Advertisement

ಮನೆಯಲ್ಲಿ ಕಾಯುತ್ತಿದ್ದಾರೆ; ದಯವಿಟ್ಟು ಊರಿಗೆ ಬಿಟ್ಟು ಬಿಡಿ

01:36 AM Apr 21, 2020 | Sriram |

ಮಂಗಳೂರು/ಉಡುಪಿ: “ವೃದ್ಧ ತಂದೆ- ತಾಯಿ, ಪತ್ನಿ, ಮಕ್ಕಳು ಮನೆಯಲ್ಲಿ ಕಾಯುತ್ತಿದ್ದಾರೆ. ಮಕ್ಕಳೊಂದಿಗೆ ಕೂಡಿ ಗಂಜಿ ಕುಡಿಯಬೇಕು. ದಯವಿಟ್ಟು ನಮ್ಮನ್ನು ನಮ್ಮ ಊರಿಗೆ ಬಿಟ್ಟು ಬಿಡಿ; ನಮ್ಮವರನ್ನು ಸೇರಿಕೊಳ್ಳುತ್ತೇವೆ…’

Advertisement

ಕೂಲಿ ಕೆಲಸಕ್ಕೆಂದು ಬಂದು ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲದೆ, ಜಿಲ್ಲೆಯಲ್ಲೇ ಬಾಕಿಯಾಗಿರುವ ಉತ್ತರ ಕರ್ನಾಟಕ ಭಾಗದ ಕಾರ್ಮಿಕರ ನೋವಿನ ನುಡಿ ಇದು.”ಪ್ರತಿ ವರ್ಷ ಬೇಸಗೆಯಲ್ಲಿ ನಮ್ಮೂರಿನಲ್ಲಿ ಮಳೆಯಿಲ್ಲದೆ, ಕೃಷಿ ಚಟುವಟಿಕೆ ಸಾಧ್ಯವಾಗುವು ದಿಲ್ಲ. ಹೀಗಾಗಿ ಕೆಲಸ ಹುಡುಕಿ ಕರಾವಳಿಗೆ ಬರುತ್ತೇವೆ. ಮೇ, ಜೂನ್‌ನಲ್ಲಿ ಊರಿಗೆ ಮರಳುತ್ತೇವೆ. ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲದೆ ಕೈಯಲ್ಲಿ ಬಿಡಿಗಾಸೂ ಇಲ್ಲ. ಎಷ್ಟು ದಿನ ಅಂತ ದಾನಿಗಳು ನೀಡುವ ಆಹಾರ ಸೇವಿಸಿ ಬದುಕುವುದು? ನಮ್ಮನ್ನೊಮ್ಮೆ ಊರಿಗೆ ಕಳಿಸಿಬಿಡಿ ಎಂದು ಮೊರೆ ಇಡುತ್ತಿದ್ದಾರೆ ಮೂಡುಬಿದಿರೆ ಸಮಾಜ ಮಂದಿರದಲ್ಲಿ ಆಶ್ರಯ ಪಡೆಯುತ್ತಿರುವ 70ಕ್ಕೂ ಹೆಚ್ಚು ಕಾರ್ಮಿಕರು.

ನಡೆದೇ ಹೊರಟವರು
ಬಹುತೇಕ ಕಾರ್ಮಿಕರು ತಮ್ಮ ಊರಿಗೆ ಮರಳಲು ನಡೆದುಕೊಂಡೇ ಹೊರಟಿದ್ದರು. ಆದರೆ ಇಲ್ಲಿಂದ ಮುಂದಕ್ಕೆ ಹೋಗಲು ಅಧಿಕಾರಿಗಳು ಅವಕಾಶ ನೀಡದ್ದರಿಂದ ಸಮಾಜ ಮಂದಿರದಲ್ಲಿ ಆಶ್ರಯ ಪಡೆದಿದ್ದಾರೆ. ಇದೇ ರೀತಿ ಹಲವು ಕಡೆಗಳಲ್ಲಿ ಕಾರ್ಮಿಕರು ಆಶ್ರಯ ಪಡೆದಿದ್ದು, ಎಲ್ಲರ ವ್ಯಥೆಯೂ ಇದೇ ಆಗಿದೆ.

