Advertisement
ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಐ.ಸಿ. ಕೈಲಾಸ್ ಅವರ ಅಧ್ಯಕ್ಷತೆಯಲ್ಲಿ ರೋಟರಿ ಟ್ರಸ್ಟ್ ಹಾಲ್ ನಲ್ಲಿ ನಡೆದ ಸಭೆಯಲ್ಲಿ ಪಕ್ಷದ ರಾಜ್ಯ ಸಂಘಟನ ಕಾರ್ಯದರ್ಶಿ ಅಶ್ರಫ್ ಕಲ್ಲೇಗ ಮಾತನಾಡಿ, ಪಕ್ಷದಲ್ಲಿ ಕೆಲವೊಂದು ಗೊಂದಲಗಳಿದ್ದವು. ಈಗ ನಿವಾರಣೆಯಾಗಿದೆ. ನಾಯಕರೆಲ್ಲ ಒಗ್ಗಟ್ಟಾಗಿದ್ದು ಮುಂದಿನ ಚುನಾವಣೆ ಎದುರಿಸಲು ನಾವೆಲ್ಲ ಸಜ್ಜಾಗಬೇಕು ಎಂದರು.
ಕಾರ್ಯಕರ್ತರ ಅಭಿಪ್ರಾಯ ಕೇಳಿದ ಸಂದರ್ಭ ಸಭೆಯಲ್ಲಿದ್ದ ಕೆಲವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪಕ್ಷದ ಕಾರ್ಯವೈಖರಿ, ಅಧ್ಯಕ್ಷರ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಪದ್ಮಾಮಣಿ ಮಾತನಾಡಿ, ಮಹಿಳಾ ಘಟಕದ ಅಧ್ಯಕ್ಷೆಯಾಗಿದ್ದರೂ ನನಗೆ ಮಾಹಿತಿ ನೀಡದೆ ಅಧ್ಯಕ್ಷರು ನನ್ನ ಸ್ಥಾನ ಬದಲಾಯಿಸಿದ್ದಾರೆ. ವೇದಿಕೆಯಲ್ಲಿ ಕುಳಿತು ನೀವು ನಾಯಕರೆಲ್ಲ ಒಂದಾಗಿದ್ದೇವೆ, ನಮ್ಮಲ್ಲಿ ಗೊಂದಲವಿಲ್ಲ ಎಂದು ಹೇಳಿದರೆ ಸಾಲದು. ಜಿಲ್ಲೆ ಹಾಗೂ ರಾಜ್ಯದ ನಾಯಕರು ಬಂದು ಸಭೆ ನಡೆಸಿ ಸ್ಪಷ್ಟನೆ ನೀಡಬೇಕು ಎಂದರು. ಕಾರ್ಯದರ್ಶಿ ಚಂದ್ರಶೇಖರ ಅಂಚನ್ ಮಾತನಾಡಿ, ಅಧ್ಯಕ್ಷರು ಸಮರ್ಪಕ ಮಾಹಿತಿ ನೀಡುತ್ತಿಲ್ಲ. ನಾನು ಕಾರ್ಯದರ್ಶಿಯಾಗಿದ್ದರೂ ನನಗೆ ಸಭೆ ಆಯೋಜನೆಯ ಮಾಹಿತಿ ಇಲ್ಲ. ನನಗೆ ಹುದ್ದೆ ಕೊಟ್ಟು ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು.
Related Articles
ಅಶ್ರಫ್ ಕೊಟ್ಯಾಡಿ ಮಾತನಾಡಿ, ಕೈಲಾಸ್ ಅವರು ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಎಲ್ಲ ಘಟಕಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದಿದ್ದರು. ಈ ತನಕ ಆಗಿಲ್ಲ. ಕೋರ್ ಕಮಿಟಿಯೂ ರಚಿಸಿಲ್ಲ. ಕೆಲವರನ್ನು ಆಯ್ಕೆ ಮಾಡಿದ್ದರೂ ಅವರಿಗೆ ಲಿಖಿತವಾಗಿ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
Advertisement
ಮಧ್ಯ ಪ್ರವೇಶಿಸಿದ ರಾಜ್ಯ ಜಂಟಿ ಕಾರ್ಯದರ್ಶಿ, ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಇಕ್ಬಾಲ್ ಎಲಿಮಲೆ ಮಾತನಾಡಿ, ಯಾರೂ ವೈಯಕ್ತಿಕವಾಗಿ ಯಾರನ್ನೂ ನೋಯಿಸಬಾರದು. ಹೊಂದಾಣಿಕೆಯಿಂದ ಪಕ್ಷದ ಸಂಘಟನೆಗಾಗಿ ಕೆಲಸ ಮಾಡಬೇಕು. ವಿವಿಧ ಘಟಕಗಳ ಪದಾಧಿಕಾರಿಗಳು ಅಧ್ಯಕ್ಷರೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಪಕ್ಷದೊಳಗೆ ಯಾವುದೇ ಗೊಂದಲಗಳಿಗೆ ಎಡೆ ಮಾಡಿಕೊಡಬಾರದು. ಕ್ಷೇತ್ರದಲ್ಲಿ ಅಧ್ಯಕ್ಷರೇ ಪ್ರಧಾನ ಎಂದು ಹೇಳಿ ಭಿನ್ನಮತಕ್ಕೆ ತೆರೆ ಎಳೆದರು.
