ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಲೋಕಾಪುರದ ವೆಂಕಟಾಪುರ ಓಣಿಯ ಹಾಲುಮತ ಜನಾಂಗದ ಮೂಲ ಆರಾಧ್ಯ ದೈವ ಶ್ರೀ ಕಾಶಿಲಿಂಗೇಶ್ವರ ಮಹಾರಥೋತ್ಸವ ಏ.14ರಂದು ವೈಭವದಿಂದ ನೆರವೇರಲಿದೆ.
ಸರ್ವಧರ್ಮಗಳ ಭಕ್ತರ ಉದ್ಧಾರಕ ಡಂಗೆಪ್ಪಜ್ಜನೆಂದೇ ಕರೆಸಿಕೊಳ್ಳುವ ಈ ದೇವರು ಭಕ್ತರ ಪಾಲಿನ ಕಾಮಧೇನು
ಆಗಿದ್ದಾರೆ. ಸುಮಾರು ಅರವತ್ತು ವರ್ಷಗಳ ಇತಿಹಾಸ ಹೊಂದಿರುವ ಈ ದೇವರನ್ನು ಲಿಂ| ಮುತ್ತಪ್ಪ ಪೂಜಾರಿ ಗಡ್ಡದ ಅವರ ಮನೆಯಲ್ಲಿ ಆರಾಧಿಸುತ್ತಿದ್ದರು. 1938ರಲ್ಲಿ ಗ್ರಾಮಕ್ಕೆ ಬಂದೆರಗಿದ ಮಹಾಮಾರಿ ಕಾಯಿಲೆಯಿಂದ ಜನರು ಸಾವು ನೋವುಗಳ ಸಂಕಷ್ಟಕ್ಕೆ ಸಿಲುಕಿ ಕಂಗಾಲಾಗಿದ್ದರು.
ಇದೇ ಸಂದರ್ಭದಲ್ಲಿ ರಾಮದುರ್ಗ ತಾಲೂಕಿನ ಕುಳ್ಳೂರ ಗ್ರಾಮದ ಶ್ರೀ ರೇವಯ್ನಾ ಸ್ವಾಮಿಗಳು ಭಕ್ತರೊಂದಿಗೆ ಗ್ರಾಮಕ್ಕೆ ಭೇಟಿ ನೀಡಿದಾಗ ಹಾಲುಮತದ ಹಿರಿಯರಾದ ಮುತ್ತಪ್ಪ ಪೂಜಾರಿ, ಮಾಯಪ್ಪ ಪೂಜಾರಿ ಆದಿಯಾಗಿ ಹಿರಿಯರು ಶ್ರೀ ರೇವಯ್ನಾ ಸ್ವಾಮಿಗಳನ್ನು ಕಂಡು ಸಂಕಷ್ಟಕ್ಕೆ ಪರಿಹಾರ ಬಯಸಿದಾಗ ಡಂಗೆಪ್ಪಜ್ಜನಿಗೊಂದು ಗುಡಿ ಕಟ್ಸೆ ಪೂಜಾ ಮಾಡ್ರಿ ಎಲ್ಲಾ ಸರಿ ಆಕೈತಿ ಅಂದಾಗ ಮಾರನೇಯ ದಿನವೇ ಗುಡಿ ಸ್ಥಾಪನೆಗೆ ಮುಂದಾದರು. ಆಗ ರಾಯಪ್ಪ ಹರಕಂಗಿ ದೇವರ ಗುಡಿ ಕಟ್ಟಲು ಜಾಗ ಖರೀದಿಸುವ ಖರ್ಚು ನೀಡಿದರು.
ಇದೇ ಹಾಲುಮತ ಸಮಾಜ ಬಾಂಧವರಿಂದ 60 ಮೊಳ, 40 ಮೊಳ ಅಳತೆಯ ಜಾಗೆಯನ್ನು 200 ರೂ.ಗಳಿಗೆ ಖರೀದಿಸಿ, ಅಷ್ಟೇ ಮೊತ್ತದ ಖರ್ಚಿನಲ್ಲಿ ಕಲ್ಲು ಮಣ್ಣಿನ ಗುಡಿಯನ್ನು ವರ್ಷದೊಳಗೆ ನಿರ್ಮಿಸಿ ದೇವರನ್ನು ಪ್ರತಿಷ್ಠಾಪಿಸಿದರು. ಮಾರನೇ ವರ್ಷ ರೇವಯ್ನಾ ಸ್ವಾಮಿಗಳು ಗ್ರಾಮಕ್ಕೆ ಬಂದು ದರ್ಶನ ಪಡೆದು ಬಹಳ ಸಂತೋಷಪಟ್ಟರು.