10 ಸಾವಿರ ಕಾರ್ಮಿಕರು ಬಾಕಿ!
ದ.ಕ. ಜಿಲ್ಲೆಯಾದ್ಯಂತ ಉತ್ತರ ಕರ್ನಾಟಕ ಭಾಗದ ಅಂದಾಜು 10 ಸಾವಿರ ಕಾರ್ಮಿಕರು ಪ್ರಸ್ತುತ ಕೆಲಸ ಹಾಗೂ ಕೈಯಲ್ಲಿ ಹಣವಿಲ್ಲದೆ ತೊಂದರೆಯಲ್ಲಿದ್ದಾರೆ. ಅಂಥವರಿಗೆ ಕಾರ್ಮಿಕ ಇಲಾಖೆ, ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತ ವತಿಯಿಂದ ಈ ವರೆಗೆ 12 ಸಾವಿರ ಕಿಟ್‌ ಆಹಾರ ಪೂರೈಸಲಾಗಿದೆ. ಕದ್ರಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಸ್ಟೆಲ್‌, ಕೆಪಿಟಿ ಬಿಸಿಎಂ ಹಾಸ್ಟೆಲ್‌, ಪುರಭವನ, ಪಾಂಡೇಶ್ವರ ಸರಕಾರಿ ಶಾಲೆಗಳಲ್ಲಿ ಪುನರ್ವಸತಿ ಕೇಂದ್ರ, ಎರಡು ನೈಟ್‌ ಶೆಲ್ಟರ್ ವ್ಯವಸ್ಥೆ ಮಾಡಲಾಗಿದೆ.

ಉಡುಪಿಯಲ್ಲೂ ಅದೇ ಕೊರಗು
ಉಡುಪಿ ಜಿಲ್ಲೆಯಲ್ಲಿ 6,000ಕ್ಕೂ ಅಧಿಕ ವಲಸೆ ಕಾರ್ಮಿಕರಿದ್ದಾರೆ. ನಗರವೊಂದರಲ್ಲೇ 3,500ರಷ್ಟು ಮಂದಿ ಹೊರ ಜಿಲ್ಲೆ ಹಾಗೂ ರಾಜ್ಯಗಳ ಕಾರ್ಮಿಕರಿದ್ದಾರೆ. ಅವರಿಗೆ ಇಲ್ಲಿನ ಬೋರ್ಡ್‌ ಹೈಸ್ಕೂಲ್‌, ಅಜ್ಜರಕಾಡು, ಬೀಡಿನಗುಡ್ಡೆ, ನಿಟ್ಟೂರು, ಅಲೆವೂರು, ಮಣಿಪಾಲದ ಪ್ರಗತಿನಗರ, ರಾಜೀವ್‌ನಗರ, ಸಂತೆಕಟ್ಟೆ, ಬ್ರಹ್ಮಾವರದ ಲೇಬರ್‌ ಕಾಲನಿ, ಹಾರಾಡಿ ಗಾಂಧಿನಗರ ಕಾಲನಿ, ಬೈಕಾಡಿ ಕಾಲನಿ, ಬಾಕೂìರು ಮೊದಲಾದೆಡೆ ತಾತ್ಕಾಲಿಕ ನೆಲೆ ಕಲ್ಪಿಸಲಾಗಿದೆ.

Advertisement

ನಮೂY ಊರಾಗೆ ಹೊಲಾ ಮನಿ ಅದಾವ. ಊರಿಗೆ ಹೋಗಿ ಬೆಳೆ ಬೆಳೀಬೇಕು. ನಮ್ಮನ್ನು ಕಳುಹಿಸಿ ಕೊಡಿ ಅಂತ ದೇವ್ರಾಗೆ ಪ್ರಾರ್ಥಿಸ್ತಾ ಇದ್ದೇವೆ.
– ವಿಜಯಪುರದ ಲಕ್ಕವ್ವ

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸರಕಾರದ ಸೂಚನೆಯಂತೆ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಯಾರನ್ನೂ ಹೋಗುವುದಕ್ಕಾಗಲೀ ಬರುವುದಕ್ಕಾಗಲೀ ಬಿಡುತ್ತಿಲ್ಲ. ಸದ್ಯ ಎಲ್ಲ ವಲಸೆ ಕಾರ್ಮಿಕರಿಗೂ ಆಹಾರ, ವಸತಿ ಕಲ್ಪಿಸಲಾಗಿದೆ. ಲಾಕ್‌ಡೌನ್‌ ಮುಗಿಯುವ ತನಕ ಇದು ಅನಿವಾರ್ಯ.
– ನಾಗರಾಜ್‌,
ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next