Advertisement
ಕಾಸರಗೋಡು ಜಿಲ್ಲಾಧಿಕಾರಿ ಕೆ. ಜೀವನ್‌ಬಾಬು ಅವರ ನಿರ್ದೇಶದಂತೆ ಸಮರ್ಪಿಸಿದ ವರದಿಯಲ್ಲಿ ಈ ಬಗ್ಗೆ ಸ್ಪಷ್ಟ ಮಾಹಿತಿ ಇದೆ. ಶಿರಿಯ ಗ್ರಾಮದಲ್ಲಿರುವ ಈ ಕೋಟೆ ಸುಮಾರು ಆರು ಎಕರೆ ಪ್ರದೇಶದಲ್ಲಿ ಚಾಚಿಕೊಂಡಿದೆ. ಕಂದಾಯ ಇಲಾಖೆಯ ಸ್ವಾಧೀನದಲ್ಲಿರುವ ಈ ಕೋಟೆಯನ್ನು ಅಭಿವೃದ್ಧಿ ಪಡಿಸಿ ಪ್ರವಾಸಿ ಕೇಂದ್ರವನ್ನಾಗಿ ಮಾಡಬಹುದು ಎಂಬುದಾಗಿ ವರದಿಯಲ್ಲಿ ಹೇಳಿದೆ.
Related Articles
Advertisement
ಕಣ್ಣೂರು ವಿಶ್ವವಿದ್ಯಾಲಯದ ಕ್ಯಾಂಪಸ್ ಕೋಟೆ ಪರಿಸರದಲ್ಲಿ ಸ್ಥಾಪಿಸಲು 2009 ರಲ್ಲಿ ಶಿಫಾರಸು ಮಾಡಲಾಗಿತ್ತು. ಆದರೆ ಈ ಉದ್ದೇಶ ಈವರೆಗೂ ಈಡೇರಿಲ್ಲ. ಸರಕಾರಿ ಯೋಜನೆಗಳೆಲ್ಲವೂ ಹೀಗೆ. ಯೋಜನೆಗಳು ಘೋಷಣೆಯಾಗುತ್ತವೆ. ಆದರೆ ಈ ಘೋಷಣೆಗಳು ಯಾರಿಗೂ ತಿಳಿಯದಂತೆ ನೆಲಕಚ್ಚುತ್ತದೆ. ಇಲ್ಲಿ ಕೂಡ ಇದೇ ಸಂಭವಿಸಿದೆ. ಕಾಸರಗೋಡು ಕೋಟೆ ಭೂ ಮಾರಾಟದ ಹಿನ್ನೆಲೆಯಲ್ಲಿ ಭಾರೀ ಸುದ್ದಿಯಾಗಿರುವಂತೆ ಅಡ್ಕ ಕೋಟೆ ಯಾರ ಕಣ್ಣಿಗೂ ಬೀಳದೆ ಇತಿಹಾಸದಿಂದ ಭೂಗತವಾಗುತ್ತಿದೆ.ಕೋಟ್ಯಂತರ ರೂ. ಬೆಲೆಬಾಳುವ ಅಡ್ಕ ಕೋಟೆಯ ಬಹುಪಾಲು ಅನ್ಯರ ಪಾಲಾ ಗಿದೆ. ಇತಿಹಾಸದ ಹೆಗ್ಗುರುತುಗಳಾಗಿರುವ ಕೋಟೆಗಳನ್ನು ರಕ್ಷಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕಾದುದು ಅನಿವಾರ್ಯವಾಗಿದ್ದರೂ, ಆರ್ಕಿಯೋಲಜಿಕಲ್ ಸರ್ವೇ ಆಫ್ ಇಂಡಿಯಾ ಇಲಾಖೆಗೆ ಕಾಸರಗೋಡು ಜಿಲ್ಲೆಯಲ್ಲಿ ಅಧಿಕಾರಿಗಳಿಲ್ಲ. ಈ ಕಾರಣದಿಂದ ಕಾಸರಗೋಡಿನ ಕೋಟೆಗಳೆಲ್ಲ ಸಂರಕ್ಷಿಸಲಾಗದೆ ಬಹುತೇಕ ಕೋಟೆಗಳು ಅನ್ಯರ ಸ್ವಾಧೀನವಾಗುತ್ತಿವೆ. ಇಲ್ಲವೇ ಕೋಟೆಗಳ ಕಲ್ಲುಗಳು ಒಂದೊಂದಾಗಿ ಕಣ್ಮರೆಯಾಗುತ್ತಿವೆ. ಕಾಸರಗೋಡು ಜಿಲ್ಲೆಯಲ್ಲಿ ಕೋಟೆಗಳನ್ನು ಸಂರಕ್ಷಿಸಲು ಸಂಬಂಧಪಟ್ಟ ಇಲಾಖೆಗಳೇ ಇಲ್ಲದಿರುವುದರಿಂದ ಕಾಸರಗೋಡಿನ ಕೋಟೆಗಳೆಲ್ಲ ಮುಂದಿನ ದಿನಗಳಲ್ಲಿ ಕಾಣಸಿಗದು. ಇಂತಹ ಕೋಟೆಗಳ ಸಾಲಿಗೆ ಅಡ್ಕ ಕೋಟೆ ಸೇರದಿರಲಿ. ಈಗಲಾದರೂ ಕೋಟೆ ರಕ್ಷಿಸೋಣ: ಕಾಸರಗೋಡು ಹೃದಯ ಭಾಗದಲ್ಲಿರುವ ಕೋಟ್ಯಂತರ ರೂ. ಮೌಲ್ಯದ ಇತಿಹಾಸ ಪ್ರಸಿದ್ಧ ಕಾಸರಗೋಡು ಕೋಟೆಯ ಭೂ ಮಾರಾಟದಿಂದ ಕಾಸರಗೋಡು ಕೋಟೆ ಎಲ್ಲರ ಗಮನ ಸೆಳೆದಿದ್ದು, ಇದೇ ಪರಿಸ್ಥಿತಿ ಗಮನಕ್ಕೆ ಬಾರದ ಕೋಟೆಗಳಿಗೆ ಬಾರದಿರಲಿ ಎಂಬುದು ಪ್ರಾಚ್ಯವಸ್ತುಗಳ ಬಗ್ಗೆ ವಿಶೇಷ ಆಸಕ್ತಿಯುಳ್ಳ ಅಭಿಮಾನಿಗಳ ಕೋರಿಕೆಯಾಗಿದೆ. ಅಡ್ಕ ಕೋಟೆಯೂ ಇದೇ ರೀತಿಯಾಗಿ ಅನ್ಯರಿಗೆ ಮಾರಾಟ (!)ವಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಸಂಬಂಧಪಟ್ಟ ಇಲಾಖೆಗೆ ಸೇರಿದೆ. ಈ ಜವಾಬ್ದಾರಿಯನ್ನು ಚಾಚು ತಪ್ಪದೇ ನಿರ್ವಹಿಸಬಹುದೇ ಎಂಬುದು ಕಾಲವೇ ನಿರ್ಣಯಿಸಲಿದೆ. ಕಾಸರಗೋಡು ಕೋಟೆ ಭೂ ಮಾರಾಟದಿಂದ ಬಹಳಷ್ಟು ಸುದ್ದಿಯಾಯಿತು. ಈ ಗತಿ ಅಡ್ಕ ಕೋಟೆಗೆ ಬಾರದಿರಲಿ. ಈ ಕೋಟೆಯನ್ನು ಸಂರಕ್ಷಿಸುವ ಮತ್ತು ಅಭಿವೃದ್ಧಿ ಪಡಿಸುವ ಮೂಲಕ ಜನರ ಗಮನ ಸೆಳೆಯಬೇಕು. ಪ್ರವಾಸಿಗಳ ಕೇಂದ್ರವನ್ನಾಗಿಸುವ ಮೂಲಕ ಪ್ರಸಿದ್ಧವಾಗಬೇಕು. ಕೋಟೆ ಭೂಮಿಯ ಮಾರಾಟದಿಂದಲ್ಲ (!). ಶೋಚನೀಯ ಸ್ಥಿತಿಯಲ್ಲಿರುವ ಕೋಟೆ
ಆರ್ಕಿಯೋಲಜಿಕಲ್ ಸರ್ವೇ ಆಫ್ ಇಂಡಿಯಾ ಇದರ ಸ್ವಾಧೀನದಲ್ಲಿರುವ ಅಡ್ಕ ಕೋಟೆಯ ಬಹುಭಾಗ ಕುಸಿದು ಬಿದ್ದಿದ್ದು, ಶೋಚನೀಯ ಸ್ಥಿತಿಯಲ್ಲಿದೆ. ಅಲ್ಲಲ್ಲಿ ಮುರಿದು ಬಿದ್ದ ಬತ್ತೇರಿ, ಬುರುಜುಗಳು ಐತಿಹಾಸಿಕ ಮಹತ್ವದ ಸಾಕ್ಷಿಗಳಾಗಿವೆ. ಇಕ್ಕೇರಿ ರಾಜವಂಶದ ಶೌರ್ಯಕ್ಕೆ ಹೆಸರಾದ ಶಿವಪ್ಪ ನಾಯಕನ ಕಾಲದಲ್ಲಿ ಈ ಕೋಟೆಯನ್ನು ನಿರ್ಮಿಸಲಾಗಿದೆ. ಆದರೆ ಶತಮಾನಗಳ ಹಳಮೆಯಿರುವ ಈ ಕೋಟೆಯನ್ನು ರಕ್ಷಿಸಲು ಆರ್ಕಿಯೋಲಜಿಕಲ್ ವಿಭಾಗವಾಗಲೀ, ಕಂದಾಯ ವಿಭಾಗವಾಗಲೀ ಈ ವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಬಹುದಾದ ಅಡ್ಕ ಕೋಟೆ ದಿನದಿಂದ ದಿನಕ್ಕೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಲೇ ಇದೆ. ದಿನಾ ಕೋಟೆಯ ಭಾಗಗಳು ಅನ್ಯರ ಸ್ವಾಧೀನವಾಗುತ್ತಲೇ ಇವೆ. ಇದು ಹೀಗೇ ಮುಂದುವರಿದರೆ ಕೆಲವೇ ವರ್ಷಗಳಲ್ಲಿ ಇಲ್ಲಿ ಕೋಟೆ ನೆಲೆಗೊಂಡಿತ್ತು ಎಂಬುದಕ್ಕೆ ಯಾವುದೇ ಸಾಕ್ಷಿಗಳು ಉಳಿಯುವುದಿಲ್ಲ. – ಪ್ರದೀಪ್ ಬೇಕಲ್