Advertisement

ವಿಧ್ವಂಸಕ ಕೃತ್ಯ ತಡೆಗೆ ಮುಂದಾಗಿ

09:10 PM Apr 27, 2019 | Team Udayavani |

ದೇವನಹಳ್ಳಿ: ಭದ್ರತೆ ಹಾಗೂ ರಕ್ಷಣೆ ಕೇವಲ ಪೊಲೀಸ್‌ ಇಲಾಖೆ ಜವಾಬ್ದಾರಿ ಎಂಬ ಭಾವನೆ ಇಟ್ಟುಕೊಳ್ಳಬೇಡಿ. ಪೊಲೀಸರೊಂದಿಗೆ ಸಹಕರಿಸುವ ಮೂಲಕ ವಿಧ್ವಂಸಕ ಕೃತ್ಯಗಳನ್ನು ಮಟ್ಟ ಹಾಕಲು ಮುಂದಾಗಬೇಕು ಎಂದು ಪೊಲೀಸ್‌ ಮಹಾ ನಿರೀಕ್ಷಕ ಶರತ್‌ಚಂದ್ರ ಸಾರ್ವಜನಿಕರಿಗೆ ಮನವಿ ಮಾಡಿದರು.

Advertisement

ಬೆಂಗಳೂರಿನಲ್ಲಿರುವ ಗ್ರಾಮಾಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ನಡೆದ ವಿಧ್ವಂಸಕ ಕೃತ್ಯಗಳ ತಡೆಗೆ ಸಂಬಂಧಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಕ್ಷಣೆ ವಿಚಾರದಲ್ಲಿ ಉದಾಸೀನ ಬೇಡ: ಶ್ರೀಲಂಕಾ ಬಾಂಬ್‌ ಸ್ಫೋಟದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ ಕಟ್ಟೆಚ್ಚರ ವಹಿಸಲು ಪೊಲೀಸ್‌ ಇಲಾಖೆ ಮುಂದಾಗಿದೆ. ವಿಧ್ವಂಸಕ ಕೃತ್ಯಗಳನ್ನು ತಡೆಗಟ್ಟುವಲ್ಲಿ ಹಾಗೂ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಸಾರ್ವಜನಿಕರ ಸಹಕಾರ ಅಗತ್ಯವಿದೆ. ಜನರ ರಕ್ಷಣೆಗಾಗಿ ಸಾರ್ವಜನಿಕರ ರಕ್ಷಣಾ ಕಾಯ್ದೆ ಜಾರಿ ಮಾಡಲಾಗಿದೆ. ಸಾರ್ವಜನಿಕರ ರಕ್ಷಣೆ ಪ್ರತಿಯೊಬ್ಬರ ಹೊಣೆ. ಈ ಬಗ್ಗೆ ಯಾರೂ ನಿರ್ಲಕ್ಷ ಮಾಡಬಾರದು ಎಂದು ಹೇಳಿದರು.

ವಿಧ್ವಂಸಕ ಕೃತ್ಯಕ್ಕೆ ಭದ್ರತಾ ಲೋಪವೇ ಕಾರಣ: ನೂರಾರು ಜನ ಸೇರುವ ಸಾರ್ವಜನಿಕ ಸ್ಥಳಗಳಲ್ಲಿ ಭದ್ರತೆ ಕಾಪಾಡುವುದು, ಮಾಲ್‌, ಹೋಟೆಲ್‌, ಸಿನಿಮಾ ಮಂದಿರ ಮತ್ತು ಧಾರ್ಮಿಕ ಕೇಂದ್ರಗಳಲ್ಲಿ ವಿಧ್ವಂಸಕ ಕೃತ್ಯಗಳಿಗೆ ಅವಕಾಶವಾಗದಂತೆ ಎಚ್ಚರಿಕೆ ವಹಿಸುವುದು ಸಂಬಂಧಪಟ್ಟ ಅಧಿಕಾರಿಗಳ ಕರ್ತವ್ಯವಾಗಿದೆ. ಕಾಟಾಚಾರದ ತಪಾಸಣೆ ನಡೆಸುವುದು ಗಮನಕ್ಕೆ ಬಂದಿದೆ.

