ಕೊಲ್ಲೂರು: ಹೆಮ್ಮಾಡಿಯಿಂದ ಕೊಲ್ಲೂರು ವರೆಗಿನ ಮುಖ್ಯ ರಸ್ತೆ ತಿರುವಿನ ಅಪಘಾತ ಸೂಕ್ಷ್ಮ ಪ್ರದೇಶದ ರಸ್ತೆ ಇಕ್ಕೆಲಗಳಲ್ಲಿನ ಭಾರೀ ಗಾತ್ರದ ಮರಗಳ ತೆರವು ಪ್ರಕ್ರಿಯೆಗೆ ಕಾಲಾವಕಾಶ ಬೇಕಿದ್ದು ಕಾನೂನಾತ್ಮಕ ಅಡಚಣೆ ನಿವಾರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಎಂಜಿನಿಯರ್ ಚಂದ್ರಶೇಖರ್ ಅವರು ಸ್ಪಷ್ಟ ಪಡಿಸಿದ್ದಾರೆ.
ಸಂಚಾರಕ್ಕೆ ಅಡ್ಡಿ
ಕೆಲವೊಂದು ಅಪಘಾತ ಸೂಕ್ಷ್ಮಪ್ರದೇಶದ ತಿರುವಿನ ಬಳಿ ಎದ್ದುನಿಂತಿರುವ ಮರವು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ರಸ್ತೆಯ ವಿಸ್ತರಣೆ ಹಾಗೂ ಡಾಮರೀಕರಣ ಕಾಮಗಾರಿ ಪೂರ್ಣ ಗೊಳ್ಳುವ ಮೊದಲು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಮರಗಳ ತೆರವು ಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಲೋಕೋಪಯೋಗಿ ಇಲಾಖೆ ತೆರವು ಕಾರ್ಯದ ಬಗ್ಗೆ ಸಲ್ಲಿಸಿದ ಅರ್ಜಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಅರಣ್ಯ ಹಾಗೂ ಕಂದಾಯ ಇಲಾಖೆಯ ವ್ಯಾಪ್ತಿಗೆ ಸೇರಿದ ಜಾಗದ ಬಗ್ಗೆ ಮಾಹಿತಿ ಸಂಗ್ರಹಿಸಿ ಅನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ಅವರು ಉದಯವಾಣಿಗೆ ಪ್ರತಿಕ್ರಿಯಿಸಿದ್ದಾರೆ.