Advertisement

ಕೆರೆ ಆವರಣ ಹಸಿರಾಗಿಸುವ ಸಂಕಲ್ಪ

06:44 AM Jan 21, 2019 | |

ಬೆಂಗಳೂರು: ಕೆಂಪಾಂಬುಧಿ ಕೆರೆ ಸುತ್ತ ಹಚ್ಚಹಸಿರು ವಾತಾವರಣ ನಿರ್ಮಿಸುವ ಸಂಕಲ್ಪ ಅದಮ್ಯ ಚೇತನ ಸಂಸ್ಥೆಯದ್ದಾಗಿದೆ ಎಂದು ಸಂಸ್ಥೆ ಅಧ್ಯಕ್ಷೆ ಡಾ.ತೇಜಸ್ವಿನಿ ಅನಂತಕುಮಾರ್‌ ತಿಳಿಸಿದರು. ಅದಮ್ಯ ಚೇತನ ಸಂಸ್ಥೆಯಿಂದ ಕೆಂಪಾಂಬುಧಿ ಕೆರೆಯ ಬಳಿ ಹಮ್ಮಿಕೊಳ್ಳಲಾಗಿದ್ದ 160ನೇ ಹಸಿರು ಭಾನುವಾರ ಕಾರ್ಯಕ್ರಮದಲ್ಲಿ ಗಿಡ ನೆಟ್ಟು, ನಂತರ ಮಾತನಾಡಿದರು.

Advertisement

ನೀರಾವರಿ, ಅಂತರ್ಜಲಕ್ಕೆ ಪೂರಕವಾಗುವಂತೆ ಬೆಂಗಳೂರಿನಲ್ಲಿ ಕೆಂಪೇಗೌಡರು ಕೆರೆ ನಿರ್ಮಿಸಿದ್ದರು. ನಗರದ ಬೆಳವಣಿಗೆಗೆಂದು ಅವರು ವಿಶೇಷವಾದ ಯೋಜನೆಗಳನ್ನು ರೂಪಿಸಿ ಅದರಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುತ್ತಿದ್ದರು.

ಆ ನಕ್ಷೆಯಂತೆ ಇಂದು ಬೆಂಗಳೂರು ಬೆಳೆದಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ. ಬೆಂಗಳೂರಿನಲ್ಲಿ ನೆಲೆ ನಿಲ್ಲುವವರ ಸಂಖ್ಯೆ ಹೆಚ್ಚಾದಂತೆ ಸಮಸ್ಯೆಗಳೂ ಹೆಚ್ಚಾದವು. ಅದರಂತೆ ಐತಿಹಾಸಿಕ ಕೆಂಪಾಂಬುಧಿ ಕೆರೆ ಕೂಡ ವಿನಾಶದ ಅಂಚನ್ನು ತಲುಪಿತ್ತು ಎಂದು ಹೇಳಿದರು.

ಅನಂತಕುಮಾರ್‌ ನಗರಾಭಿವೃದ್ಧಿ ಸಚಿವರಾದ ನಂತರ ಕೆಂಪಾಂಬುಧಿ ಕೆರೆಯ ಅಭಿವೃದ್ಧಿಗಾಗಿ ಶ್ರಮಿಸಿದರು. 1 ಕೋಟಿ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಯೋಜನೆ ರೂಪಿಸಿ ಅನುಷ್ಠಾನಗೊಳಿಸಿದರು. ಅನಂತಕುಮಾರ್‌ ಅವರಿಂದ ಕೆರೆ ಇಂದು ಉತ್ತಮ ಸ್ಥಿತಿಯಲ್ಲಿದೆ ಎಂದು ತಿಳಿಸಿದರು.

ಕೆರೆ ಅಭಿವೃದ್ಧಿಗೆ ಅನಂತಕುಮಾರ್‌ ಅವರು ಸಾಕಷ್ಟು ಕನಸುಗಳನ್ನು ಕಂಡಿದ್ದರು. ಅಲ್ಲದೆ, ಸ್ಥಳೀಯ ಜನಪ್ರತಿನಿಧಿಗಳ ಸಹಯೋಗದಲ್ಲಿ ಅಭಿವೃದ್ಧಿ ಕಾರ್ಯಕ್ಕೂ ಕೈಹಾಕಿದ್ದರು. ಈ ಪ್ರಯತ್ನದ ಫ‌ಲವಾಗಿ ಜನವರಿ ತಿಂಗಳಿನಲ್ಲೂ ಕೆರೆಯಲ್ಲಿ ನೀರನ್ನು ಕಾಣಬಹುದಾಗಿದೆ ಎಂದು ವಿವರಿಸಿದರು.