ಆಗ ಸಮಾಜ ಹಿರಿಯರು ದೇವರ ಜಾತ್ರೆ ಮಾಡುವ ಸದಿಚ್ಛೆ ವ್ಯಕ್ತಪಡಿಸಿದರು. ಅದಕ್ಕಾಗಿ ಸೂರ್ಯಚಂದ್ರ ಇರುವ ತನಕ, ಗಂಗೆ ಹರಿಯುವ ತನಕ ಜಾತ್ರೆ ನಡೆಯುವ ಮುಹೂರ್ತಕ್ಕಾಗಿ ಕೇಳಿಕೊಂಡರು.
ಇದಕ್ಕೆ ಸ್ವಾಮಿಗಳು ಒಪ್ಪಿಕೊಂಡು ಯುಗಾದಿ ಆದ ಯುಗಾದಿ ಪಾಡ್ಯಮಿ ಎಂದು ಹಿರೇಹೊಳೆಯಲ್ಲಿ (ಕೃಷ್ಣಾನದಿ) ಅಜ್ಜನ ಮಹಾಮಜ್ಜನವಾಗಬೇಕು. ನೆರೆದ ಭಕ್ತರೊಡನೆ ಕೂಡಿ ಮಹಾಪೂಜೆ ನಂತರ ಪ್ರಸಾದವಾಗಬೇಕು. ಅಲ್ಲಿಂದ ಭಕ್ತ ಬಳಗದೊಂದಿಗೆ ಯುಗಾದಿ ಅಮವಾಸ್ಯೆಯ ಒಂಬತ್ತನೇ ದಿವಸಕ್ಕೆ ಅಜ್ಜನ ಉತ್ಸವ ಜಾತ್ರೆ ರೂಪದಲ್ಲಿ ನೆರವೇರಬೇಕೆಂದು ಹೇಳಿದರು.
ಅಂದಿನಿಂದ ಪ್ರತಿ ವರ್ಷ ಭಕ್ತರ ಸಡಗರ ಇಮ್ಮಡಿಯಾಗಿ, ನೂರಡಿಯಾಗಿ ಹೆಚ್ಚುತ್ತ ಇಂದು ಈ ಭಾಗದ ಬಹುದೊಡ್ಡ
ಮಹಾ ಜಾತ್ರೆಯಾಗಿ ಬೆಳೆದು ಬಂದಿದೆ. 1972ರಿಂದ ಇಲ್ಲಿಯವರೆಗೆ ದೇವಸ್ಥಾನದ ಜಿರ್ಣೋದ್ಧಾರ ಕ್ರಿಯೆ
ಸಾಂಗವಾಗಿ ನಡೆದು, ಮುಂದೆ ಮುತ್ತಪ್ಪ ಪೂಜಾರಿ ಅವರ ಲಿಂಗೈಕ್ಯದ ನಂತರ ಪ್ರಧಾನ ಅರ್ಚಕರೆನಿಸಿದ ನಿಂಗಪ್ಪಜ್ಜ
ಗಡದವರ ನೇತೃತ್ವದಲ್ಲಿ ಇಂದು ಬೃಹತ್ ಕಲ್ಲಿನ ದೇವಸ್ಥಾನ ನಿರ್ಮಾಣವಾಗಿದೆ. ಗ್ರಾಮದ ತುಂಗಳ ಮನೆತನದವರಿಗೆ
ಬಹುದಿನಗಳಿಂದ ಸಂತಾನಭಾಗ್ಯ ದೊರೆತಿರಲಿಲ್ಲ. ಮಕ್ಕಳ ಭಾಗ್ಯ ಪ್ರಾಪ್ತವಾದರೆ ಮುಖ್ಯ ದ್ವಾರಬಾಗಿಲು ನಿರ್ಮಿಸಿಕೊಡಲು ಹರಕೆ ಹೊತ್ತರು.
