Advertisement

ಪಾರಂಪರಿಕ ತಾಣ ಬಾದಾಮಿಗೆ ಮಿಡಿಯದ ‘ಹೃದಯ’

12:30 AM Feb 05, 2019 | |

ಬೆಂಗಳೂರು: ಕೇಂದ್ರದ ಮಹತ್ವಾಕಾಂಕ್ಷಿ ‘ಹೃದಯ’ ಯೋಜನೆಗೆ ಆಯ್ಕೆಯಾಗಿದ್ದ ರಾಜ್ಯದ ಏಕೈಕ ಪಾರಂಪರಿಕ ತಾಣ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ಕ್ಷೇತ್ರ ಬಾದಾಮಿಯನ್ನು ಮೇಲ್ದರ್ಜೆಗೇರಿಸುವ ಕಾರ್ಯ ಸಂಪೂರ್ಣ ನನೆಗುದಿಗೆ ಬಿದ್ದಿದ್ದು, ಈ ಮೂಲಕ ರಾಜ್ಯದ ‘ಸ್ಮಾರ್ಟ್‌ ಸಿಟಿ’ಗಳ ಸ್ಥಿತಿಯೇ ಬಾದಾಮಿಗೂ ಬರುತ್ತಿದೆ.

Advertisement

ಪಾರಂಪರಿಕ ತಾಣಗಳ ಮೂಲಸ್ವರೂಪಕ್ಕೆ ಧಕ್ಕೆಯಾಗದಂತೆ ಮೂಲಸೌಕರ್ಯ ಕಲ್ಪಿಸಿ, ಮೇಲ್ದರ್ಜೆಗೇರಿಸಲು 2015ರಲ್ಲಿ ಕೇಂದ್ರ ಸರ್ಕಾರ ‘ಹೃದಯ’ ಯೋಜನೆ ಜಾರಿಗೊಳಿಸಿತು. ಇದರಡಿ ಬಾದಾಮಿ ಸೇರಿ ದೇಶದ 12 ಪಾರಂಪರಿಕ ತಾಣಗಳನ್ನು ಆಯ್ಕೆ ಮಾಡಲಾಯಿತು. 2018ರ ಡಿಸೆಂಬರ್‌ ಒಳಗೆ ಪೂರ್ಣಗೊಳಿಸುವ ಗುರಿ ನಿಗದಿಪಡಿಸಲಾಗಿತ್ತು. ಆದರೆ, ಈವರೆಗೆ ಶೇ.50ರಷ್ಟೂ ಪೂರ್ಣಗೊಂಡಿಲ್ಲ.

‘ಹೃದಯ’ ಯೋಜನೆ ಅಡಿ ಬಾದಾಮಿಯನ್ನು ಕೂಡುವ ರಸ್ತೆಗಳಲ್ಲಿ ಬರುವ ಐತಿಹಾಸಿಕ ಕಟ್ಟಡಗಳನ್ನು ಮೂಲಸ್ವರೂಪಕ್ಕೆ ಧಕ್ಕೆಯಾಗದಂತೆ ಕಲಾತ್ಮಕವಾಗಿ ಅಭಿವೃದ್ಧಿಪಡಿಸುವುದು, ಪ್ರವಾಸಿಗರ ವಾಹನಗಳ ನಿಲುಗಡೆ ವ್ಯವಸ್ಥೆ ಕಲ್ಪಿಸುವುದು, ಘನತ್ಯಾಜ್ಯ ನಿರ್ವಹಣೆ, ಸಮಗ್ರ ಅಭಿವೃದ್ಧಿ ಮತ್ತು ಉಪ ರಸ್ತೆಗಳು, ಸಂಕೇತಗಳ ಅಭಿವೃದ್ಧಿಪಡಿಸುವುದು ಸೇರಿ ಒಟ್ಟಾರೆಯಾಗಿ ಮೇಲ್ದರ್ಜೆಗೇರಿಸಲು 18.67 ಕೋಟಿ ರೂ. ಮಂಜೂರು ಮಾಡಿದ್ದು, ಈ ಪೈಕಿ ಜನವರಿವರೆಗೆ 4.01 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಯೋಜನೆಗೆ ರಾಜ್ಯಮಟ್ಟದ ನೋಡಲ್‌ ಏಜೆನ್ಸಿಯಾಗಿ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮವನ್ನು (ಕೆಯುಐಡಿಎಫ್ಸಿ) ನಿಯೋಜಿಸಲಾಗಿದ್ದು, ಅನುಷ್ಠಾನಗೊಳಿಸುವ ಹೊಣೆಯನ್ನು ಸ್ಥಳೀಯ ಪುರಸಭೆಗೆ ವಹಿಸಲಾಗಿದೆ. ಆದರೆ, ಈವರೆಗೆ ಯೋಜನೆಯು ಶೇ.50ರಷ್ಟು ಪ್ರಗತಿ ಸಾಧಿಸಿಲ್ಲ ಎಂದು ನಿಗಮದ ಮೂಲಗಳು ‘ಉದಯವಾಣಿ’ಗೆ ತಿಳಿಸಿವೆ.

