ಹಾಸ್ಟಲ್ ಜೀವನ ಮರೀಚಿಕೆಯೆಂದುಕೊಂಡಿದ್ದ ನನಗೆ ಅಣ್ಣನ ದಯೆಯಿಂದ ಹಾಸ್ಟಲ್‌ಗೆ ಸೇರುವ ಅವಕಾಶ ದೊರೆಯಿತು. ಹಾಸ್ಟೆಲ್ ಎಂದರೆ ಅದು ಅವ್ಯವಸ್ಥೆಯಿಂದ ಕೂಡಿರುತ್ತದೆ ಎಂದೂ ಕೇಳಿದ್ದ ಅಮ್ಮನಿಗೆ ಅಲ್ಲಿಗೆ ಸೇರಿಸಲು ಸ್ವಲ್ಪವೂ ಮನಸ್ಸಿರಲಿಲ್ಲ. ಆದರೆ ಪಿ.ಜಿ ಕಲಿಯಲು ದೂರದ ಊರಿಗೆ ಹೋಗಲೇಬೇಕಾಯಿತು. ಅಂಥ ಸಮಯದಲ್ಲಿ ಹಾಸ್ಟೆಲ್ ಸೇರುವುದು ಅನಿವಾರ್ಯವಾಯಿತು. ನನ್ನ ಸ್ನೇಹಿತರು ಹಾಸ್ಟೆಲ್ ಜೀವನದ ಕುರಿತು ಬಣ್ಣ ಬಣ್ಣದ ಸಂಗತಿಗಳನ್ನು ಹೇಳಿ ನನ್ನ ಆಸೆಯನ್ನು ಇನ್ನಷ್ಟು ಹೆಚ್ಚು ಮಾಡಿದ್ದರು. ಅಂತೂ ಇಂತೂ ಹಾಸ್ಟೆಲ್ ಸೇರಿಕೊಂಡೆ.
ಆರಂಭದಲ್ಲಿ ಎಲ್ಲವೂ ಹೊಸ ಥರದ ಅನುಭವ. ಸ್ವತಂತ್ರ ಪಕ್ಷಿಯಂತೆ. ಹೇಳುವವರು ಕೇಳುವವರು ಯಾರೂ ಅಲ್ಲಿರಲಿಲ್ಲ. ಮನೆಯಲ್ಲಿ ಇದ್ದಿದ್ದರೆ ಅಮ್ಮ ಅದು ಮಾಡಬೇಡ ಇದು ಮಾಡಬೇಡ ಎಂದು ಹೇಳುತ್ತಿದರು. ಆದರೆ ಇಲ್ಲಿ ಹಾಗಿರಲಿಲ್ಲ. ನನಗೆ ಅನ್ನಿಸಿದ್ದನ್ನು ಮಾಡುತ್ತಿದ್ದೆ. ಯಾವಾಗಲೂ ಸ್ನೇಹಿತರೊಡನೆ, ಕಾಲೇಜು ಚಟುವಟಿಕೆಗಳಲ್ಲಿ ಬಿಝಿಯಾಗಿರುತ್ತಿದ್ದ ಕಾರಣ ಮನೆಯ ನೆನಪಾಗುತ್ತಿದ್ದುದೇ ಅಪರೂಪ. ಅಮ್ಮನೇ ಕಾಲ್ ಮಾಡಿ “ಏನೇ… ನಮ್ಮ ನೆನಪೇ ಇಲ್ವಾ? ಹಾಸ್ಟೆಲ್ ಅಷ್ಟೊಂದು ಇಷ್ಟವಾಗಿದೆಯಾ?’ ಅಂತ ಕೇಳಿದ್ದರು. ಹೂಂ ಅಂತ ತಲೆಯಾಡಿಸಿದ್ದಕ್ಕೆ ಅಮ್ಮ “ಶುರುವಿನಲ್ಲಿ ಚೆಂದಾನೇ ಅನ್ನಿಸುತ್ತೆ. ಬರ ಬರುತ್ತ ಎಲ್ಲವೂ ನಿನಗೆ ತಿಳಿಯುತ್ತದೆ’ ಅಂತ ಹೇಳಿದರು. ಎಲ್ಲ ಗೆಳತಿಯರು ರಜೆ ಬಂತೆಂದರೆ ಸಾಕು, ಮನೆಗೋಡುತ್ತಿದ್ದರು. ನಾನು ಮಾತ್ರ ಹಾಸ್ಟೆಲ್ ಬಿಟ್ಟು ಎಲ್ಲಿಗೂ ಹೋಗುತ್ತಿರಲಿಲ್ಲ.
