Advertisement
ತುಮಕೂರು: ಕಳೆದ ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ನಿರಂತರ ಕಾಡು ಪ್ರಾಣಿಗಳ ದಾಳಿ ನಡೆಯುತ್ತಿದೆ. ಒಂದು ವರ್ಷಕ್ಕೆ ಎರಡು ಮೂರು ಬಾರಿ ಕಾಡಾನೆಗಳ ಇಂಡು ಜಿಲ್ಲೆಗೆ ಬಂದು ಜನರಲ್ಲಿ ಆತಂಕ ಉಂಟು ಮಾಡುತ್ತಲೇ ಇರುತ್ತವೆ. ಆನೆಗಳು ಹಲವು ಬಾರಿ ನಗರದ ಹೃದಯ ಭಾಗದಲ್ಲಿಯೇ ಬಂದು ಹೋಗಿವೆ. ಈಗ ಚಿರತೆಗಳು ಹಗಲು-ರಾತ್ರಿ ಎನ್ನದೇ ಮನುಷ್ಯರ ಮೇಲೂ ದಾಳಿ ನಡೆಸಿ, ನಾಲ್ಕು ತಿಂಗಳಲ್ಲಿ ನಾಲ್ವರನ್ನು ಬಲಿ ಪಡೆದಿವೆ.
Related Articles
Advertisement
ಅರವಳಿಕೆ ತಜ್ಞರಿದ್ದರೇ ಹೆಚ್ಚು ಅನುಕೂಲ: ತುಮಕೂರು ಜಿಲ್ಲಾದ್ಯಂತ ಇದುವರೆಗೂ ಕಳೆದ 10 ವರ್ಷದಲ್ಲಿ ಆನೆ ತುಳಿತದಿಂದ 15ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ, ಲಕ್ಷಾಂತರ ರೂ. ಬೆಳೆ ಹಾಳಾಗಿದೆ ಪ್ರತಿವರ್ಷ ಒಬ್ಬರಲ್ಲ ಒಬ್ಬರು ಆನೆ ತುಳಿತಕ್ಕೆ ಬಲಿಯಾಗಿದ್ದಾರೆ. ಇದಲ್ಲದೆ ಜಿಲ್ಲಾದ್ಯಂತ ಕರಡಿ ಚಿರತೆಗಳಿಂದ ಜನರು ತೊಂದರೆ ಅನುಭವಿಸುತ್ತಲೇ ಇದ್ದಾರೆ ಆದರಿಂದ ಜಿಲ್ಲೆಯಲ್ಲಿಯೇ ಅರವಳಿಕೆ ತಜ್ಞರು ಇದ್ದರೆ ಹೆಚ್ಚು ಸಹಾಯವಾಗಲಿದೆ. ಈಗ ತುಮಕೂರು-ಹಾಸನ ಸೇರಿ ಡಾ.ಮುರುಳಿ ಒಬ್ಬರೇ ಅರವಳಿಕೆ ತಜ್ಞರಿದ್ದಾರೆ. ತುಮಕೂರು ಡಿವಿಜನ್‌ಗೆ ಅರವಳಿಕೆ ತಜ್ಞರಿದ್ದರೆ ಹೆಚ್ಚು ಅನುಕೂಲವಾಗಲಿದೆ. ಸರ್ಕಾರ ಈ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇಲ್ಲಿನ ಜನ ಪ್ರತಿನಿಧಿಗಳು ಈ ಬಗ್ಗೆ ಸರ್ಕಾರದ ಮೇಲೆ ಹೆಚ್ಚು ಒತ್ತಡ ಹಾಕುವುದು ಅಗತ್ಯವಾಗಿದೆ.
ಅರವಳಿಕೆ ತಜ್ಞರ ನೇಮಿಸಿ: ಕಳೆದ ನಾಲ್ಕು ತಿಂಗಳಿನಿಂದ ಚಿರತೆಯ ಉಪಟಳ ತೀವ್ರವಾಗಿದೆ. ಈ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಭಾರಿ ಶ್ರಮಿಸುತ್ತಿದೆ. ಅರವಳಿಕೆ ತಜ್ಞ ವೈದ್ಯರು ಜಿಲ್ಲೆಗೆ ಆಗಮಿಸಿದ್ದಾರೆ, ಜಿಲ್ಲೆಯಲ್ಲಿ ಅರಣ್ಯ ಪ್ರದೇಶದ ವ್ಯಾಪ್ತಿ ಹೆಚ್ಚಾಗಿದೆ, ಚಿರತೆ, ಕರಡಿಗಳ ಸಂಖ್ಯೆಯೂ ಹೆಚ್ಚುತ್ತಿದೆ, ಆನೆಗಳು ಆಗಾಗ್ಗೆ ಬರುತ್ತಿವೆ, ಇಂತಹ ವೇಳೆಯಲ್ಲಿ ಅವುಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸೆರೆ ಹಿಡಿಯಲು ಅರವಳಿಕೆ ತಜ್ಞರ ಅವಶ್ಯಕತೆ ಇದೆ, ಜಿಲ್ಲೆಗೆ ಅವರನ್ನು ನೇಮಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿ ಎನ್ನುವುದು ಜಿಲ್ಲೆಯ ಜನರ ಒತ್ತಾಯ.
