Advertisement

ಮಾವು ಬೆಳೆಗೆ ಕುತ್ತು ತಂದ ಇಬ್ಬನಿ

09:35 AM Mar 18, 2019 | Team Udayavani |

ಚಿಕ್ಕಜಾಜೂರು: ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ಮಂಜು ಮುಸುಕಿದ ವಾತಾವರಣ ಕಂಡು ಬಂದಿದ್ದು, ತೋಟದ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ. ಬೆಳಿಗಿನ ಜಾವ 5:30ರವರೆಗೂ ವಾತಾವರಣ ಸಹಜವಾಗಿತ್ತು, ನಂತರ ಮಂಜಿನಿಂದ ಆವೃತವಾಗಿ ಎದುರಿಗೆ ಯಾರೇ ಬಂದರೂ ಕಾಣಿಸದ ಸ್ಥಿತಿ ನಿರ್ಮಾಣವಾಗಿತ್ತು. ವಾಹನಗಳ ಚಾಲಕರಂತೂ ಹೆಡ್‌ಲೈಟ್‌ ಹಾಕಿಕೊಂಡೇ ವಾಹನಗಳನ್ನು ಚಲಾಯಿಸುತ್ತಿದ್ದರು.

Advertisement

ಬೆಳಿಗ್ಗೆಯಿಂದ ಇಬ್ಬನಿ ಬೀಳಲಾರಂಬಿಸಿದ್ದರಿಂದ ತೋಟಗಳಲ್ಲಿನ ಮರಗಳಲ್ಲಿ ನೀರು ತೊಟ್ಟಿಕ್ಕುತ್ತಿತ್ತು. ಕಳೆದ ಜನವರಿ 23 ರಂದು ಇದೇ ರೀತಿ ಇಬ್ಬನಿ ಬಿದ್ದ ಪರಿಣಾಮ ಮಾವಿನಮರಗಳಲ್ಲಿ ಬಿಟ್ಟಿದ್ದ ಹೂವು, ಹೀಚು ಉದುರಿದ್ದವು. ಈಗ ಮರಗಳಲ್ಲಿ ಕಾಯಿಗಳಿದ್ದು, ಹೀಚುಗಳು ಉದುರುವ ಭೀತಿ ಎದುರಾಗಿದೆ. ಹಾಗಾಗಿ ಕಳೆದ ಬಾರಿಗಿಂತ ಈ ಬಾರಿ ಇಳುವರಿ ಕಡಿಮೆ ಆಗಬಹುದು ಎಂದು ಮಾವು ಬೆಳೆಗಾರರಾದ ಅನಂತಪ್ಪ, ಸಿದ್ದಪ್ಪ, ಶ್ರೀನಿವಾಸ್‌ ಮೊದಲಾದವರು ಆತಂಕ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಮಾವಿನ ಮರಗಳಲ್ಲಿ ಹೂವು ಬಿಟ್ಟಿದ್ದು, ದಿಢೀರನೆ ಇಬ್ಬನಿ ಬಿದ್ದಿರುವುದು ಹೋಬಳಿಯ ಮಾವು ಬೆಳೆಗಾರರಲ್ಲಿ ಭೀತಿ ಮೂಡಿಸಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಸರಿಯಾದ ಮಳೆ ಇಲ್ಲದೆ ಮರಗಳು ಒಣಗಿ ಹೋಗಿವೆ, ಅಳಿದುಳಿದ ಮರಗಳಲ್ಲಿ ಬಿಟ್ಟಿದ್ದ ಹೂವು, ಹೀಚುಗಳಿಗೆ ಇಬ್ಬನಿಯಿಂದ ಹಾನಿಯಾಗಿ ಫಸಲೇ ಇಲ್ಲದಂತಾಗುತ್ತಿದೆ.

ಇದೇ ವಾತಾವರಣ ಸುತ್ತಮುತ್ತಲಿನ ಗ್ರಾಮಗಳಾದ ಬಾಣಗೆರೆ, ಪಾಡಿಗಟ್ಟೆ, ಕೋಟೆಹಾಳ್‌, ಚಿಕ್ಕಎಮ್ಮಿಗನೂರು, ಹಿರೇ ಎಮ್ಮಿಗನೂರು, ಅಂತಾಪುರ, ನಂದಿಹಳ್ಳಿ, ಕೊಡಗವಳ್ಳಿ, ಕಡೂರು, ಚಿಕ್ಕಂದವಾಡಿ ಮೊದಲಾದ ಗ್ರಾಮಗಳಲ್ಲೂ ಕಂಡು ಬಂದಿದೆ. ಈ ಭಾಗದಲ್ಲಿ ಮಾವು ಬೆಳೆ ಹೆಚ್ಚಾಗಿದೆ. ಇದೇ ವಾತಾವರಣ ಮುಂದುವರೆದರೆ ಇರುವ ಬೆಳೆಯನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂಬುದು ಮಾವು ಬೆಳೆಗಾರರ ಅಳಲು.

ಬೆಳೆಗಾರರಿಗೆ ನಿರಾಸೆ ಕಳೆದ ವರ್ಷ ಅಕ್ಟೋಬರ್‌ ಹಾಗೂ ನವೆಂಬರ್‌ ತಿಂಗಳಿನಲ್ಲಿ ಸ್ವಲ್ಪ ಮಳೆಯಾಗಿದ್ದರಿಂದ ಮರಗಳಲ್ಲಿ ಹಸಿರು ತುಂಬಿಕೊಂಡಿತ್ತು. ಬಹುತೇಕ ಮರಗಳಲ್ಲಿ ಹೂವುಗಳೂ ಬಿಟ್ಟಿದ್ದವು. ಇದರಿಂದ ಮಾವು ಬೆಳೆಗಾರರಲ್ಲಿ ಆಸೆ ಚಿಗುರಿತ್ತು. ಆದರೆ ಈಗ ಇಬ್ಬನಿ ಬಿದ್ದಿರುವುದರಿಂದ ಹೂವು ಮತ್ತು ಹೀಚುಗಳು ಉದುರುವ ಭೀತಿ ಎದುರಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next