Advertisement

ಸಂಸತ್‌ನಲ್ಲಿ ಕಾವೇರಿ ಗದ್ದಲ

06:00 AM Dec 13, 2018 | Team Udayavani |

ನವದೆಹಲಿ: ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಬುಧವಾರ ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ಎಐಎಡಿಎಂಕೆ, ಡಿಎಂಕೆ ಸಂಸದರು ಗಲಾಟೆ ಎಬ್ಬಿಸಿದ್ದಾರೆ. ಇದರ ಜತೆಗೆ ರಫೇಲ್‌ ಡೀಲ್‌, ರಾಮ ಮಂದಿರ ವಿವಾದ ವಿಚಾರಗಳೂ ಪ್ರಸ್ತಾಪವಾಗಿವೆ. ತೀವ್ರ ಗದ್ದಲದ ಹಿನ್ನೆಲೆಯಲ್ಲಿ ಲೋಕಸಭೆಯ ಕಲಾಪ ದಿನದ ಮಟ್ಟಿಗೆ ಮುಂದೂಡಲ್ಪಟ್ಟರೆ, ರಾಜ್ಯಸಭೆ ಕಲಾಪಕ್ಕೆ ಕೊಂಚ ಕಾಲ ಅಡ್ಡಿಯಾಯಿತು. 

Advertisement

ಲೋಕಸಭೆಯಲ್ಲಿ ಕಾಂಗ್ರೆಸ್‌, ಶಿವಸೇನೆ, ಟಿಡಿಪಿ, ಎಐಎಡಿಎಂಕೆ ಸಂಸದರು ಅವರವರ ರಾಜ್ಯಗಳ ಬೇಡಿಕೆಗಳನ್ನು ಮುಂದಿಟ್ಟು ಕೊಂಡು ಗದ್ದಲ ಎಬ್ಬಿಸಿದರು. ಬುಧವಾರ ಲೋಕಸಭೆಯಲ್ಲಿ ಕಲಾಪ ಆರಂಭಿಸುತ್ತಲೇ ಅಗಲಿದ ಗಣ್ಯರಿಗೆ ಅಂತಿಮ ನಮನ ಸಲ್ಲಿಸಲಾಯಿತು. ಪ್ರಶ್ನೋತ್ತರ ಕಲಾಪದ ವೇಳೆ ಶಿವಸೇನೆ ಸಂಸದರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಎಐಎಡಿಎಂಕೆ ಸಂಸದರು ಕಾವೇರಿ ಮುಖಜ ಭೂಮಿಯ ರೈತರ ಹಿತ ಕಾಯಬೇಕು, ಕಾಂಗ್ರೆಸ್‌ ಸಂಸದರು ರಫೇಲ್‌ ಡೀಲ್‌ ವಿರುದ್ಧ ಸಂಸತ್‌ ಸಮಿತಿಯಿಂದ ತನಿಖೆ ನಡೆಸಬೇಕು, ಟಿಡಿಪಿ ಸದಸ್ಯರು ವಿಶಾಖ ಪಟ್ಟಣದಲ್ಲಿ ರೈಲ್ವೇ ವಲಯ ಸ್ಥಾಪಿಸಬೇಕೆಂದು ಒತ್ತಾಯಿಸಿ ಗದ್ದಲ ಎಬ್ಬಿಸಿದರು. ಸ್ಪೀಕರ್‌ ಸುಮಿತ್ರಾ ಮಹಾಜನ್‌ ಸದಸ್ಯರ ಮನವೊಲಿಸಲು ಪ್ರಯತ್ನಿಸಿದರೂ, ಪ್ರಯೋಜನವಾಗಲಿಲ್ಲ. ಮಧ್ಯಾಹ್ನ 12 ಗಂಟೆಯ ಬಳಿಕ ಸದನ ಸಮಾವೇಶಗೊಂಡಾಗಲೂ ಪರಿಸ್ಥಿತಿ ಯಥಾ ಸ್ಥಿತಿ ಇದ್ದ ಕಾರಣ ಲೋಕಸಭೆ ಕಲಾಪವನ್ನು ಗುರುವಾರಕ್ಕೆ ಸ್ಪೀಕರ್‌ ಮುಂದೂಡಿದರು.

