Advertisement

ಜಿಲ್ಲೆಯ 1,106 ಹೆಕ್ಟೇರ್‌ ಪ್ರದೇಶ ಇನ್ನು ಹಚ್ಚಹಸುರು

11:31 AM Jun 29, 2019 | sudhir |

ಉಡುಪಿ: ಜಲವರ್ಷ ಆಚರಣೆ ಹಿನ್ನೆಲೆಯಲ್ಲಿ ಸರಕಾರ ಪ್ರತೀ ಗ್ರಾಮ ಪಂಚಾಯತ್‌ವ್ಯಾಪ್ತಿಯಲ್ಲಿ ಕನಿಷ್ಠ 500 ಗಿಡಗಳನ್ನು ಬೆಳೆಸಲು ಸೂಚನೆ ನೀಡಿದೆ. ಅದರಂತೆ ಜಿಲ್ಲೆಯಲ್ಲಿ ಈ ಬಾರಿಯ ಮಳೆಗಾಲದಲ್ಲಿ 1,106 ಹೆಕ್ಟೇರ್‌ ಪ್ರದೇಶದಲ್ಲಿ ಗಿಡ ನೆಡುವುದಕ್ಕೆ ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

Advertisement

ಪಂಚಾಯತ್‌ ರಾಜ್‌ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತು ಅರಣ್ಯ ಇಲಾಖೆ, ಜಿಲ್ಲಾ ಪಂಚಾಯತ್‌ ಸಾಮಾಜಿಕ ಅರಣ್ಯ ವಿಭಾಗ ಸಹಯೋಗದಲ್ಲಿ ಜಲವರ್ಷ ಆಚರಣೆ ನಡೆಯುತ್ತಿದ್ದು, ಕೆರೆ ಹೂಳೆತ್ತುವಿಕೆ ಮತ್ತು ಗಿಡಗಳನ್ನು ಬೆಳೆಸಲು ಆದ್ಯತೆ ನೀಡಲಾಗಿದೆ. ಉದ್ಯೋಗ ಖಾತ್ರಿ ಯೋಜನೆ, ಸಣ್ಣ ನೀರಾವರಿ ಇಲಾಖೆ, ಅರಣ್ಯ ಇಲಾಖೆ, 14ನೇ ಹಣಕಾಸು ಯೋಜನೆಯ ಅನುದಾನಗಳನ್ನು ಇದಕ್ಕೆ ಬಳಸಿಕೊಳ್ಳಬಹುದಾಗಿದೆ. ಜಿಲ್ಲೆಯ 158 ಗ್ರಾ.ಪಂ.ಗಳಲ್ಲಿ ತಲಾ 500 ಗಿಡಗಳಂತೆ ಕನಿಷ್ಠ 79 ಸಾವಿರ ಗಿಡಗಳನ್ನು ಬೆಳೆಸಲು ಚಿಂತನೆ ನಡೆಸಲಾಗಿದೆ.

ಸಾಮಾಜಿಕ ಅರಣ್ಯ ವಿಭಾಗದಿಂದ 1.69 ಲಕ್ಷ ಗಿಡ
ಜಿ.ಪಂ. ಸಾಮಾಜಿಕ ಅರಣ್ಯ ವಿಭಾಗದಲ್ಲಿ 1.69 ಲಕ್ಷ ಗಿಡಗಳನ್ನು ಬೆಳೆಸಲಾಗಿದ್ದು, ಗ್ರಾ.ಪಂ.ಗಳಿಗೆ ಇದನ್ನು ವಿತರಿಸಲಾಗುತ್ತದೆ. ಹಸಿರು ಕರ್ನಾಟಕ ಯೋಜನೆಯಲ್ಲಿ 71,500 ವಿವಿಧ ಜಾತಿಯ ಗಿಡಗಳು ಹಾಗೂ 1,500 ಶ್ರೀಗಂಧ ಸಹಿತ 79 ಸಾವಿರ ಗಿಡಗಳು ವಿತರಣೆಯಾಗಲಿವೆ. 23 ಕಿ.ಮೀ. ರಸ್ತೆ ಬದಿ ನೆಡುತೋಪು ನಿರ್ಮಿಸಲಾಗುತ್ತದೆ. ಇದಕ್ಕಾಗಿ ನೆಡಲು 22,500 ಸಸಿಗಳನ್ನು ತಯಾರಿಸಲಾಗಿದೆ.

