Advertisement

ಯೋಗ ದಿನಾಚರಣೆ ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ

02:10 PM Jun 09, 2022 | Team Udayavani |

ಕೊಪ್ಪಳ: ಜೂ. 21ರಂದು ನಿಗದಿಯಾದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿಕಾಸ ಕಿಶೋರ್‌ ಸುರಳ್ಕರ್‌ ಹೇಳಿದರು.

Advertisement

ಜಿಲ್ಲಾ ಕೇಂದ್ರದಲ್ಲಿ 2022ರ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸುವ ಕುರಿತು ಚರ್ಚಿಸಲು ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಬಾರಿ ಭಾರತ ಸರ್ಕಾರದ ಆಯುಷ್‌ ಮಂತ್ರಾಲಯವು “ಯೋಗ ಫಾರ್‌ ಹುಮ್ಯಾನಿಟಿ’ ಎಂಬ ಆಶಯದಡಿ ಯೋಗ ದಿನವನ್ನು ಆಚರಿಸುತ್ತಿದೆ. ಜನ ಸಾಮಾನ್ಯರಲ್ಲಿ ಯೋಗದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಜೂ. 21ರಂದು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ವ್ಯವಸ್ಥೆ ಮಾಡಬೇಕೆಂದು ಸಲಹೆ ನೀಡಿದರು.

ಜಿಲ್ಲಾ ಆಯುಷ್‌ ಇಲಾಖೆ ಅಧಿಕಾರಿ ಡಾ| ಯಮನಪ್ಪ ಶಿರವಾರ ಮಾತನಾಡಿ, ಜಿಲ್ಲೆಯಲ್ಲಿ ಮೂರು ಪಾರಂಪರಿಕ ಮತ್ತು ಸಾಂಪ್ರದಾಯಿಕ ಸ್ಥಳಗಳನ್ನು ಗುರುತಿಸಿ ಯೋಗ ದಿನಾಚರಣೆ ನಡೆಸಲು ಸೂಚನೆ ಇದ್ದು, ಅದರಂತೆ ಜಿಲ್ಲೆಯಲ್ಲಿ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಮಠದ ಆವರಣದಲ್ಲಿ, ಗಂಗಾವತಿ ತಾಲೂಕಿನ ಆನೆಗುಂದಿ ಅಥವಾ ಅಂಜನಾದ್ರಿ ಬೆಟ್ಟದಡಿಯ ಪ್ರದೇಶದಲ್ಲಿ ಮತ್ತು ಯಲಬುರ್ಗಾ ತಾಲೂಕಿನ ಇಟಗಿ ಗ್ರಾಮದ ಮಹಾದೇವ ದೇವಾಲಯದ ಆವರಣದಲ್ಲಿ ಯೋಗ ದಿನಾಚರಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಯೋಗದ ಬಗ್ಗೆ ಮಕ್ಕಳಲ್ಲಿ ಕೂಡ ಅರಿವು ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಶಾಲಾ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಲು ಆಯಾ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕೂಡಲೇ ಸುತ್ತೋಲೆ ಹೊರಡಿಸಿ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಜೂ. 21ರಂದು ಜಿಲ್ಲೆಯ ಮೂರು ಕಡೆಗಳಲ್ಲಿ ನಡೆಯುವ ಯೋಗ ದಿನಾಚರಣೆ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಬೇಕು. ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಮತ್ತು ಗಣ್ಯರನ್ನು ಶಿಷ್ಠಾಚಾರದಂತೆ ಆಹ್ವಾನಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.

ಜಿಪಂ ಸಿಇಒ ಬಿ. ಫೌಜಿಯಾ ತರನ್ನುಮ್‌ ಮಾತನಾಡಿ, ಯೋಗ ದಿನದಂದು ಭಾಗವಹಿಸುವ ಶಾಲಾ ಮಕ್ಕಳು ಮತ್ತು ಸಾರ್ವಜನಿಕರಿಗೆ ಕುಡಿಯುವ ನೀರು ಮತ್ತು ಇನ್ನಿತರ ಎಲ್ಲವೂ ಸುವ್ಯಸ್ಥಿತವಾಗಿರುವಂತೆ ನೋಡಿಕೊಳ್ಳಬೇಕು. ಯೋಗ ದಿನಾಚರಣೆಯ ಯಶಸ್ಸಿಗೆ ಸಾರ್ವಜನಿಕ ಸಹಭಾಗಿತ್ವ ಬಹುಮುಖ್ಯವಾಗಿದ್ದು, ಯೋಗ ದಿನಾಚರಣೆ ಬಗ್ಗೆ ಹೆಚ್ಚಿನ ರೀತಿಯಲ್ಲಿ ಪ್ರಚಾರ ನಡೆಸಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವ ಹಾಗೆ ನೋಡಿಕೊಳ್ಳಬೇಕು ಎಂದರು.

ವೈದ್ಯಾಧಿಕಾರಿಗಳಾದ ಡಾ| ಗುರುರಾಜ್‌ ಉಮಚಗಿ, ಡಾ| ರಾಜಶೇಖರ ನರನಾಳ, ಡಾ| ವಿ.ಆರ್‌. ತಾಳಿಕೋಟೆ, ಡಾ| ಶರಣಪ್ಪ ಡೈದ್ರಿ, ಡಾ| ಪ್ರಹ್ಲಾದ್‌ ಐಲಿ, ಡಾ| ದೇಶಪಾಂಡೆ, ಡಾ| ಸೋಮಶೇಖರ ನಾಯಕ್‌, ಜಿಲ್ಲಾ ಸಂಖ್ಯಾ ಸಂಗ್ರಹಣಾ ಧಿಕಾರಿ ಕೃಷ್ಣಮೂರ್ತಿ ದೇಸಾಯಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next