ಬೂತ್ ಸಮಿತಿ ರಚಿಸಿತಾಲೂಕಿನ ಪ್ರತಿ ಗ್ರಾಮಗಳಲ್ಲೂ ಬೂತ್ ಸಮಿತಿಗಳನ್ನು ರಚಿಸಬೇಕು. ಬೂತ್ ಮಟ್ಟದ ಕಾರ್ಯಕರ್ತರ ಮತವೇ ಭದ್ರ. ಅವರ ಮತದಿಂದ ಮಾತ್ರವೇ ಪಕ್ಷದ ಮತವನ್ನು ಅಳೆಯಲು ಸಾಧ್ಯ. ಪಕ್ಷಕ್ಕಾಗಿ ಎಲ್ಲ ಘಟಕಗಳ ಪದಾಧಿಕಾರಿಗಳು ಹೊಂದಾಣಿಕೆಯಿಂದ ಕೆಲಸ ಮಾಡಬೇಕು. ಡಿಸೆಂಬರ್‌ನಲ್ಲಿ ಮಂಗಳೂರಿನಲ್ಲಿ ಪಕ್ಷದ ಬೃಹತ್ ಸಮಾವೇಶ ನಡೆಯಲಿದ್ದು, ಈ ಸಮಾವೇಶಕ್ಕೆ ಪ್ರತಿ ವಿಧಾನಸಭಾ ಕ್ಷೇತ್ರಗಳಿಂದ ಕನಿಷ್ಠ 10 ಸಾವಿರ ಕಾರ್ಯಕರ್ತರು ಭಾಗಿಯಾಗಬೇಕು ಎಂದರು. ಶ್ರೇಯಾಂಸ್ ಕುಮಾರ್ ಜೈನ್ ಮಾತನಾಡಿ, ಜೆಡಿಎಸ್ ರೈತರ ಪರವಾಗಿದೆ. ನಾವು ಇತರ ಪಕ್ಷದವರನ್ನು ತೆಗಳಿ ಮತ ಕೇಳುವುದು ಬೇಡ. ಪಕ್ಷದ ಸಾಧನೆ ಹೇಳಿ ಮತ ಪಡೆಯಬೇಕು. ಪಕ್ಷದಲ್ಲಿ ಶಿಸ್ತು ಮುಖ್ಯ. ನಾಯಕರೊಳಗೆ ಅನಗತ್ಯ ಗೊಂದಲಗಳು ಬೇಡ. ಕಾರ್ಯಕರ್ತರರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದರು. ರಾಜ್ಯ ಜಂಟಿ ಕಾರ್ಯದರ್ಶಿ ಇಬ್ರಾಹಿಂ ಗೋಳಿಕಟ್ಟೆ ಮಾತನಾಡಿ, ನಾವು ಭಿನ್ನಮತ ಸೃಷ್ಟಿಸಲು ಸಭೆ ಆಯೋಜಿಸಿಲ್ಲ. ಕಾರ್ಯಕರ್ತರನ್ನು ಅವಮಾನಿಸುವ ಉದ್ದೇಶದಿಂದ ಯಾರ ಸ್ಥಾನವನ್ನೂ ಬದಲಾವಣೆ ಮಾಡಿಲ್ಲ ಎಂದರು. ಅಧ್ಯಕ್ಷತೆ ವಹಿಸಿದ್ದ ಐ.ಸಿ. ಕೈಲಾಸ್ ಮಾತನಾಡಿ, ಪಕ್ಷದ ಸಂಘಟನೆಗಾಗಿ ಆರೋಗ್ಯಪೂರ್ಣ ಚರ್ಚೆಗಳ ಆವಶ್ಯಕತೆಯಿದೆ. ಇಲ್ಲಿ ವೈಯಕ್ತಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಇನ್ನೊಬ್ಬರ ಮೇಲೆ ಗೂಬೆ ಕೂರಿಸಬಾರದು. ಸಂಘಟನೆಗಾಗಿ ಯಾವುದೇ ಟೀಕೆಗಳು ಬಂದರೂ ರಾಜಿ ಮಾಡಿಕೊಂಡಿಲ್ಲ. ಮಹಿಳಾ ಘಟಕದ ಅಧ್ಯಕ್ಷೆಯಾಗಿದ್ದ ಪದ್ಮಮಣಿಯವರನ್ನು ರಾಜ್ಯ ಸಮಿತಿಗೆ ಆಯ್ಕೆ ಮಾಡಿರುವುದರಿಂದ ಅಧ್ಯಕ್ಷ ಸ್ಥಾನವನ್ನು ಬದಲಾವಣೆ ಮಾಡಲಾಗಿದೆ. ಪಕ್ಷ ಯಾರೊಬ್ಬರ ಆಸ್ತಿಯೂ ಅಲ್ಲ. ನನ್ನಿಂದ ಲೋಪವಾಗಿದ್ದರೆ ನನ್ನ ವಿರುದ್ದ ಜಿಲ್ಲೆ ಹಾಗೂ ರಾಜ್ಯದ ನಾಯಕರಿಗೆ ದೂರು ನೀಡಬಹುದು ಎಂದು ಹೇಳಿದರು. ನೆಟ್ಟಣಿಗೆ ಮುಟ್ನೂರು ಗ್ರಾಮ ಸಮಿತಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಅಭಿಪ್ರಾಯ ವ್ಯಕ್ತಪಡಿಸಿದರು. ಅಲ್ಪಸಂಖ್ಯಾಕ ಘಟಕದ ಅಧ್ಯಕ್ಷ ಕರೀಂ ಪಳ್ಳತ್ತೂರು ಉಪಸ್ಥಿತರಿದ್ದರು. ಅಬ್ದುಲ್ ರಹಿಮಾನ್ ಅವರು ಕಾರ್ಯಕ್ರಮ ನಿರೂಪಿಸಿದರು.