ವರ್ಷದೊಳಗೆ ಅವರ ಬಯಕೆ ಈಡೇರಿತು. ಅವರ ಮಾತಿನಂತೆ ದೇವಸ್ಥಾನದ ಮುಖ್ಯ ದ್ವಾರಬಾಗಿಲು
ನಿರ್ಮಿಸಿಕೊಟ್ಟರು. ದೇವಸ್ಥಾನದ ಬೃಹತ್ ಆವರಣದಲ್ಲಿ ಭಕ್ತರಿಗಾಗಿ ಪೌಳಿ, ಉಗ್ರಾಣ, ಅಡುಗೆಮನೆ, ದೇವಸ್ಥಾನದ
ಆಕರ್ಷಕ ಶಿಖರ, ಮಾಲಗಂಬ, ವಾಣಿಜ್ಯ ಸಂಕೀರ್ಣಗಳು ದ್ವಾರಬಾಗಿಲ ಮೇಲ್ಗಡೆಯಲ್ಲಿ ಒಳಗೆ ಮತ್ತು ಹೊರಗೆ
ವಿವಿಧ ಮಹಾತ್ಮರ, ಸಿದ್ಧಿ ಪುರುಷರ, ಪವಾಡ ಪುರುಷರ ಮೂರ್ತಿಗಳು ತುಂಬಾ ಆಕರ್ಷಕವಾಗಿವೆ.
ಇತ್ತೀಚೆಗೆ 22 ವರ್ಷಗಳಿಂದ ನಿಂಗಪ್ಪ ಪೂಜಾರಿಗಳಿಗೆ ಶಕ್ತಿಯಾಗಿ ಗಣಿ ಉದ್ದಿಮೆದಾರ ಮುರಗಯ್ನಾ ವಿರಕ್ತಮಠ ಅವರು ದೇವಸ್ಥಾನದ ಜಿರ್ಣೋದ್ಧಾರ ಕ್ರಿಯೆಯಲ್ಲಿ ಪಾಲ್ಗೊಂಡು ಸುಳ್ಯದ ಗಣಪತೆಪ್ಪ ಬಡಿಗೇರ ಅವರಿಂದ ಸುಮಾರು ಇಪ್ಪತ್ತು ಲಕ್ಷ ರೂ.ಗಳ ವೆಚ್ಚದಲ್ಲಿ ಮಹಾರಥ ನಿರ್ಮಿಸಿ, ಪ್ರತಿ ವರ್ಷ ರಥೋತ್ಸವ ಮಾಡುವ ಮೂಲಕ ವಿಶೇಷ ಸಿಹಿ ಭೋಜನ ವ್ಯವಸ್ಥೆಯನ್ನು ಭಕ್ತರೊಡನೆ ಕೂಡಿ ಜಾತ್ರೆಗೆ ಮತ್ತಷ್ಟು ಕಳೆ ತಂದಿದ್ದಾರೆ.
ಬಸವರಾಜ ಆರ್. ಸುಣಗಾರ, (ಶಿಕ್ಷಕರು) ಲೋಕಾಪುರ
ಜೀರ್ಣೋದ್ಧಾರ ಕಾರ್ಯ
ಶ್ರೀ ಕಾಶಿಲಿಂಗೇಶ್ವರ ದೇವಸ್ಥಾನ ಪಕ್ಕದಲ್ಲಿ 2018-19 ನೇ ಸಾಲಿನಲ್ಲಿ ಅಧ್ಯಕ್ಷರ ಹಾಗೂ ಭಕ್ತರ ನೇತೃತ್ವದಲ್ಲಿ ಸುಮಾರು 30 ಲಕ್ಷ ರೂ.ಗಳ ವೆಚ್ಚದಲ್ಲಿ ಅನ್ನದಾಸೋಹ ನಿಲಯ ನಿರ್ಮಾಣವಾಗಿದೆ. ಶ್ರೀ ಕಾಶಿಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸೇವಾ ಸಮಿತಿ ಅಧ್ಯಕ್ಷರಾಗಿ ಮುತ್ತಪ್ಪ ಗಡ್ಡದವರ, ಕಾರ್ಯದರ್ಶಿಯಾಗಿ ಬಾಳು ಗಡ್ಡದವರ, ಸರ್ವ ಸದಸ್ಯರು, ಗ್ರಾಮಸ್ಥರು ಸೇರಿ ದೇವಸ್ಥಾನದ ಅಭಿವೃದ್ಧಿ ಕೆಲಸ ಕಾರ್ಯಗಳಲ್ಲಿ ತೊಡಗಿದ್ದಾರೆ.