ಅವಕಾಶದಿಂದ ವಂಚಿತ ಆಗುವ ಆತಂಕ: ಮಂದಗತಿಯ ಪ್ರಗತಿಯಿಂದ ಯೋಜನೆಯಲ್ಲಿ ಬಾದಾಮಿ 10ನೇ ಸ್ಥಾನ ತಲುಪಿದೆ. ನಿಗದಿತ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮಾರ್ಚ್‌ ಅಂತ್ಯದವರೆಗೆ ಮತ್ತೆ ಕಾಲಾವಕಾಶ ನೀಡಲಾಗಿದೆ. ಈ ಮಧ್ಯೆ ಕೇಂದ್ರ ಸರ್ಕಾರದ ಅವಧಿಯೇ ಪೂರ್ಣಗೊಳ್ಳುತ್ತಿದ್ದು, ಯೋಜನೆ ಮುಂದುವರಿಯುವುದು ಬರುವ ಹೊಸ ಸರ್ಕಾರವನ್ನು ಅವಲಂಬಿಸಿದೆ. ಆ ಹಿನ್ನೆಲೆಯಲ್ಲಿ ಬಾದಾಮಿಗೆ ಸಿಕ್ಕ ಅವಕಾಶದಿಂದ ವಂಚಿತವಾಗುವ ಆತಂಕ ಕಾಡುತ್ತಿದೆ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ತಿಳಿಸಿದರು.

ಹಸ್ತಕ್ಷೇಪ ಕಡಿಮೆಯಾಗಬೇಕು: ಯಾವೊಂದು ಪ್ರವಾಸಿ ತಾಣ ಅಭಿವೃದ್ಧಿಯಾಗಬೇಕಾದರೆ, ಅಲ್ಲಿಗೆ ಮೂಲಸೌಕರ್ಯಗಳನ್ನು ಕಲ್ಪಿಸುವುದು ತುಂಬಾ ಮುಖ್ಯ. ಇದು ಬಾದಾಮಿಗೂ ಅನ್ವಯಿಸುತ್ತದೆ. ಅಲ್ಲಿ ರಸ್ತೆ, ನೀರು ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಿದಾಗ, ಬೆನ್ನಲ್ಲೇ ಹೋಟೆಲ್‌ಗ‌ಳು ಬರುತ್ತವೆ. ಪ್ರವಾಸಿಗರ ಸಂಖ್ಯೆ ಹೆಚ್ಚುತ್ತದೆ. ಇದರಿಂದ ಸಾರಿಗೆ ಉದ್ಯಮವೂ ಬೆಳೆಯುತ್ತದೆ. ಸಹಜವಾಗಿ ಹತ್ತಾರು ಜನರಿಗೆ ಕೆಲಸ ಸಿಗುತ್ತದೆ. ಇದೆಲ್ಲದಕ್ಕೂ ಬೇಕಾಗಿರುವುದು ಅಧಿಕಾರಿಗಳ ಆಸಕ್ತಿ ಹಾಗೂ ರಾಜಕಾರಣಿಗಳ ಹಸ್ತಕ್ಷೇಪವೂ ಕಡಿಮೆ ಆಗಬೇಕು ಎಂದು ಇತಿಹಾಸ ಅಕಾಡೆಮಿ ಅಧ್ಯಕ್ಷ ದೇವರಕೊಂಡಾರೆಡ್ಡಿ ಅಭಿಪ್ರಾಯಪಡುತ್ತಾರೆ.

