ಹಿಂದೆಲ್ಲಾ ಕರಾವಳಿಯಲ್ಲಿ ಶಾಲಾ ಕಾಲೇಜು, ಸಂಘ ಸಂಸ್ಥೆಗಳ ವಾರ್ಷಿಕೋತ್ಸವ, ಊರ ಜಾತ್ರೆ ಉತ್ಸವಗಳ ಸಂದರ್ಭದಲ್ಲೆಲ್ಲ ಸ್ಥಳೀಯ ಯುವಕರು ಸೇರಿ ಅಭಿನಯಿಸುವ ನಾಟಕಗಳನ್ನು ಕಾಣಬಹುದಿತ್ತು. ಸಂಸಾರ ಧರ್ಮ, ಅತ್ತೆ ಸೊಸೆ, ಅಣ್ಣ ತಂಗಿ, ಕರುಳಬಳ್ಳಿಯ ಅಗಾಧತೆಯನ್ನೂ, ಸಾಮಾಜಿಕ ನ್ಯಾಯ ಮೌಲ್ಯಪ್ರಜ್ಞೆಯನ್ನೂ ಸತ್ವಪೂರ್ಣವಾಗಿ ಮನವರಿಕೆ ಮಾಡುವ ನೂರಾರು ನಾಟಕಗಳು ಪ್ರದರ್ಶನಗೊಳ್ಳುತಿದ್ದವು. ಈ ನಾಟಕಗಳ ಮೂಲಕ ಅನೇಕ ನಾಟಕ ರಚನೆಕಾರರು, ಹಿನ್ನೆಲೆ ಸಂಗೀತ ಕಲಾವಿದರು, ರಂಗಸಜ್ಜಿಕೆ ಕಲಾವಿದರು ಹೆಸರುವಾಸಿಯಾಗಿದ್ದರು. ಸ್ಥಳೀಯ ಪ್ರತಿಭೆಗಳ ಅಭಿನಯದ ಬಗ್ಗೆ ಗದ್ದೆ, ತೋಟ, ಹೋಟೆಲ್, ಸೆಲೂನ್‌ಗಳಲ್ಲಿ ಚರ್ಚೆಯಾಗುತಿದ್ದವು.
ಯುವಕರ ಆಸಕ್ತಿಯ ಕ್ಷೇತ್ರ ಬದಲಾಗುತ್ತಿದ್ದಂತೆ ಹಳ್ಳಿ ನಾಟಕಗಳು ಅಪರೂಪವೆನಿಸತೊಡಗಿದವು. ಹಾಗೂ ಈ ಜಾಗವನ್ನು ಸಂಗೀತ ಕಛೇರಿಗಳು, ನೃತ್ಯತಂಡಗಳು ಆಕ್ರಮಿಸಿದವು. ಇನ್ನೂ ಅನಿವಾರ್ಯವೆನಿಸಿದಾಗ ಪೇಟೆಯ ನಾಟಕ ತಂಡಗಳನ್ನು ಕರೆಸಿ ಪ್ರದರ್ಶನಗಳನ್ನು ಏರ್ಪಡಿಸಲಾಗುತ್ತಿದೆ.
ಆದರೆ ಹಿಂದಿನ ಸಾಂಸ್ಕೃತಿಕ ಪರಂಪರೆಯನ್ನು ಇನ್ನೂ ಉಳಿಸಿಕೊಂಡು ಬಂದಿರುವ ಕೆಲವೇ ಊರುಗಳಲ್ಲಿ ಬಂಟ್ವಾಳ ತಾಲೂಕಿನ ಇರಾ ಗ್ರಾಮವೂ ಒಂದು. ಇಲ್ಲಿ ಇತ್ತೀಚಿಗೆ ನಡೆದ ಮಲೆಯಾಳಿ ಬಿಲ್ಲವ ಸೇವಾ ಸಂಘದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸ್ಥಳೀಯ ಯುವಕರು ಪ್ರದರ್ಶಿಸಿದ ಶಶಿಧರ ಬಂಡಿತಡ್ಕ ರಚಿಸಿ, ವೈ.ಬಿ. ಸುಂದರ್ ಮುಂದಾಳತ್ವದಲ್ಲಿ, ನಿತಿನ್ ಹೊಸಂಗಡಿ ನಿರ್ದೇಶಿಸಿದ “ವಜ್ರದ ಮೂಂಕುತ್ತಿ’ ನಾಟಕ ಪ್ರೇಕ್ಷಕರನ್ನು ಮನಸೂರೆಗೊಳಿಸುವುದರಲ್ಲಿ ಯಶಸ್ವಿಯಾಯಿತು.
ಪ್ರೀತಿಸಿದ ಯುವತಿಯನ್ನು ಮದುವೆಯಾಗದೆ ಚಡಪಡಿಸುವ ಮನಮಿಡಿಯುವ ಸೂರಜ್‌ನ ಪಾತ್ರದಲ್ಲಿ ವೈ.ಬಿ. ಪ್ರವೀಣ್ ಮನೋಜ್ಞ ಅಭಿನಯ ನೀಡಿದರೆ, ನಾಯಕಿಯ ಮನಮುಟ್ಟುವ ಪಾತ್ರದ ಮೂಲಕ ಮಿಥುನ್ ಪ್ರೇಕ್ಷಕರಿಂದ ಶಹಬಾಸ್‌ಗಿರಿ ಪಡೆದರು.ಇನ್ನು ವಿಶೇಷವಾಗಿ ತನ್ನ ವಿಭಿನ್ನ ಹಾಸ್ಯ ಅಭಿನಯದ ಅಜ್ಜಿಯ ಪಾತ್ರದಲ್ಲಿ ದಿನೇಶ್ ಚಪ್ಪಾಳೆ ಗಿಟ್ಟಿಸಿದರು. ಧೀರಜ್ ಮುಗುಳ್ಯ, ಸಂಜಿತ್ ಕುಕ್ಕಾಜೆ, ಅಶೋಕ್ ಚಟ್ಟೆಕಲ್ಲು, ಶರತ್ ಕೆಂಜಿಲ ಹೊಟ್ಟೆಹುಣ್ಣಾಗುವಷ್ಟು ನಗಿಸುವಲ್ಲಿ ಯಶಸ್ವಿಯಾದರು. ನಾಗೇಶ್ ಪೂಜಾರಿ-ದೇಜಪ್ಪ ಪೂಜಾರಿ ಅವರೂ ನಗು ತರಿಸಿದರು. ವೈ.ಬಿ ಸುಂದರ್, ಗಣೇಶ್ ಕಿನ್ನಿಮಜಲು, ರಕ್ಷಿತ್ ಇರಾ, ನಾರಾಯಣ ಸೂತ್ರಬೈಲ್, ಗೋಪಾಲ್ ಅಶ್ವಥಡಿ ಮುಂತಾದವರ ಉತ್ತಮ ಅಭಿನಯ ಎರಡೂವರೆ ತಾಸುಗಳ ಕಾಲ ಪ್ರೇಕ್ಷಕರನ್ನು ನಿರಾಸೆಗೊಳಿಸಲಿಲ್ಲ. ಗ್ರಾಮೀಣ ಭಾಗದ ಪ್ರತಿಭೆಗಳಿಗೆ ವೇದಿಕೆ ದೊರಕಿದರೆ ರಂಗಭೂಮಿ ಇನ್ನಷ್ಟು ಪ್ರಜ್ವಲಿಸಬಹುದು ಎಂಬುದು ನಿಜವಾಗಿದೆ.
ಸತೀಶ್ ಇರಾ