Advertisement

ಒಂಟೆಗುಂಡಿ: ಸಾವು ಗೆದ್ದ ಅಂಗವಿಕಲ ವೃದ್ಧೆಗೆ ಸ್ವಂತ ಸೂರಿಲ್ಲ

10:06 AM Dec 09, 2019 | mahesh |

ಸುಬ್ರಹ್ಮಣ್ಯ: ಬದುಕು ಎಷ್ಟೊಂದು ಕಠೊರ ಎನ್ನುವುದಕ್ಕೆ ಈ ವೃದ್ಧೆ ಅನುಭವಿಸುತ್ತಿರುವ ನರಕ ಯಾತನೆಯೇ ಸಾಕ್ಷಿ. ಸುಬ್ರಹ್ಮಣ್ಯದ ನೂಚಿಲದ ಒಂಟೆಗುಂಡಿ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಅಂಗವಿಕಲ ವೃದ್ಧೆ ಭಾಗೀರಥಿ ಹೆಗಡೆ ಸಾವನ್ನೇ ಗೆದ್ದು ಬಂದಿದ್ದರೂ ಸ್ವಂತ ಸೂರು ಇಲ್ಲ.

Advertisement

ಮೂಲತಃ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಮಂಚಿಕೇರಿಯ ಮಳಗಿಮನೆ ನಿವಾಸಿ ಭಾಗೀರಥಿ ಅವರಿಗೆ ಈಗ ವಯಸ್ಸು 73. ಕಾಲು ಕಳೆದುಕೊಂಡಿರುವ ಅವರು ಅಂಗವಿಕಲರ ಪ್ರಮಾಣಪತ್ರ ಪಡೆದಿದ್ದಾರೆ. ಪಡಿತರ ಚಿಟಿ, ಆಧಾರ್‌ ಕಾರ್ಡ್‌ ಮುಂತಾದ ದಾಖಲೆ ಗಳಿವೆ. ತಮಗೊಂದು ಸೂರು ಒದಗಿಸುವಂತೆ ಅವರು ಸ್ಥಳೀಯಾಡಳಿತ ಹಾಗೂ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದರು. ಆದರೆ ಮನೆ ಮಂಜೂರಾಗಿಲ್ಲ.

ಜಮೀನು ವ್ಯಾಜ್ಯ
ಯಲ್ಲಾಪುರದಲ್ಲಿರುವ ಜಮೀನಿಗೆ ಸಂಬಂಧಿಸಿ ವ್ಯಾಜ್ಯವಿತ್ತು. 23 ವರ್ಷಗಳ ಹಿಂದೆಯೇ ಪತಿ ತೀರಿ ಕೊಂಡಿದ್ದು, ಸಂಬಂಧಿಕರ ಕಿರುಕುಳ ತಾಳಲಾರದೆ ಮೂವರು ಮಕ್ಕಳ ಜತೆಗೆ ಊರು ತೊರೆದು ಸುಬ್ರಹ್ಮಣ್ಯಕ್ಕೆ ಬಂದು ನೆಲೆಸಿದ್ದಾರೆ. ಇಬ್ಬರು ಪ್ರತ್ಯೇಕ ಮನೆ ಮಾಡಿ ಕೊಂಡಿದ್ದಾರೆ. ಮತ್ತೋರ್ವ ಪುತ್ರ ವಿನಯ ಅನಂತ ಹೆಗಡೆ ಒಂಟೆ ಗುಂಡಿಯಲ್ಲಿ ವೃದ್ಧೆಯ ಜತೆ ವಾಸವಿದ್ದಾರೆ. ಈತನಿಗೂ ಮಂದಬುದ್ಧಿ. ಸೊಸೆ ಹಾಗೂ ಇಬ್ಬರು ಪುಟ್ಟ ಮಕ್ಕಳ ಜತೆ ಹಕ್ಕಿ ಗೂಡಿನಂತಹ ಮಣ್ಣಿನ ಬಾಡಿಗೆ ಮನೆಯಲ್ಲೇ ಭಾಗೀರಥಿ ವೃದ್ಧಾಪ್ಯದ ದಿನಗಳನ್ನು ಕಳೆ ಯುತ್ತಿದ್ದಾರೆ. ಮೂರು ಸೆಂಟ್ಸ್‌ ಜಾಗದಲ್ಲಿ ಒಂದು ಮನೆ ಕಟ್ಟಿಸಿಕೊಡಿ ಎಂದು ಅಂಗಲಾಚುತ್ತಿದ್ದಾರೆ.

ಯಲ್ಲಾಪುರದಲ್ಲಿ ವಾಸವಿದ್ದ ವೇಳೆ ಜಮೀನು ವಿವಾದಕ್ಕೆ ಸಂಬಂಧಿಸಿ ಅವರ ಕೊಲೆ ಪ್ರಯತ್ನ ನಡೆದಿತ್ತು. ಜಾಗ ತೋರಿಸುವ ನೆಪದಲ್ಲಿ ತಂಡವೊಂದು ಅವರನ್ನು ಅಪಹರಿ ಸಿತ್ತು. ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಕಣ್ಣಿಗೆ ಬಟ್ಟೆ ಕಟ್ಟಿ, ಬಲವಾದ ಆಯುಧಗಳಿಂದ ಬಲಗಾಲಿನ ಹಿಮ್ಮಡಿ ಹಾಗೂ ಎಡಗೈ ತೋಳು ಮುರಿದು, ಊರಾಚೆಗಿರುವ ಪಾಳುಬಾವಿಗೆ ತಳ್ಳಿತ್ತು.

