ಕೋಲಾರ: ಜಿಲ್ಲಾ ಉಸ್ತುವಾರಿ ಸಚಿವ ಸಿ.ಬಿ.ಕೃಷ್ಣಬೈರೇಗೌಡ ಮೂರು ತಿಂಗಳಿನಿಂದ ಕಾಣೆಯಾಗಿದ್ದು, ಹುಡುಕಿ ಕೊಡಬೇಕೆಂದು ಎಸ್ಪಿಗೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ(ಪ್ರೊ.ನಂಜುಂಡಸ್ವಾಮಿ ಸ್ಥಾಪಿತ)ಯಿಂದ ದೂರು ನೀಡಲಾಯಿತು.
ಜಿಲ್ಲಾಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ ಮಾತನಾಡಿ, ಜಿಲ್ಲೆಯು ಸತತ ಬರಗಾಲದಿಂದ ತತ್ತರಿಸಿದೆ. ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಅಪಾರ ಪ್ರಮಾಣ ಬೆಳೆ ನಷ್ಟ ಉಂಟಾಗಿದ್ದು, ರೈತರು ಕಂಗಾಲಾಗಿದ್ದಾರೆ. ಜಿಲ್ಲಾದ್ಯಂತ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗಿದೆ. ಜಾನುವಾರುಗಳಿಗೆ ಮೇವಿನ ಸಮಸ್ಯೆ ಇದೆ. ಜಿಲ್ಲಾಡಳಿತ, ಜಿಪಂ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವಿನ ಸಮಸ್ಯೆಯಾಗಲಿ ಉಂಟಾಗಿಲ್ಲವೆ ಎಂದು ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ದೂರಿದರು.
ಜಿಲ್ಲೆ ಮರೆತು ರಾಜಕೀಯದಲ್ಲಿ ತಲ್ಲೀನ: ವಾಸ್ತವವಾಗಿ ಹಳ್ಳಿಗಳಿಗೆ ಹೋಗಿ ನೋಡಿದರೆ ಜನ, ಜಾನುವಾರುಗಳಿಗೆ ಸಮಸ್ಯೆ ಇರುವುದು ತಿಳಿಯುತ್ತದೆ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಬಿ.ಕೃಷ್ಣಬೈರೇಗೌಡರು ಲೋಕಸಭಾ ಚುನಾವಣೆಯಲ್ಲಿ ತಲ್ಲೀನರಾಗಿದ್ದು, ಅವರಿಗೆ ರಾಜಕೀಯ ಭವಿಷ್ಯ ನೀಡಿದ ಜಿಲ್ಲೆಯನ್ನು ಮರೆತು ಬರೀ ರಾಜಕಾರಣಕ್ಕಾಗಿ ಸೀಮಿತವಾಗಿದ್ದಾರೆಯೇ ಅಥವಾ ಯಾರಾದರೂ ಅಪಹರಿಸಿದ್ದಾರೆಯೇ ಎಂದು ಜಿಲ್ಲೆಯ ಜನರು ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಕೆಡಿಪಿ ಸಭೆಯನ್ನೂ ನಡೆಸಿಲ್ಲ: ಸಚಿವರು ಮೂರು ತಿಂಗಳಿನಿಂದ ಜಿಲ್ಲೆಗೆ ಭೇಟಿ ನೀಡದೆ, ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಗಮನ ಹರಿಸದೆ, ಎಲ್ಲಾ ಇಲಾಖೆಯ ಅಧಿಕಾರಿಗಳ ಮಾಸಿಕ ಕೆಡಿಪಿ ಸಭೆಯನ್ನೂ ನಡೆಸದೆ ಇರುವುದರಿಂದ ಸಚಿವರು ಕಾಣೆಯಾಗಿರಬಹುದೆಂದು ಅವರನ್ನು ಹುಡುಕಿಕೊಡಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಂಘದಿಂದ ದೂರು ನೀಡಿ ಕೋರಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ನಂದಕುಮಾರ್, ಮುಳಬಾಗಿಲು ತಾಲೂಕು ಅದ್ಯಕ್ಷ ಎಲ್.ಎನ್.ಬಾಬು, ಶ್ರೀನಾಥ್, ಶ್ರೀನಿವಾಸಪುರ ತಾಲೂಕು ಅಧ್ಯಕ್ಷ ದೊಡ್ಡಕುರುಬರಹಳ್ಳಿ ಶಂಕರಪ್ಪ, ಜಿಲ್ಲಾ ಮುಖಂಡರಾದ ಕೊಲದೇವಿ ಗೋಪಾಲಕೃಷ್ಣಮೂರ್ತಿ, ಬಂಗಾರಪೇಟೆ ತಾಲೂಕು ಅಧ್ಯಕ್ಷ ಕದಿರೇನಹಳ್ಳಿ ಶ್ರೀನಿವಾಸ್, ಕೋಲಾರ ತಾಲೂಕು ಅಧ್ಯಕ್ಷ ಶಿಳ್ಳಂಗೆರೆ ವೇಣುಗೋಪಾಲ್, ಕೊಲದೇವಿ ಗಂಗಾಧರ್, ತೇರಹಳ್ಳಿ ಚಂದ್ರಪ್ಪ, ಕೋಲಾರ ನಗರ ಸಂಚಾಲಕ ಜಬೀವುಲ್ಲಾ, ಕಾರ್ಮಿಕ ಘಟಕದ ಫಿರ್ದೋಸ್, ಅಬೀದ್ ಖಾನ್, ಹುಸೇನ್ ನಿಜಾಂ ಪಾಷ, ರಾಮಚಂದ್ರ ಮುಂತಾದವರು ಭಾಗವಹಿಸಿದ್ದರು.