ಅವಿಭಕ್ತ ಕುಟುಂಬದಂತೆ ಅಲ್ಲಿ ಎಲ್ಲರೂ ಒಟ್ಟಾಗಿ ಸೇರಿ ಹರಟೆ ಹೊಡೆಯುವುದು, ಒಟ್ಟಾಗಿ ಊಟ ಮಾಡುವುದು, ಕ್ಲಾಸ್‌ನಲ್ಲಿ ನಡೆದ ಘಟನೆಗಳನ್ನು ಹೇಳಿಕೊಂಡು ಹುಡುಗರಿಗೆ ಒಂದೊಂದು ಪೆಟ್ ನೇಮ್ ಕೊಡುವುದು, ಹೀಗೆ ಚೇಷ್ಟೆ ಮಾಡಿಕೊಂಡಿದ್ದೆವು. ದಿನಗಳು ಉರುಳಿದಂತೆ ಖುಷಿಯಿಂದ ಇರುತ್ತಿದ್ದ ನಾವೆಲ್ಲರೂ ಚಿಕ್ಕ ಚಿಕ್ಕ ಮನಸ್ತಾಪಗಳಿಂದ ಮಾತನಾಡುವುದನ್ನು ಬಿಟ್ಟೆವು. ಕೊನೆ ಕೊನೆಯಲ್ಲಂತೂ ಯಾಕೋ ಹಾಸ್ಟೆಲ್ ಬೇಸರವಾಗತೊಡಗಿತು.
ಅಮ್ಮ ಹೇಳಿದ ಮಾತು ನಿಜವಾಯಿತು ಅಂತ ಅಂದುಕೊಂಡೆ. ಅಲ್ಲಿ ನನ್ನ ಕಷ್ಟ ಸುಖಗಳಿಗೆ ಸ್ಪಂದಿಸುವ ಸ್ನೇಹಿತರು ಯಾರು ಇರಲಿಲ್ಲ. ಅವರೆಲ್ಲರೂ ನನ್ನ ಮುಂದೊಂದು, ಹಿಂದೊಂದು ಮಾತುಗಳನ್ನಾಡುವವರು ಎಂದು ತಿಳಿಯಿತು. ಎಲ್ಲರೂ ತಮ್ಮ ತಮ್ಮ ಕೆಲಸ ಆಗುವ ತನಕ ಮಾತ್ರ ಜೊತೆಯಿರುತ್ತಾರೆ ಅಷ್ಟೇ ಎಂಬುದು ಅರ್ಥವಾಯಿತು. ಅಂಥ ಸಮಯದಲ್ಲಿ ಅಮ್ಮನ ನೆನಪು ಕಾಡ ತೊಡಗಿತು. ಮನೆಯಲ್ಲಿದ್ದಾಗ ಕ್ಲಾಸ್‌ನಲ್ಲಿ ನಡೆಯುವ ಪ್ರತಿಯೊಂದು ವಿಷಯವನ್ನೂ ಅಮ್ಮನ ತೊಡೆಯ ಮೇಲೆ ಮಲಗಿಕೊಂಡು ಇಂಚು ಇಂಚಾಗಿ ಹೇಳಿಕೊಳ್ಳುತ್ತಿದ್ದೆ. ಮತ್ತೆ ಅಮ್ಮನ ಮಡಿಲು ಸೇರುವ ತವಕ ಹೆಚ್ಚಾಗತೊಡಗಿತು. ಹಾಸ್ಟೆಲ್ ಬಿಟ್ಟ ಮೇಲೆ ಮತ್ತೆ ಅದರ ನೆನಪು ಕಾಡಲಿಲ್ಲ…
ಮೇಘ ಎಸ್., ಧಾರವಾಡ