Advertisement

ಒಳನಾಡು ಮೀನುಗಾರಿಕೆಗೆ ಜಿಲ್ಲೆ ಪರಿಸರ ಸೂಕ್ತ

03:25 PM Nov 15, 2021 | Team Udayavani |

ಬೀದರ: ಒಳನಾಡು ಮೀನುಗಾರಿಕೆಗೆ ಬೀದರ ಜಿಲ್ಲೆ ಸೂಕ್ತ ಪರಿಸರವಿದ್ದು, ಜೊತೆಗೆ ಇಲಾಖೆಯ ಹಲವಾರು ಯೋಜನೆಗಳ ಲಾಭ ಮೀನುಗಾರರು ಪಡೆಯಬಹುದಾಗಿದೆ ಎಂದು ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಡಾ| ಬಿ. ಮಲ್ಲೇಶ ಹೇಳಿದರು.

Advertisement

ಜನವಾಡಾ ಕೆವಿಕೆಯಲ್ಲಿ ಮೀನು ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿರುವರಿಗೆ ಹಮ್ಮಿಕೊಂಡಿದ್ದ “ಸಮಗ್ರ ಮೀನು ಕೃಷಿ’ ಕುರಿತು ಒಂದು ದಿನದ ತರಬೇತಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮೀನು ಸಾಕಾಣಿಕೆ ಆರಂಭಿಸುವ ಹಾಗೂ ಈಗಾಗಲೆ ಮೀನು ಸಾಕಾಣಿಕೆ ಕೈಗೊಳ್ಳುತ್ತಿರುವ ರೈತರಿಗೆ ಇರುವ ಯೋಜನೆಯಲ್ಲಿ ಪ್ರತಿ ಹೆಕ್ಟೇರ್‌ ಪ್ರದೇಶಕ್ಕೆ 2.5 ಲಕ್ಷ ಸಹಾಯ ಧನದಲ್ಲಿ ಹೊಂಡ, ಬಲೆ, ಹರಿಗೋಲು, ಮೀನು ಮಾರಾಟಕ್ಕಾಗಿ ದ್ವಿಚಕ್ರ, ತ್ರಿಚಕ್ರ ಮುಂತಾದ ಸೌಲಭ್ಯಗಳಿದ್ದು, ಅದರ ಸದುಪಯೋಗ ಪಡೆಯಬೇಕೆಂದರು.

ಒಳನಾಡು ಮೀನುಗಾರಿಕೆಯಿಂದ ಲಕ್ಷಾಂತರ ಜನರು ಮೀನು ಕಸುಬನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ. ಅದರಲ್ಲಿಯೂ ಗ್ರಾಮೀಣ ಪ್ರದೇಶದಲ್ಲಿ ಪ್ರಮುಖವಾಗಿ ಸಮುದಾಯ ಕೆರೆಗಳು, ಜಲಾನಯದ ಕೃಷಿಹೊಂಡ, ತಡೆ ಅಣೆಕಟ್ಟು, ಗೋಕಟ್ಟಿ, ಬೋರ್‌ವೆಲ್‌ ಆಧಾರಿತ ನೀರು ಸಂಗ್ರಹಣ ಕೊಳಗಳು, ನೀರಾವರಿಯ ತೆರೆದ ಬಾವಿಗಳು ತಗ್ಗು ಪ್ರದೇಶದ ಹಳ್ಳ-ಕೊಳ್ಳಗಳು ಮತ್ತು ಕೃಷಿ ಹೊಂಡಗಳು ಮುಂತಾದವು ಜಲ ಕೃಷಿ ಮಾಡಲು ಉತ್ತಮ ಜಲಸಂಪನ್ಮೂಲವಾಗಿವೆ ಎಂದು ಹೇಳಿದರು.