13 ಲಕ್ಷ ಸಸಿಗಳು
ಕುಂದಾಪುರ ಅರಣ್ಯ ವಿಭಾಗದಲ್ಲಿ 2019-20ನೇ ಸಾಲಿಗೆ ವಿವಿಧ ಯೋಜನೆಗಳಡಿ 8 ಅರಣ್ಯ ವಲಯಗಳಲ್ಲಿ ಒಟ್ಟು 1,106 ಹೆಕ್ಟೇರ್‌ ಪ್ರದೇಶದಲ್ಲಿ (ಬ್ಲಾಕ್‌ ನೆಡುತೋಪು) ನಾಟಿ ಮಾಡಲು 10.45 ಲಕ್ಷ ಸಸಿಗಳನ್ನು ಬೆಳೆಸಲಾಗಿದೆ. ಅದಲ್ಲದೇ 25 ಕಿ.ಮೀ. ವ್ಯಾಪ್ತಿಯಲ್ಲಿ ರಸ್ತೆ ಬದಿ ನೆಡುತೋಪು ನಿರ್ಮಾಣಕ್ಕೆ ತಯಾರಿ ನಡೆದಿದ್ದು, ಇದಕ್ಕಾಗಿ ಪ್ರತ್ಯೇಕ 7,500 ಗಿಡ, ಸಾರ್ವಜನಿಕರು ಮತ್ತು ರೈತರಿಗೆ ವಿತರಣೆಗಾಗಿ 2.5 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ಬೆಳೆಸಲಾಗಿದೆ. ಕುಂದಾಪುರ ಅರಣ್ಯ ವಿಭಾಗ ವ್ಯಾಪ್ತಿಯಲ್ಲಿ ಒಟ್ಟು 13,22,500 ಸಸಿಗಳನ್ನು ನೆಡುವ ಕಾರ್ಯಕ್ರಮ ರೂಪುಗೊಂಡಿದೆ.

Advertisement

ಯಾವೆಲ್ಲ ಸಸಿಗಳಿವೆ?
ಎಂಟು ಸಸ್ಯಕ್ಷೇತ್ರಗಳಲ್ಲಿ ನೆಲ್ಲಿ, ಪುನರ್‌ ಪುಳಿ, ಮುತ್ತುಗ, ಶ್ರೀಗಂಧ, ಸಂಪಿಗೆ, ಮುರಿಯ, ರೆಂಜ, ದಾಳಿಂಬೆ, ಕಹಿಬೇವು, ದೂಪ, ಬೇಂಗ, ಹೆಬ್ಬಲಸು, ವಾಟೆಹುಳಿ, ಹಲಸು, ಮಾವು, ಬಿದಿರು, ದಾಲಿcನಿ, ನೇರಳೆ, ಬೆತ್ತ, ಸಾಗುವಾನಿ, ರಕ್ತಚಂದನ, ಮಹಾಗನಿ, ದಾಲಿcನಿ, ಬಾದಾಮಿ, ಕಿರಾಲುಬೋಗಿ, ರಾಂಪತ್ರೆ, ಹೆಬ್ಬೇವು, ಅಂಟುವಾಳ, ಹೊಂಗೆ, ನಾಗಲಿಂಗ ಪುಷ್ಪ, ಹೊಳೆ ದಾಸವಾಳ, ಕಕ್ಕೆ, ಬೀಟೆ, ಅಶೋಕ, ಬಿಲ್ವಪತ್ರೆ, ಇತ್ಯಾದಿ ಗಿಡಗಳನ್ನು ಬೆಳೆಸಲಾಗಿದೆ.

ಪ್ರಕ್ರಿಯೆಗೆ ಚಾಲನೆ
ಜಿಲ್ಲೆಯ ಪ್ರತೀ ಗ್ರಾ.ಪಂ.ಗಳಲ್ಲೂ 500 ಗಿಡಗಳನ್ನು ನೆಡುವ ಪ್ರಕ್ರಿಯೆ ಆರಂಭಗೊಂಡಿದೆ. ಜಲಾಮೃತ ಯೋಜನೆಯಡಿ ಇನ್ನೂ ಹಲವಾರು ಕಾರ್ಯಕ್ರಮಗಳು ಜಿಲ್ಲೆಯಲ್ಲಿ ಅನುಷ್ಠಾನವಾಗಲಿವೆ.
-ಸಿಂಧೂ ಬಿ.ರೂಪೇಶ್‌, ಜಿ.ಪಂ. ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next