ಅಣೆಕಟ್ಟೆ ಸುರಕ್ಷತೆಗೆ ಮಸೂದೆ
ದೇಶದಲ್ಲಿರುವ 5 ಸಾವಿರಕ್ಕೂ ಹೆಚ್ಚು ಅಣೆಕಟ್ಟೆಗಳಿಗೆ ರಕ್ಷಣೆ ಒದಗಿಸುವ ಸಮಗ್ರ ಕಾರ್ಯತಂತ್ರವನ್ನು ಒಳಗೊಂಡ ಮಸೂದೆಯನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಬುಧವಾರ ಮಂಡಿಸಿದೆ. ಈ ಮಸೂದೆ ಅಡಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒಂದೇ ರೀತಿಯ ಆಣೆಕಟ್ಟೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ವಿಪತ್ತಿನ ಸಂದರ್ಭದಲ್ಲಿ ಆಣೆಕಟ್ಟೆಗೆ ಹಾನಿ ಉಂಟಾಗುವುದನ್ನು ತಡೆಯುವ ಕ್ರಮಗಳನ್ನೂ ಇದು ಒಳಗೊಂಡಿದೆ. ಕಾಂಗ್ರೆಸ್‌, ಟಿಡಿಪಿ ಹಾಗೂ ಎಐಎಡಿಎಂಕೆ ಸೇರಿದಂತೆ ವಿವಿಧ ಪಕ್ಷಗಳು ವಿವಿಧ ವಿಚಾರಗಳಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಮಧ್ಯೆಯೇ ಮಸೂದೆಯನ್ನು ಮಂಡಿಸಲಾಯಿತು.

ಸರ್ಕಾರದ ಒಪ್ಪಿಗೆ
ಕರ್ನಾಟಕದ ಗುಲ್ಬರ್ಗಾ ರೈಲು ನಿಲ್ದಾಣದ ಹೆಸರನ್ನು ಕಲಬುರಗಿ ಎಂದು ಬದಲಾಯಿಸುವುದೂ ಸೇರಿ, 5 ರಾಜ್ಯಗಳ ಒಟ್ಟು 22 ಗ್ರಾಮಗಳು, ಪಟ್ಟಣಗಳು ಮತ್ತು ರೈಲ್ವೇ ನಿಲ್ದಾಣಗಳ ಹೆಸರುಗಳನ್ನು ಬದಲಿಸುವಂತೆ ಕೋರಿ ಸಲ್ಲಿಸಿದ್ದ ಪ್ರಸ್ತಾವನೆಗೆ ಕೇಂದ್ರ ಒಪ್ಪಿಗೆ ಸೂಚಿಸಿದೆ. ಇದರ ಜತೆಗೆ 11 ಅರ್ಜಿಗಳು ಕೇಂದ್ರ ಸರ್ಕಾರದ ಬಳಿ ಬಾಕಿ ಇವೆ ಎಂದು ಗೃಹ ಸಚಿವಾಲಯ ಲೋಕಸಭೆಗೆ ಬುಧವಾರ ತಿಳಿಸಿದೆ. ಪ್ರಸ್ತಾವನೆಗಳಲ್ಲಿರುವ 22 ಹಳ್ಳಿ ಅಥವಾ ಪಟ್ಟಣಗಳ ಹೆಸರು ಬದಲಾವಣೆಗೆ ಯಾವುದೇ ಆಕ್ಷೇಪಣೆ ಇಲ್ಲ ಎಂದು 2017ರ ಡಿಸೆಂಬರ್‌ನಲ್ಲಿಯೇ ಕೇಂದ್ರ ಸರ್ಕಾರ ಹೇಳಿತ್ತು.

Advertisement

Udayavani is now on Telegram. Click here to join our channel and stay updated with the latest news.

Next