Advertisement

ಕೆರೆ ಆವರಣದಲ್ಲಿ ವಾಸಿಸುತ್ತಿರುವ ಮಕ್ಕಳ ಕೈಯಲ್ಲಿ ಗಿಡ ನೆಡಿಸುವ ಮೂಲಕ ಅವರಲ್ಲಿ ಪರಿಸರ ಕಾಳಜಿ ಮೂಡಿಸುವುದು ನಮ್ಮ ಉದ್ದೇಶವಾಗಿದೆ. ಈ ಮಕ್ಕಳೇ ಮುಂದೆ ಈ ಗಿಡ ಮರಗಳ ಬೆಳವಣಿಗೆಯ ಜವಾಬ್ದಾರಿ ಹೊತ್ತುಕೊಳ್ಳಲಿರುವುದು ಸಂತಸದ ವಿಷಯ ಎಂದು ಹೇಳಿದರು.

ಕೆಂಪಾಂಬುಧಿ ಕೆರೆಯ ಗಂಗಾ ಮಾತೆಗೆ ಹಸಿರು ಸೀರೆ ಹೊದಿಸಬೇಕೆಂಬ ಸಂಕಲ್ಪದಿಂದ ಪ್ರತಿ 10ನೇ ಭಾನುವಾರ ಕೆರೆಯ ಆವರಣದಲ್ಲಿ ಗಿಡ ನೆಟ್ಟು, ಅದಮ್ಯ ಚೇತನದಲ್ಲಿ ಅಕ್ಕಿ ತೊಳೆದ ನೀರನ್ನು ಈ ಗಿಡಗಳಿಗೆ ಹಾಕಿ ಪೋಷಿಸಲಾಗುವುದು ಎಂದು ತಿಳಿಸಿದರು.

ಬಿಜೆಪಿ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಸದಾಶಿವ ಮಾತನಾಡಿ, ಹಲವಾರು ವರ್ಷಗಳಿಂದ ಹಾಳಾಗಿದ್ದ ಕೆಂಪಾಂಬುಧಿ ಕೆರೆಗೆ ಅನಂತಕುಮಾರ್‌ ಅವರು ಹೆಚ್ಚಿನ ಅನುದಾನ ಒದಗಿಸಿ ಅಭಿವೃದ್ಧಿಯಾಗುವಂತೆ ಮಾಡಿದ್ದಾರೆ. ನೀರಿಲ್ಲದ ಕೆರೆಯನ್ನು ಆಟದ ಮೈದಾನವನ್ನಾಗಿ ಮಾಡಲು ಕೆಲವು ರಾಜಕಾರಣಿಗಳು ಯೋಚಿಸಿದ್ದರು. ಆದರೆ ಅನಂತಕುಮಾರ್‌ ಅವರ ನೆರವಿನಿಂದ ಕೆಂಪಾಂಬುಧಿ ಕೆರೆಯಲ್ಲಿ ನೀರು ತುಂಬುವಂತಾಗಿದೆ ಎಂದು ಹೇಳಿದರು.

ಸಾರ್ವಜನಿಕರ ಅಸಮಾಧಾನ: ಹಸಿರು ಭಾನುವಾರದ ಹೆಸರಿನಲ್ಲಿ ವಾರಕ್ಕೊಂದು ದಿನ ಗಿಡ ನೆಟ್ಟು ಹೋಗುತ್ತಾರೆ. ಅವುಗಳ ಪೋಷಣೆಗೆ ಮುಂದಾಗುವುದಿಲ್ಲ. ಕೆಂಪಾಂಬುಧಿ ಕೆರೆ ಅಭಿವೃದ್ಧಿಗೆಂದು ಪ್ರತಿವರ್ಷ ಅನುದಾನ ಬಿಡುಗಡೆ ಮಾಡಲಾಗುತ್ತದೆ.

ಆದರೆ ಆ ಹಣವನ್ನು ಸಮಗ್ರವಾಗಿ ಬಳಸುತ್ತಿಲ್ಲ. ಗಿಡಗಳಿಗೆ ನೀರು ಹಾಕುವವರಿಲ್ಲದೆ ಒಣಗುತ್ತಿವೆ. ಕೆಂಪಾಂಬುಧಿ ಉದ್ಯಾನವನಕ್ಕೆ ಭದ್ರತಾ ಸಿಬ್ಬಂದಿಯನ್ನು ನೇಮಿಸಿಲ್ಲ. ಇದರಿಂದ ಹಲವು ಸಮಸ್ಯೆಗಳಾಗುತ್ತಿವೆ ಎಂದು ಕೆಲ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next