ಕೆವಿಕೆ ವಿಜ್ಞಾನಿ ಡಾ| ಅಕ್ಷಯಕುಮಾರ ಮಾತನಾಡಿ, ಆರೋಗ್ಯದ ದೃಷ್ಟಿಯಿಂದ ಮೀನು ಒಂದು ಉತ್ತಮ ಪೌಷ್ಟಿಕ ಆಹಾರವಾಗಿದ್ದು, ಇತರೆ ಮಾಂಸಗಳಿಗಿಂತ ಬೇಗ ಪಚನ ಕ್ರಿಯೆ ಆಗುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಓಮೇಗ 3 ಗುಂಪಿನ ಮೆದೂ ಆಮ್ಲವಿದ್ದು, ಇವುಗಳು ವೃದ್ಧಾಪ್ಯಕೆ ಸಂಬಂಧಿಸಿದ ಸ್ನಾಯು ಕ್ಷಿಣತೆ ಹಾಗೂ ದೃಷ್ಟಿ ದುರ್ಬಲತೆಗಳನ್ನು ಕಡಿಮೆಗೊಳಿಸುತ್ತದೆ. ಖನಿಜಾಂಶಗಳು ಅಧಿಕ ಪ್ರಮಾಣದಲ್ಲಿ ದೊರೆಯುತ್ತವೆ. ಗ್ರಾಮೀಣ ಪ್ರದೇಶದಲ್ಲಿ ಮೀನು ಸಾಕಣೆಯನ್ನು ಕೈಗೊಂಡರೆ ನಿರುದ್ಯೋಗ ಸಮಸ್ಯೆ ಕಡಿಮೆ ಮಾಡುವ ಜೊತೆಗೆ ಉತ್ತಮ ಪೌಷ್ಟಿಕ ಆಹಾರವನ್ನು ಪಡೆಯಬಹುದಾಗಿದೆ ಎಂದರು.

ಕೆವಿಕೆ ಮುಖ್ಯಸ್ಥ ಡಾ| ಸುನೀಲಕುಮಾರ ಎನ್‌.ಎಂ. ಮಾತನಾಡಿ, ಕೃಷಿ ಉದ್ಯಮದಂತೆ ಕಡಿಮೆ ಖರ್ಚಿನಲ್ಲಿ ಮಾಡಬಹುದಾದ ಮೀನು ಕೃಷಿ ರೈತರಿಗೆ ಹೆಚ್ಚು ಲಾಭದಾಯಕವಾಗಲಿದೆ. ಈಗಾಗಲೇ ಒಳನಾಡು ಮೀನುಗಾರಿಕೆ ಹೆಚ್ಚು ಜನಪ್ರಿಯ ಪಡೆಯುತ್ತಿದ್ದು, ಮಿಶ್ರ ಬೆಳೆಯಂತೆ ಮಿಶ್ರ ಮೀನು ಸಾಕಾಣಿಕೆ ಹೆಚ್ಚಿನ ಲಾಭದಾಯಕ ಎಂದು ತಿಳಿಸಿದರು.

Advertisement

ಸಹಾಯಕ ಪ್ರಾಧ್ಯಾಪಕರಾದ ಡಾ| ಪ್ರದೀಪ ಎಲ್‌.ಡಿ. ಮತ್ತು ಡಾ| ಕಿರಣ ಎಂ. ಮಾತನಾಡಿ, ಮೀನಿನ ಅನುವಂಶಿಯ ಬದಲಾವಣೆಯ ಮಟ್ಟವು ಮೀನುಮರಿ ಉತ್ಪಾದನಾ ಕೇಂದ್ರದಲ್ಲಿ ಪಾಲಿಸುವ ಸಂತಾನೋತ್ಪತ್ತಿಯ ವಿಧಾನಗಳು ಹಾಗೂ ಮೂಲ ವಂಶದ ಪ್ರೌಢಾವಸ್ಥೆ ಮೀನಿನ ನಿರ್ವಹಣೆಯ ಆಧಾರದ ಮೇಲೆ ಅವಲಂಬಿಸಿರುತ್ತದೆ. ಪ್ರೌಢ ಮೀನುಗಳ ನಿರ್ವಹಣೆ ಪರಿಣಾಮಕಾರಿಯಾಗದಿದ್ದಲ್ಲಿ ನಕಾರಾತ್ಮಕ ಗುಣಗಳಾದ ಕುಂಠಿತ ಬೆಳವಣಿಗೆ, ರೋಗ ನಿರೋಧಕಶಕ್ತಿ ಕಡಿಮೆಯಾಗುವುದು, ಫಲಭರಿತತೆಯಲ್ಲಿ ಕುಂಠಿತ ಮುಂತಾದ ಪರಿಣಾಮಗಳು ಕಂಡುಬರುತ್ತವೆ ಎಂದು ಹೇಳಿದರು.

ಡಾ| ಗೌತಮ, ಡಾ| ಜಾನವಿ, ಡಾ| ಗಣೇಶ ಇನ್ನಿತರರಿದ್ದರು. ವಿಜ್ಞಾನಿಗಳಾದ ಡಾ| ಮಲ್ಲಿಕಾರ್ಜುನ ನಿಂಗದಳ್ಳಿ ನಿರೂಪಿಸಿದರು. ಡಾ| ಆರ್‌.ಎಲ್‌. ಜಾಧವ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next