Advertisement

ಮಾರ್ಚ್‌ ಒಳಗೆ ಪೂರ್ಣ: ಬಾದಾಮಿಯನ್ನು ಮೇಲ್ದರ್ಜೆಗೇರಿಸುವ ಕಾರ್ಯವನ್ನು ಮಾರ್ಚ್‌ ಒಳಗೆ ಪೂರ್ಣಗೊಳಿಸುವ ಗುರಿಯಿದೆ. ಈ ನಿಟ್ಟಿನಲ್ಲಿ ಒಳಚರಂಡಿ ವ್ಯವಸ್ಥೆ ಸರಿಪಡಿಸಿ, ಕೆರೆಗೆ ಸೇರುತ್ತಿದ್ದ ಕೊಳಚೆ ನೀರಿಗೆ ಬ್ರೇಕ್‌ ಹಾಕಲಾಗಿದೆ. ಮ್ಯೂಸಿಯಂಗೆ ಸೇರುವ ರಸ್ತೆ, ಬೀದಿದೀಪ, ಗುಹಾಂತರ ದೇವಾಲಯಕ್ಕೆ ಕೂಡುವ ರಸ್ತೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಆದರೆ, ಈ ರಸ್ತೆಗಳ ಬದಿಯಲ್ಲಿನ ಸುಮಾರು 250 ಮನೆಗಳನ್ನು ಪಾರಂಪರಿಕ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಗುರಿಯಿದೆ. ಇದಕ್ಕೆ ಸ್ಥಳೀಯರಿಂದ ಸ್ವಲ್ಪ ವಿರೋಧ ವ್ಯಕ್ತವಾಗುತ್ತಿದೆ. ಸ್ಥಳೀಯ ನಾಯಕರಿಂದ ಮನವೊಲಿಸಿ, ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ ಎಂದು ಕೆಯುಐಡಿಎಫ್ಸಿ ವ್ಯವಸ್ಥಾಪಕ ನಿರ್ದೇಶಕ ಎ.ಬಿ. ಇಬ್ರಾಹಿಂ ತಿಳಿಸುತ್ತಾರೆ.

ಇತ್ತೀಚೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರಿಂದ ಕಾಮಗಾರಿ ಪ್ರಗತಿ ತುಸು ಚುರುಕುಗೊಂಡಿದೆ. ಅರಣ್ಯ ಇಲಾಖೆ ಬಾದಾಮಿ ರಸ್ತೆಗೆ ಅಗತ್ಯವಿರುವ ಕಲ್ಲುಗಳನ್ನು ಪೂರೈಸಲಿಕ್ಕೂ ಮನಸ್ಸು ಮಾಡಿದೆ ಎಂದು ಮಾಹಿತಿ ನೀಡಿದರು.

ಬಾದಾಮಿ ಯಾಕೆ ಮಹತ್ವದ್ದು?
ದಕ್ಷಿಣ ಭಾರತದಲ್ಲಿ ಗುಹಾಂತರ ದೇವಾಲಯಗಳು ಹಾಗೂ ಬಿಡಿ ದೇವಸ್ಥಾನಗಳು ಕಂಡು ಬಂದಿದ್ದು ಕರ್ನಾಟಕದಲ್ಲೇ ಮೊದಲು. ಈ ಮೂಲಕ ವಾಸ್ತು ಮತ್ತು ಮೂರ್ತಿ ಶಿಲ್ಪಗಳ ಪ್ರಯೋಗ ಬಾದಾಮಿ, ಪಟ್ಟದಕಲ್ಲಿನಲ್ಲಿ ನಡೆಯಿತು. ನಂತರ ಎಲ್ಲೆಡೆ ಅದು ಹರಡಿತು. ಈ ದೃಷ್ಟಿಯಿಂದ ಬಾದಾಮಿ ತುಂಬಾ ಮಹತ್ವ ಪಡೆದುಕೊಂಡಿದೆ. ಬಹುಶಃ ಇದೇ ಕಾರಣಕ್ಕಾಗಿ ಕೇಂದ್ರ ಸರ್ಕಾರವು ‘ಹೃದಯ’ ಯೋಜನೆ ಅಡಿ ಆಯ್ಕೆ ಮಾಡಿಕೊಂಡಿರಬಹುದು ಎಂದು ದೇವರಕೊಂಡಾರೆಡ್ಡಿ ತಿಳಿಸಿದ್ದಾರೆ.

– ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next