Advertisement
ಜಿಲ್ಲೆಯ ಸವಣೂರಿನಲ್ಲಿ ಕಳೆದ 2020ರ ಮೇ 5ರಂದು ಮೊದಲ ಕೇಸ್ ಕಾಣಿಸಿಕೊಂಡು 20 ತಿಂಗಳ ಕಾಲ ಜನರನ್ನು ಸಂಕಷ್ಟಕ್ಕೆ ತಳ್ಳಿದ್ದ ಕೊರೊನಾ ಸೋಂಕಿನ ಪ್ರಕರಣಗಳು ಶೂನ್ಯಕ್ಕೆ ಇಳಿದಿದ್ದು, ಸದ್ಯ ಜಿಲ್ಲೆ ಕೊರೊನಾ ಮುಕ್ತವಾಗಿದೆ. ಇದುವರೆಗೆ 22,215 ಜನರಿಗೆ ಸೋಂಕು ತಗುಲಿ, 650 ಜನರನ್ನು ಬಲಿ ತೆಗೆದುಕೊಂಡು ಆರ್ಥಿಕತೆಯನ್ನೇ ಕೊರೊನಾ ಬುಡಮೇಲು ಮಾಡಿತ್ತು. ಒಂದು ಮತ್ತು ಎರಡನೇ ಅಲೆಯಿಂದ ಜಿಲ್ಲೆಯನ್ನು ತಲ್ಲಣಗೊಳಿಸಿತ್ತು. ಈಗ ಎಲ್ಲೆಡೆ ಓಮೆಕ್ರಾನ್ ಒಕ್ಕರಿಸಿದ್ದರೆ, ಜಿಲ್ಲೆಯಲ್ಲಿ ಸದ್ಯ ಕೈಗೊಂಡಿರುವ ಕ್ರಮಗಳಿಂದಾಗಿ ಕೊರೊನಾ ನಿಯಂತ್ರಣದಲ್ಲಿದೆ.
Related Articles
Advertisement
ಆಕ್ಸಿಜನ್ ಕೊರತೆ, ಸಕಾಲದಲ್ಲಿ ವೈದ್ಯಕೀಯ ಸೇವೆ ದೊರೆಯದೇ ಇರುವುದು, ಸೋಂಕು ತಗಲಿದರೂ ಆಸ್ಪತ್ರೆಗೆ ಬಾರದಿರುವುದು ಸೇರಿದಂತೆ ವಿವಿಧ ಕಾರಣಗಳಿಂದ ಜನರು ಕೊರೊನಾದಿಂದ ತತ್ತರಿಸಿದ್ದರು. ಸಾವಿನ ಪ್ರಮಾಣ ಹೆಚ್ಚಾಗಲು ಕಾರಣ ಹುಡುಕಲೆಂದೇ ತಜ್ಞರ ಸಮಿತಿ ರಚಿಸಲಾಗಿತ್ತು. ತಜ್ಞರ ಸಮಿತಿ ವರದಿ ನೀಡಿತ್ತು. ಆದರೂ, ಸಾವಿನ ಸಂಖ್ಯೆ ಏರುತ್ತಲೇ ಇತ್ತು. ಅಂತೂ ಈಗ ಸಾವಿನ ಸರಣಿಗೆ ಬ್ರೇಕ್ ಬಿದ್ದಂತಾಗಿದೆ.
650 ಜನರು ಬಲಿ: ಜಿಲ್ಲೆಯ ಹಾವೇರಿ ಜಿಲ್ಲಾಸ್ಪತ್ರೆಯಲ್ಲೇ 194 ಜನರು ಕೊರೊನಾದಿಂದ ಗುಣಮುಖರಾಗದೇ ಕೊನೆಯುಸಿರೆಳೆದಿದ್ದಾರೆ. ಬ್ಯಾಡಗಿ ತಾಲೂಕಿನಲ್ಲಿ 59, ಹಾನಗಲ್ಲ ತಾಲೂಕಿನಲ್ಲಿ 69, ರಾಣೆಬೆನ್ನೂರು 144, ಹಿರೇಕೆರೂರು 78, ಸವಣೂರು 42, ಶಿಗ್ಗಾವಿ 57 ಹಾಗೂ ಇತರೆ 7 ಜನರು ಸೇರಿದಂತೆ 650 ಜನರು ಕೊರೊನಾಕ್ಕೆ ಬಲಿಯಾಗಿದ್ದಾರೆ. ಸದ್ಯ ಜಿಲ್ಲೆ ಕೊರೊನಾ ಮುಕ್ತಗೊಂಡಿದ್ದು, ಸಂಭಾವ್ಯ ಮೂರನೇ ಅಲೆ ಬಗ್ಗೆ ಆತಂಕ ಎದುರಾಗಿದೆ. ಜಿಲ್ಲೆಯಲ್ಲಿ ಸರ್ಕಾರ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಮೂಲಕ ಸಂಭವನೀಯ ಕೊರೊನಾ 3ನೇ ಅಲೆ ನಿಯಂತ್ರಿಸಲು ಜಿಲ್ಲಾಡಳಿತ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಬೇಕಿದೆ.
ಮೈ ಮರೆಯುತ್ತಿರುವ ಜನರಾಜ್ಯದಲ್ಲಿ ಮತ್ತೆ ಕೊರೊನಾ ಮೂರನೇ ಅಲೆಯ ಆತಂಕ ಶುರುವಾಗಿದೆ. ಇದರ ನಿಯಂತ್ರಣಕ್ಕೆ ಸರ್ಕಾರ ಈಗಾಗಲೇ ಕಟ್ಟುನಿಟ್ಟಿನ ಮಾರ್ಗಸೂಚಿ ಜಾರಿಗೊಳಿಸಿದೆ. ಆದರೆ, ಜಿಲ್ಲೆಯ ಜನರು ಮಾಸ್ಕ್, ಸಾಮಾಜಿಕ ಅಂತರವನ್ನು ಸಂಪೂರ್ಣವಾಗಿ ಮರೆತಿದ್ದಾರೆ. ಕೊರೊನಾ ದೂರವಾಯಿತು ಎಂದು ಮಾಸ್ಕ್ ಧರಿಸುವುದನ್ನು ಜನರು ಕೈಬಿಟ್ಟಿದ್ದಾರೆ. ಪೊಲೀಸರು ಸಹ ಸರ್ಕಾರದ ನಿಯಮಗಳನ್ನು ಪಾಲಿಸಲು ಜನರಿಗೆ ಅರಿವು ಮೂಡಿಸುತ್ತಿಲ್ಲ, ಜನತೆ ಈಗಲೇ ಎಚ್ಚೆತ್ತುಕೊಂಡು ಕೊರೊನಾ ಸೋಂಕು ಮತ್ತೆ ಜಿಲ್ಲೆಗೆ ಕಾಲಿಡದಂತೆ ನೋಡಿಕೊಳ್ಳಲು ಮುಂದಾಗಬೇಕಿದೆ.