ಭದ್ರತಾ ಲೋಪವೇ ವಿಧ್ವಂಸಕ ಕೃತ್ಯಗಳಿಗೆ ಕಾರಣ. ಹೀಗಾಗಿ ತಂತ್ರಾಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಭದ್ರತಾ ಸಿಬ್ಬಂದಿಗೆ ಸರಿಯಾದ ತರಬೇತಿ ನೀಡಬೇಕು. ವಸತಿ ಗೃಹಗಳಲ್ಲಿ ತಂಗುವ ಗ್ರಾಹಕರ ಸಂಪೂರ್ಣ ಮಾಹಿತಿ ಪಡೆದಿರಬೇಕು ಎಂದು ತಿಳಿಸಿದರು.

Advertisement

ಸಿಸಿ ಕ್ಯಾಮರಾ ಅಳವಡಿಕೆ ಅಗತ್ಯ: ಕಚೇರಿ, ಅಂಗಡಿ ಮತ್ತು ಮಾಲ್‌ಗ‌ಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮಾಡುತ್ತಿಲ್ಲ. ಅದನ್ನು ಕಡ್ಡಾಯವಾಗಿ ಆಳವಡಿಸಿಕೊಳ್ಳಬೇಕು. ಫ್ಯಾಕ್ಟರಿ, ಕಚೇರಿ ಅಥವಾ ಇನ್ನಿತರೆ ಕಡೆಗಳಲ್ಲಿ ಭದ್ರತಾ ಸಿಬ್ಬಂದಿ ನೇಮಿಸಿಕೊಳ್ಳುವುದಕ್ಕೂ ಮುನ್ನ ಅವರ ಪೂರ್ವಾಪರ ತಿಳಿದುಕೊಳ್ಳಬೇಕು ಮತ್ತು ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಿ ಅಗತ್ಯ ದಾಖಲೆಗಳನ್ನು ಪಡೆದು ನೇಮಿಸಿಕೊಳ್ಳಬೇಕು.

ಯಾವುದೇ ಘಟನೆ ನಡೆಯದಂತೆ ಹೆಚ್ಚಿನ ನಿಗಾ ವಹಿಸಬೇಕು. ಸಭೆ, ಸಮಾರಂಭಗಳನ್ನು ನಡೆಸುವಾಗ ಸಂಬಂಧಪಟ್ಟ ತಮ್ಮ ಸರಹದ್ದಿನ ಪೊಲೀಸ್‌ ಠಾಣೆಗೆ ತಪ್ಪದೇ ಮಾಹಿತಿ ನೀಡಬೇಕು. ಸಭೆ, ಸಮಾರಂಭಗಳಿಗೆ ಆಗಮಿಸುವ ಅಪರಿಚಿತ ವ್ಯಕ್ತಿಗಳ ಬಗ್ಗೆ ಮತ್ತು ಅವರ ಲಗೇಜ್‌ಗಳ ಬಗ್ಗೆ ನಿಗಾ ವಹಿಸಬೇಕು. ಅನುಮಾನ ಬಂದಲ್ಲಿ ಕೂಡಲೇ ಪೊಲೀಸ್‌ ಠಾಣೆಗೆ ಮಾಹಿತಿ ನೀಡುವ ಮೂಲಕ ಸಹಕರಿಸಬೇಕೆಂದರು.

ಅಕ್ರಮ ಚಟುವಟಿಕೆ ಮಾಹಿತಿ ನೀಡಿ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ರಾಮ್‌ನಿವಾಸ್‌ ಸೆಪಟ್‌ ಮಾತನಾಡಿ, ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ಮಾಹಿತಿ ನೀಡಬೇಕು. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಟ್ಟು, ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಮಾಲ್‌, ಹೋಟೆಲ್‌ಗ‌ಳಲ್ಲಿ ಮೆಟಲ್‌ ಡಿಟೆಕ್ಟರ್‌ ಬಳಸಬೇಕು. ಸಾರ್ವಜನಿಕ ಸಭೆ, ಸಮಾರಂಭಗಳನ್ನು ಆಯೋಜಿಸುವ ಮುನ್ನಾ ಪೊಲೀಸರಿಗೆ ಮಾಹಿತಿ ನೀಡಬೇಕು.