“ಐದು ದಿನಗಳ ಕಾಲ ಬಾವಿಯಲ್ಲೇ ನೋವಿನಿಂದ ನರಳುತ್ತ ಜೀವನ್ಮರಣ ಹೋರಾಟ ನಡೆಸುತ್ತಿದ್ದೆ. ಪ್ರಾಣಪಕ್ಷಿ ಹಾರಿಹೋಗಲು ಬಾಕಿ ಇತ್ತು. ದನಗಾಹಿಗಳ ಗುಂಪೊಂದು ಕಾಡಿಗೆ ಬಂದಿತ್ತು. ಈ ಪೈಕಿ ಒಂದು ದನ ನಾನಿದ್ದ ಬಾವಿಗೆ ಬೀಳುವುದರಲ್ಲಿತ್ತು. ಅದನ್ನು ತಪ್ಪಿಸಲು ಬಾವಿ ಸಮೀಪ ಬಂದ ವ್ಯಕ್ತಿಯೋರ್ವ ಬಾವಿಯೊಳಗೆ ಇಣುಕಿ ನೋಡಿದ. ಈ ವೇಳೆ ನನ್ನ ತಲೆ ಕಂಡಿತಂತೆ. ತತ್‌ಕ್ಷಣ ಊರಿಗೆ ಮರಳಿ, ವಿಷಯ ತಿಳಿಸಿದ. 40 ಅಡಿ ಆಳದ ಬಾವಿಯಲ್ಲಿ ಸಿಲುಕಿದ್ದ ನನ್ನನ್ನು ಮೇಲೆತ್ತಿ ಆಸ್ಪತ್ರೆಗೆ ಸೇರಿಸಿ, ಬದುಕಿಸಿದರು’ ಎಂದು ಕಣ್ಣೀರಾದರು ವೃದ್ಧೆ.

Advertisement

ಕಾಲು ಹೋಯಿತು
ಈ ಘಟನೆಯಲ್ಲಿ ನನ್ನ ಕಾಲು ಕೊಳೆತು ಹೋಯಿತು. ಊರಿನ ಕೆಲವರು ಚಿಕಿತ್ಸೆ ಕೊಡಿಸಿದರು. ಬೆಂಗಳೂರಿಗೂ ಕರೆದೊಯ್ದರು. ನನ್ನ ಕಾಲು ಕತ್ತರಿಸಬೇಕಾಯಿತು. ಕೃತಕ ಕಾಲು ಜೋಡಿಸಿದ್ದರಿಂದ ಮನೆಯೊಳಗೆ ಓಡಾಡಲು ಸಾಧ್ಯವಾಗಿದೆ ಎಂದು ಭಾಗೀರಥಿ ಹೇಳುತ್ತಾರೆ. ಕೂಲಿ ಮಾಡಿ ಬದುಕು ಕಟ್ಟಿಕೊಂಡಿದ್ದ ಭಾಗೀರಥಿ ಸುಮಾರು 2000 ಗರ್ಭಿಣಿಯರಿಗೆ ಹೆರಿಗೆ ಮಾಡಿಸಿದ್ದಾರೆ. ಅವರಿಗೊಂದು ಸ್ವಂತ ಸೂರು ಸಿಗುವಂತಾಗಲು ಅಧಿಕಾರಿಗಳು, ಜನಪ್ರತಿನಿಧಿಗಳು ಕೈಜೋಡಿಸಬೇಕಿದೆ.

ಕಷ್ಟಗಳನ್ನೇ ಅನುಭವಿಸಿದ್ದೇನೆ
ಎಳೆಯ ವಯಸ್ಸಿನಿಂದಲೂ ಕಷ್ಟಗಳನ್ನೇ ಅನುಭವಿಸಿದ್ದೇನೆ. ಹೆಣ್ಣಾಗಿ ಏಕೆ ಹುಟ್ಟಿದೆ ಅನ್ನುವಷ್ಟರ ಮಟ್ಟಿಗೆ ನೋವುಂಡಿದ್ದೇನೆ. ಇರುವ ಬಾಡಿಗೆ ಮನೆಯಿಂದ ಹೊರಗೆ ಹೋಗಲು ಸರಿಯಾದ ದಾರಿಯೂ ಇಲ್ಲ. ನನಗೆ ಕನಿಷ್ಠ ಒಂದು ಸೂರು ಅಗತ್ಯವಿದೆ.
– ಭಾಗೀರಥಿ, ಅಂಗವಿಕಲೆ

ನೆರವಿಗೆ ಪ್ರಯತ್ನ
ಭಾಗೀರಥಿ ಅವರಿಗೆ ನೆರವು ನೀಡಲು ಗ್ರಾ.ಪಂ. ವತಿಯಿಂದ ಸಾಧ್ಯವಿರುವ ಎಲ್ಲ ಪ್ರಯತ್ನ ನಡೆಸಲಾಗುವುದು. ಅವರನ್ನು ಸಂಪರ್ಕಿಸಿ ಮಾಹಿತಿ ಪಡೆಯುವೆ.
– ಮುತ್ತಪ್ಪ , ಪಿಡಿಒ ಸುಬ್ರಹ್ಮಣ್ಯ ಗ್ರಾ.ಪಂ.

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next