ತುಮಕೂರು ತಾಲೂಕು ಆನೆಗಳ ಕಾರಿಡಾರ್ ಆಗಿದ್ದು, ಇಲ್ಲಿ ಆಗ್ಗಿಂದಾಗೆ ಕಾಡಾನೆಗಳು ಬರುತ್ತವೆ. ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಕರಡಿ, ಚಿರತೆ ಸೇರಿದಂತೆ ಅನೇಕ ಪ್ರಾಣಿಗಳಿವೆ. ಇತ್ತೀಚೆಗೆ ಚಿರತೆಗಳು ನಗರ ಗ್ರಾಮಗಳಿಗೆ ಬರುತ್ತಿರುವುದು ಸಾಮಾನ್ಯವಾಗಿದೆ. ಈ ಪ್ರಾಣಿಗಳು ಕಾಡು ಬಿಟ್ಟು ಏಕೆ ನಗರಗಳಿಗೆ ಬರುತ್ತಿವೆ? ಚಿರತೆಗಳ ಸಂಖ್ಯೆ ಹೆಚ್ಚಿವೆ, ಕಾಡು ಪ್ರಾಣಿಗಳು ನಗರಕ್ಕೆ ಬಂದಾಗ ಅರವಳಿಕೆ ತಜ್ಞರನ್ನು ನಾವು ಹಾಸನ ಹಾಗೂ ಬನ್ನೇರುಘಟ್ಟ ಅರಣ್ಯ ಪ್ರದೇಶದಿಂದ ಕರೆಸಬೇಕು, ತುಮಕೂರು ಡಿವಿಜನ್‌ಗೆ ಅರವಳಿಕೆ ತಜ್ಞರನ್ನು ಸರ್ಕಾರ ನೀಡಿದರೆ ಸಹಕಾರಿಯಾಗುತ್ತದೆ. -ಎಚ್.ಸಿ.ಗಿರೀಶ್, ಉಪ ವಲಯ ಅರಣ್ಯಾಧಿಕಾರಿ ತುಮಕೂರು. ಜಿಲ್ಲೆಯಲ್ಲಿ ನಾಲ್ವರನ್ನು ಬಲಿ ಪಡೆದಿರುವ ನರಹಂತಕ ಚಿರತೆ ಶೂಟೌಟ್‌ಗೆ ಸರ್ಕಾರದ ಯಾವುದೇ ಆದೇಶ ಬಂದಿಲ್ಲ. ಈಗ ಚಿರತೆಯನ್ನು ಸೆರೆ ಹಿಡಿಯಲು ಬೋನ್‌ಗಳನ್ನು ಹೆಚ್ಚಿಸಿದ್ದೇವೆ. 30 ಜನ ಅರಣ್ಯ ರಕ್ಷಕರು, ಮಣಿಕುಪ್ಪೆ, ಬೈಚೇನಹಳ್ಳಿ, ಸಿ.ಎಸ್ ಪುರ ಗಡಿಭಾಗಗಳಲ್ಲಿ ಬೀಡು ಬಿಟ್ಟಿದ್ದಾರೆ. ಎಲ್ಲಾ ಕಡೆ ಕ್ಯಾಮೆರಾ ಅಳವಡಿಸಿದ್ದೇವೆ. ಮೂವರು ಅರವಳಿಕೆ ತಜ್ಞರು ಸ್ಥಳಕ್ಕಾಗಮಿಸಿದ್ದಾರೆ. ಚಿರತೆಯನ್ನು ಸೆರೆ ಹಿಡಿಯಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ.
-ನಟರಾಜ್, ವಲಯ ಅರಣ್ಯಾಧಿಕಾರಿ ತುಮಕೂರು ನಗರಕ್ಕೆ ಕರಡಿ, ಆನೆ, ಚಿರತೆಗಳು ಬರುವುದು ಸಾಮಾನ್ಯವಾಗಿದೆ. ಇವುಗಳನ್ನು ನಿಯಂತ್ರಿಸಲು ಇಲ್ಲಿಯ ಅರಣ್ಯ ಅಧಿಕಾರಿಗಳಿಂದ ಸಾಧ್ಯವಾಗುತ್ತಿಲ್ಲ. ಅವುಗಳಿಗೆ ಅರವಳಿಕೆ ಚುಚ್ಚುಮದ್ದು ನೀಡಬೇಕು, ಅದು ತುಮಕೂರಿನಲ್ಲಿಯೇ ಲಭ್ಯವಾಗುವಂತಿರಬೇಕು ಈ ಬಗ್ಗೆ ಸರ್ಕಾರ ಗಮನಹರಿಸಿ ತುಮಕೂರು ಅರಣ್ಯ ಇಲಾಖೆಗೆ ಅರವಳಿಕೆ ತಜ್ಞರನ್ನು ನೇಮಕ ಮಾಡಲಿ.
-ಶ್ರೀನಾಥ, ತುಮಕೂರು * ಚಿ.ನಿ. ಪುರುಷೋತ್ತಮ್