Advertisement

ದೇವೇಗೌಡರು-ಸಿಎಂ ಬೊಮ್ಮಾಯಿ ಭೇಟಿಗೆ ರಾಜಕೀಯ ಬಣ್ಣ ಬೇಡ

05:19 PM Aug 15, 2021 | Team Udayavani |

ಹಾಸನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರನ್ನು ಭೇಟಿ ಮಾಡಿದ್ದು ತಪ್ಪು ಎಂದು ಹೇಳಲಾಗದು. ಮುಖ್ಯಮಂತ್ರಿಯವರ ನಡೆಯನ್ನು ಪಕ್ಷದ ಯಾವ ಕಾರ್ಯಕರ್ತನೂ ಪ್ರಶ್ನೆ ಮಾಡಬಾರದು ಎಂದು ಜಿಲ್ಲಾ ಬಿಜೆಪಿ
ಅಧ್ಯಕ್ಷ ಎಚ್‌.ಕೆ.ಸುರೇಶ್‌ ಪ್ರತಿಕ್ರಿಯಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕಾರಣಿಗಳು ಒಬ್ಬರನ್ನೊಬ್ಬರು ಭೇಟಿಯಾಗುವುದು ಹೊಸದೇನೂ ಅಲ್ಲ. ಬಿ.ಎಸ್‌
.ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿದ್ದರು. ದೇವೇಗೌಡರು ಪ್ರಧಾನಿ ಮೋದಿ ಅವರ ನಿವಾಸಕ್ಕೆ ಹೋಗಿದ್ದಾಗ ಮೋದಿಯವರೇ ಬಾಗಿಲಿಗೆ ಬಂದು ದೇವೇಗೌಡರನ್ನು ಸ್ವಾಗತಿಸಿದ್ದರು. ಹಾಗಾಗಿ ದೇವೇಗೌಡರು ಮತ್ತು ಬಸವರಾಜ ಬೊಮ್ಮಾಯಿ ಅವರ ಭೇಟಿಗೆ ರಾಜಕೀಯ ಬಣ್ಣ ಕಟ್ಟುವುದು ಬೇಡ ಎಂದು ಬಿಜೆಪಿ ಶಾಸಕ ಪ್ರೀತಂ ಜೆ.ಗೌಡ ಅವರ ನಿಲುವನ್ನು ಪರೋಕ್ಷವಾಗಿ ಖಂಡಿಸಿದರು.

ಇದನ್ನೂ ಓದಿ:ಸಚಿವ ಈಶ್ವರಪ್ಪ ಮತ್ತು ಸಿ.ಟಿ.ರವಿ ನಾಲಾಯಕರು : ಧ್ರುವನಾರಾಯಣ್

ದೇವೇಗೌಡರು ಹಿರಿಯರು. ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ.ಮುಖ್ಯಮಂತ್ರಿಯವರು ದೇವೇಗೌಡರು ಭೇಟಿಯಾಗಿದ್ದರ ಬಗ್ಗೆ ಬಿಜೆಪಿ ಕಾರ್ಯಕರ್ತರಿಗೆ ಅಸಮಾಧಾನವಿದ್ದರೆ ಜವಾಬ್ದಾರಿಯಿರುವ ನಮ್ಮಂಥವರು ತಿಳುವಳಿಕೆ ಹೇಳಿ ಸಮಾಧಾನ ಮಾಡಬೇಕು. ಅದನ್ನು ನಾವು ಮಾಡಿದ್ದೇವೆ. ಶಾಸಕ ಪ್ರೀತಂಗೌಡ ಅವರನ್ನು ಸಿಎಂ ಕರೆಸಿಕೊಂಡು ತಿಳಿವಳಿಕೆ ಹೇಳಿದ್ದಾರೆ. ಈಗ ವಿವಾದ ಬಗೆಹರಿದಿದೆ ಎಂದು ಸ್ಪಷ್ಟಪಡಿಸಿದರು.

17 ರಂದು ಕೇಂದ್ರ ಸಚಿವೆ ಶೋಭಾ ಭೇಟಿ:
ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಆ.17 ರಂದು ಹಾಸನ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಅವರು ಮೈಸೂರಿನ ಪ್ರವಾಸ ಮುಗಿಸಿ ಹಾಸನಕ್ಕೆ ಆಗಮಿಸುವರು. ಅವರನ್ನು ಸ್ವಾಗತಿಸಲು ಜಿಲ್ಲಾ ಬಿಜೆಪಿ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದರು.

Advertisement

ಸವಲತ್ತು ಒದಗಿಸಲು ಮನವಿ: ಕೇಂದ್ರ ಸಚಿವರು ಆಗಮಿಸಿದ ಸಂದರ್ಭದಲ್ಲಿ ಜಿಲ್ಲೆಯ ಪ್ರಮುಖ ಬೆಳೆ ಆಲೂಗಡ್ಡೆ ಬೆಳೆಗೆ ಮತ್ತು ಬೆಳೆಗಾರರಿಗೆ ಕೇಂದ್ರ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಒದಗಿಸುವಂತೆ ಹಾಗೂ ಹಾಸನ- ಬೇಲೂರು – ಚಿಕ್ಕಮಗಳೂರು ರೈಲು ಮಾರ್ಗಕ್ಕೆ ಅನುದಾನ ಕಲ್ಪಿಸುವ ಬಗ್ಗೆಯೂ ಗಮನ ಸೆಳೆಯಲಾಗುವುದು ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಮುಖಂಡ ಎಚ್‌. ಎಂ.ವಿಶ್ವನಾಥ್‌ ಮಾತನಾಡಿ, ಕಾಫಿ ಬೆಳೆಗಾರರು ಬ್ಯಾಂಕ್‌ಗಳಲ್ಲಿ ಪಡೆದ ಸಾಲ ಸುಸ್ತಿಯಾಗಿದ್ದರೆ ನೇರವಾಗಿ ಕಾಫಿ ತೋಟವನ್ನು ಬ್ಯಾಂಕುಗಳು ಹರಾಜು ಹಾಕುವ ನಿಯಮ ಹಿಂತೆಗೆದುಕೊಳ್ಳುವುದು, ಎತ್ತಿನಹೊಳೆ ಯೋಜನೆಯಡಿ ಭೂ ಮಾಲೀಕರಿಗೆ ಪರಿಹಾರ ಹಾಗೂ ರಾಷ್ಟ್ರೀಯ ಹೆದ್ದಾರಿ – 75 ಕಾಮಗಾರಿ ಚುರುಕುಗೊಳಿಸುವ ಬಗ್ಗೆಯೂ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ಬಿಜೆಪಿ ರಾಷ್ಟ್ರೀಯ ಪರಿಷತ್‌ ಸದಸ್ಯ ನವಿಲೆ ಅಣ್ಣಪ್ಪ,ರಾಜ್ಯ ಕಾರ್ಯಕಾರಣಿ ಸದಸ್ಯಕಾಟೀಕೆರೆ ಪ್ರಸನ್ನ ಕುಮಾರ್‌, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ
ರೇಣುಕುಮಾರ್‌, ಖಜಾಂಚಿ ಪ್ರಸನ್ನಕುಮಾರ್‌ ಅವರೂ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next