿದ್ದ ಕಬ್ಬಿಣದ ತಂತಿಯನ್ನು ಶಸ್ತ್ರಚಿಕಿತ್ಸೆ ಮಾಡಿ ಹೊರ ತೆಗೆದು ಹಸುವಿನ ಪ್ರಾಣ ಉಳಿಸುವಲ್ಲಿ ಅಣತಿ ಪಶು ಚಿಕಿತ್ಸಾಲಯದ ಪಶುವೈದ್ಯಾಧಿಕಾರಿ ಡಾ.ಎಸ್.ಪಿ.ಮಂಜುನಾಥ ಯಶಸ್ವಿಯಾಗಿದ್ದಾರೆ.
ತಾಲೂಕಿನ ಬಾಗೂರು ಹೋಬಳಿೂಂಡನಹಳ್ಳಿ ಗ್ರಾಮದ ನಿವಾಸಿ ನಿಂಗೇಗೌಡ ಅವರಿಗೆ ಸೇರಿದ್ದ ಎರಡು ವರ್ಷದ ಹಸು ಜಮೀನಿನಲ್ಲಿ ಮೇವು ಸೇವಿಸುವಾಗ ಕಬ್ಬಿಣದ ತಂತಿ ರಾಸಿನ ಹೊಟ್ಟೆ ಸೇರಿತ್ತು. ಹೊಟ್ಟೆ ಸೇರಿದ ಕಬ್ಬಿಣದ ತಂತಿಯು ಕರುಳಿನ ಒಳಗೆ ಚುಚ್ಚುತ್ತಿದ್ದ ಪರಿಣಾಮ ಹಸುವು ಮೇವು ಹಾಗೂ ನೀರನ್ನು ಬಿಟ್ಟು ಸಾವು ಬದುಕಿನ ನಡುವೆ ಹೋರಾಡುತ್ತಿತ್ತು.
ಒಂದೂವರೆ ಗಂಟೆ ಶಸ್ತ್ರ ಚಿಕಿತ್ಸೆ: ರಾಸಿಗೆ ಕಾಯಿಲೆ ಬಂದಿದೆ ಎಂದು ತಿಳಿದ ರೈತ ಅಣತಿ ಪಶು ಚಿಕಿತ್ಸಾಲಯಕ್ಕೆ ತೆರಳಿ ತನ್ನ ಹಸುವಿನಲ್ಲಿ ಕಂಡುಬಂದ ಸಮಸ್ಯೆಯ ಬಗ್ಗೆ ವೈದ್ಯರಲ್ಲಿ ತಿಳಿಸಿದಾಗ ಬೀಚಗೊಂಡನಹಳ್ಳಿ ಗ್ರಾಮಕ್ಕೆ ಆಗಮಿಸಿದ ಪಶುವೈದ್ಯಾಧಿಕಾರಿ ಹಸುವಿನ ಪರೀಕ್ಷೆ ನಡೆಸಿದರು. ಈ ವೇಳೆ ಹಸುವಿನ ಹೊಟ್ಟೆಯಲ್ಲಿ ಯಾವುದೋ ವಸ್ತು ಸೇರಿದೆ ಎಂದು ರೈತನಿಗೆ ತಿಳಿಸಿದ ಮರುಕ್ಷಣವೇ ಸುಮಾರು ಒಂದೂವರೆ ಗಂಟೆ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಹಸುವಿನ ಹೊಟ್ಟೆ ಭಾಗದಲ್ಲಿ ಇದ್ದ ತಂತಿಯನ್ನು ಪತ್ತೆ ಹಚ್ಚಿ ಹೊರತೆಗೆಯುವಲ್ಲಿ ಯಶಸ್ವಿಯಾದರು.
ಚೇತರಿಸಿಕೊಂಡ ಹಸು: ಸದ್ಯ ಹಸುವು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಮೇವು ಹಾಗೂ ನೀರು ಸೇವಿಸುವ ಮೂಲಕ ಎಂದಿನಂತೆ ಆರೋಗ್ಯವಾಗಿದೆ.
ಚಮಚ ಹೊರತೆಗೆದಿದ್ದ ವೈದ್ಯರು: ಕಳೆದ 9 ತಿಂಗಳ ಹಿಂದೆ ಅರಸೀಕೆರೆ ತಾಲೂಕು ಕೆಂಕೆರೆ ಗ್ರಾಮದ ನಿವಾಸಿ ಕುಮಾರ್ ಎಂಬುವರ ಎಮ್ಮೆ ಕರುವೊಂದು ಕಲಗಚ್ಚು(ಕೂನಿ) ಕುಡಿಯುವ ವೇಳೆ ಚಮಚವೊಂದು ಅದರ ಹೊಟ್ಟೆ ಸೇರಿದ್ದು ಆ ವೇಳೆಯಲ್ಲಿಯೂ ಇದೇ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿ ಚಮಚ ಹೊರ ತೆಗೆದಿದ್ದರು.
ಅಲ್ಲದೇ ತಾಲೂಕಿನ ಬೀಚಗೊಂಡನಹಳ್ಳಿ ಗ್ರಾಮದ ಸ್ವಾಮಿ ಎಂಬುವರ ಹಸುವಿನ ಹೊಟ್ಟೆ ಸೇರಿದ್ದ ತಂತಿಯೊಂದನ್ನು 2 ತಿಂಗಳ ಹಿಂದೆಯಷ್ಟೇ ಶಸ್ತ್ರಚಿಕಿತ್ಸೆ ಮಾಡಿ ಹಸುವನ್ನು ಬದುಕಿಸಿದ್ದರು. ಮತ್ತೆ ಮೂರನೇ ಬಾರಿಗೆ ಶಸ್ತ್ರ ಚಿಕಿತ್ಸೆಯೊಂದಿಗೆ ತಂತಿ ತೆಗೆಯುವ ಮೂಲಕ ಬೀಚನಗೊಂಡನಹಳ್ಳಿ ಗ್ರಾಮದ ನಿವಾಸಿ ನಿಂಗೇಗೌಡರ ಹಸುವೊಂದನ್ನು ರಕ್ಷಿಸಿದ್ದು, ಸ್ಥಳೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ರೈತರು ತಮ್ಮ ಜಾನುವಾರುಗಳಿಗೆ ಮೇವು, ಪಶು ಆಹಾರ ಹಾಗೂ ನೀರನ್ನು ನೀಡುವಾಗ ಹೆಚ್ಚು ಗಮನ ಹರಿಸಿ ಪರಿಶೀಲಿಸಿ ಕೊಡುವುದು ಅತ್ಯಗತ್ಯ. ಜಾನುವಾರುಗಳಿಂದ ಆದಾಯ ನಿರೀಕ್ಷೆ ತಪ್ಪಲ್ಲ. ಆದರೆ ಅವುಗಳ ಆರೈಕೆಗೂ ಹೆಚ್ಚು ಆದ್ಯತೆ ನೀಡಬೇಕು.
-ಡಾ.ಮಂಜುನಾಥ, ಪಶುವೈದ್ಯ