Advertisement

ಸಭೆ ನಡೆಸಿ ಜಿಲ್ಲಾಧಿಕಾರಿ ಸಮಸ್ಯೆ ಆಲಿಸಲಿ

03:16 PM Dec 04, 2018 | Team Udayavani |

ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯ ಕೊಳಗೇರಿ ನಿವಾಸಿಗಳ ಕುಂದುಕೊರತೆ ನಿವಾರಣೆ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆಗೆ ಒತ್ತಾಯಿಸಿ ಸ್ಲಂ ಜನಾಂದೋಲನ, ಸಾವಿತ್ರ ಬಾ ಫುಲೆ ಮಹಿಳಾ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಲಾಯಿತು.

Advertisement

ಮಹಾನಗರ ಪಾಲಿಕೆ ವ್ಯಾಪ್ತಿಯ ಅನೇಕ ಕೊಳಚೆ ಪ್ರದೇಶದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅನೇಕ ಕೊಳಚೆ ಪ್ರದೇಶಗಳಲ್ಲಿ ಕುಡಿಯುವ ನೀರು, ಚರಂಡಿ, ಒಳ ಚರಂಡಿ, ಶೌಚಾಲಯ, ಬೀದಿ ದೀಪ… ಒಳಗೊಂಡಂತೆ ಯಾವುದೇ ಮೂಲಭೂತ ಸೌಲಭ್ಯಗಳೇ ಇಲ್ಲ. ಸ್ವತ್ಛ, ನಿರ್ಮಲ ದಾವಣಗೆರೆ ನಿರ್ಮಾಣ ಮಾಡಲಾಗುವುದು ಎಂದು ಹೇಳಲಾಗುತ್ತದೆ. ವೈಯಕ್ತಿಕ ಶೌಚಾಲಯಗಳಿಗೆ ಒಂದು ಕಂತಿನ ಅನುದಾನ ಬಿಡುಗಡೆಯಾಗದೆ ಕಾಮಗಾರಿ ಅರೆಬರೆ ಸ್ಥಿತಿಯಲ್ಲಿದೆ ಎಂದು ಪ್ರತಿಭಟನಾಕಾರರು ದೂರಿದರು.

ವಾಜಪೇಯಿ ಮತ್ತು ಅಂಬೇಡ್ಕರ್‌ ವಸತಿ ಯೋಜನೆಯಡಿ ಮನೆಗೆ ಅರ್ಜಿ ಸಲ್ಲಿಸಿ ಒಂದು ವರ್ಷ ಕಳೆದಿದೆ. ಈವರೆಗೆ ಮಂಜೂರಾತಿ ಸಿಕ್ಕಿಲ್ಲ. ಕೆಲ ಮನೆಗಳ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. ಆದರೆ, ಡೂಪ್ಲಿಕೇಷನ್‌ ನೆಪವೊಡ್ಡಿ ಹಣ ಬಿಡುಗಡೆ ಮಾಡುತ್ತಿಲ್ಲ. ರಾಜೀವ್‌ ಗಾಂಧಿ ಆವಾಸ್‌
ಯೋಜನೆಯಲ್ಲಿ ಮಂಜೂರಾಗಿರುವ 2,120 ಮನೆಗಳಲ್ಲಿ 800 ಮನೆಗಳ ನಿರ್ಮಾಣಕ್ಕೆ ಅಗತ್ಯವಾಗಿ ಬೇಕಾಗಿರುವ ಅನುದಾನ ಬಿಡುಗಡೆ ಮಾಡಲಾಗುತ್ತಿಲ್ಲ. ವಸತಿಹೀನರ ಸಮಸ್ಯೆ ಹೇಳತೀರದ್ದಾಗಿದೆ. ಜಿಲ್ಲಾಧಿಕಾರಿಗಳು ಕೂಡಲೇ ಸಭೆ ನಡೆಸಿ, ಕೊಳಗೇರಿ ನಿವಾಸಿಗಳ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಕೊಳಚೆ ಪ್ರದೇಶದಲ್ಲಿ ಇರುವಂತಹವರು ಕೂಲಿ ಕೆಲಸ ಮಾಡಿ ಜೀವನ ನಿರ್ವಹಿಸುತ್ತಿದ್ದಾರೆ. ಅನೇಕರು ಬಾಡಿಗೆ ಕಟ್ಟಲಿಕ್ಕೂ ಆಗದ ಸ್ಥಿತಿಯಲ್ಲಿದ್ದಾರೆ. ಒಂದು ಕಡೆ ಜೀವನ ನಿರ್ವಹಣೆ ಇನ್ನೊಂದು ಕಡೆ ಬಾಡಿಗೆ ಕಟ್ಟುವುದು ಕಷ್ಟವಾಗುತ್ತಿದೆ. ಕೊಳಚೆ ಪ್ರದೇಶಗಳಲ್ಲಿ ಬಾಡಿಗೆದಾರರ ಸಂಖ್ಯೆ ಹೆಚ್ಚುತ್ತಾ ಸಾಗುತ್ತಿದೆ. ವಸತಿರಹಿತರ ಸರ್ವೇ ಕಾರ್ಯ ನಡೆದೇ ಇಲ್ಲ. ಜಿಲ್ಲಾಡಳಿತ ಮತ್ತು ಸಂಬಂಧಿತರು ಕೂಡಲೇ ವಸತಿರಹಿತರ ಸರ್ವೇ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಳೆದ 15 ವರ್ಷದ ಹಿಂದೆ ವಿವಿಧ ಯೋಜನೆಯಡಿ ಕಟ್ಟಿಸಲಾಗಿರುವ ಮನೆಗಳು ಉಳ್ಳವರ ಪಾಲಾಗಿವೆ. ಈಗಲಾದರೂ ಅರ್ಹರ ಗುರುತಿಸಿ, ಮನೆ ವಿತರಣೆ ಮಾಡಬೇಕು. ಕೂಡಲೇ ವಸತಿ ಸೌಲಭ್ಯಕ್ಕೆ ಜಿಲ್ಲಾಡಳಿತ ಮುಂದಾಗಬೇಕು ಎಂದು ಒತ್ತಾಯಿಸಿದರು. ಸ್ಲಂ ಜನಾಂದೋಲನ ಜಿಲ್ಲಾ ಸಂಚಾಲಕಿ ರೇಣುಕ ಯಲ್ಲಮ್ಮ ಹಾವೇರಿ, ಕಾರ್ಯಾಧ್ಯಕ್ಷ ಶಬೀರ್‌ಸಾಬ್‌, ಮಲ್ಲೇಶ್‌ ಕುಕ್ಕುವಾಡ, ಸಿ. ಬಸವರಾಜ್‌, ಮಹಮ್ಮದ್‌ ಮೊಸಿನ್‌,
ಮಹಮ್ಮದ್‌ ಹಯಾತ್‌, ಎಚ್‌. ಬಸವರಾಜ್‌, ಜಿ.ಎನ್‌. ಮಲ್ಲೇಶ್‌, ಸೈಯದ್‌ ಸುಹಿಲ್‌ ಬಾಷಾ, ನಾಗರಾಜಪ್ಪ, ಸಾವಿತ್ರಮ್ಮ, ಕಣಿವೆ ಮಾರಕ್ಕ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next