ಸ್ಥಳೀಯ ಪೊಲೀಸರ ಸಂಖ್ಯೆಯನ್ನು ನೋಟ್‌ ಮಾಡಿಕೊಳ್ಳಬೇಕು. ವಿಧ್ವಂಸಕ ಕೃತ್ಯಗಳಿಗೆ ಧಾರ್ಮಿಕ ಕೇಂದ್ರಗಳು ಗುರಿಯಾಗುತ್ತಿವೆ. ಇಂತಹ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಲಾಗುತ್ತಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ತೀರಾ ಅಗತ್ಯ. ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ಕೂಡಲೇ ಪೊಲೀಸರನ್ನು ಮಾಹಿತಿ ನೀಡಬೇಕೆಂದು ಹೇಳಿದರು.

ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ವಸತಿ ಗೃಹಗಳಿಗೆ ಆಗಮಿಸುವ ವ್ಯಕ್ತಿಗಳ ಹೆಸರು, ವಿಳಾಸ, ಪರಿಚಯ ಪತ್ರ ಮತ್ತು ಮೊಬೈಲ್‌ ನಂಬರ್‌ಗಳನ್ನು ತಪ್ಪದೇ ಪಡೆಯಬೇಕು. ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್‌ ಸ್ಫೋಟ ಘಟನೆ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ ಚರ್ಚ್‌, ದೇವಸ್ಥಾನಗಳು, ಮಾಲ್‌, ಹೋಟೆಲ್‌ ಮತ್ತಿತರ ಪ್ರಮುಖ ಸ್ಥಳಗಳಲ್ಲಿ ಈ ರೀತಿಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

ಎಲ್ಲರನ್ನೂ ಗೌರವಿಸಬೇಕು: ಜಿಲ್ಲೆಯಲ್ಲಿ ನೈಜೀರಿಯಾ ಪ್ರಜೆಗಳು ಹೆಚ್ಚು ಮಂದಿ ನೆಲಸಿದ್ದಾರೆ. ಅವರ ಬಗ್ಗೆ ನಿಗಾ ವಹಿಸುವುದು ಸೂಕ್ತ ಎಂದು ಇದೇ ವೇಳೆ ನೆಲಮಂಗಲ ವ್ಯಕ್ತಿಯೊಬ್ಬರು ಪೊಲೀಸರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ, ಎಲ್ಲವನ್ನೂ ಕಾಮಾಲೆ ಕಣ್ಣಿನಿಂದ ನೋಡುವುದು ಸರಿಯಲ್ಲ. ದೇಶದ ಪ್ರತಿ ವ್ಯಕ್ತಿಯನ್ನೂ ಗೌರವಿಸಬೇಕು.

ನೈಜೀರಿಯಾ ಅಥವಾ ಯಾವುದೇ ದೇಶದ ವ್ಯಕ್ತಿಯನ್ನು ದ್ವೇಷಿಸಬಾರದು. ಅವರಿಂದ ಅಕ್ರಮ ಚಟುವಟಿಕೆ ಕಂಡುಬಂದಲ್ಲಿ ಮಾಹಿತಿ ನೀಡಿದರೆ ನಿಮ್ಮ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಹೇಳಿದರು. ಈ ವೇಳೆ ಆನೇಕಲ್‌ ಡಿವೈಎಸ್‌ಪಿ ನಂಜುಂಡೇಗೌಡ, ನೆಲಮಂಗಲ ಡಿವೈಎಸ್‌ಪಿ ಪಾಂಡುರಂಗ, ಹೊಸಕೋಟೆ ಡಿವೈಎಸ್‌ಪಿ ಸಕ್ರಿ ಹಾಗೂ ಹಿರಿಯ, ಕಿರಿಯ ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಮತ್ತಿತರರು ಹಾಜರಿದ್ದರು. .

Advertisement

Udayavani is now on Telegram. Click here to join our channel and stay updated with the latest news.

Next