Advertisement

ಅವನತಿಯತ್ತ ಸಾಗಿದೆ ವೆಂಗಯ್ಯನ ಕೆರೆ

07:19 AM Jun 09, 2019 | Team Udayavani |

ಕೆ.ಆರ್‌.ಪುರ: ಒಂದೊಮ್ಮೆ ಪ್ರವಾಸಿಗರನ್ನು ಕೈಬಿಸಿ ತನ್ನತ್ತ ಕರೆಯುತ್ತಿದ್ದ ಕೃಷ್ಣರಾಜಪುರದ ಹಗಲು ಕನಸಿನ ವ್ಯಂಗಯ್ಯನ ಕೆರೆ, ಕಲುಷಿತ ನೀರು ಸೇರ್ಪಡೆ ಮತ್ತು ನಿರ್ವಹಣೆಯಿಲ್ಲದೆ ಅವನತಿಯತ್ತ ಸಾಗಿದೆ.

Advertisement

ಕೆ.ಆರ್‌.ಪುರದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 75ರ ಪಕ್ಕ ಇರುವ ವೆಂಗಯ್ಯನ ಕೆರೆ, ಹಿಂದೆ ಪರಿಸರ ಪ್ರೇಮಿಗಳ ನೆಚ್ಚಿನ ಪ್ರವಾಸಿ ತಾಣವಾಗಿತ್ತು. ವಾರಾಂತ್ಯದ ದಿನಗಳು ಹಾಗೂ ರಜೆ ದಿನಗಳಂದು ಕೆ.ಆರ್‌.ಪುರ ಸುತ್ತಮುತ್ತಲ ಪ್ರದೇಶಗಳು, ಬೆಂಗಳೂರಿನ ವಿವಿಧ ಭಾಗಗಳ ಜನ ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಕೆರೆಗೆ ಬಂದು, ಕೆರೆ ಅಂಗಳದಲ್ಲಿ ಕೂರು ಸಂತೋಷದಿಂದ ಸಮಯ ಕಳೆಯುತ್ತಿದ್ದರು.

ಕಾಲ ಕ್ರಮೇಣ ಕೆರೆ ಸುತ್ತಲ ಪ್ರದೇಶದಲ್ಲಿ ಜನವಸತಿ ಪ್ರದೇಶಗಳು ಅಭಿವೃದ್ಧಿ ಹೊಂದಿದವು. ಬಡಾವಣೆಯ ಮನೆಗಳು, ಅಪಾರ್ಟ್‌ಮೆಂಟ್‌ಗಳ ತ್ಯಾಜ್ಯ ನೀರು (ಡ್ರೈನೇಜ್‌ ನೀರು) ರಾಜಕಾಲುವೆಗಳ ಮೂಲಕ ಕೆರೆ ಸೇರಲಾರಂಭಿಸಿತು. ಕೊಳಚೆ ನೀರನ್ನು ಒಡಲೊಳಗೆ ತುಂಬಿಕೊಂಡ ಕೆರೆಯಿಂದ ಕ್ರಮೇಣ ದುರ್ವಾಸನೆ ಹೊಮ್ಮತೊಡಗಿತು.

ಹಾಗೇ ಜನ ಕೂಡ ಕೆರೆಯಿಂದ ದೂರಾಗತೊಡಗಿದರು. ಆದರೆ ಡ್ರೈನೇಜ್‌ ನೀರನ್ನು ಕೆರೆಗೆ ಹರಿಸಿದ್ದನ್ನು ಯಾರೂ ಪ್ರಶ್ನಿಸಲಿಲ್ಲ. ಅಧಿಕಾರಿಗಳಂತೂ ಅತ್ತ ತಿರುಗಿ ಕೂಡ ನೋಡಲಿಲ್ಲ. ಈ ನಡುವೆ ಕೆರೆಯನ್ನು ಅಭಿವೃದ್ಧಿಪಡಿಸಿ ಮತ್ತೂಮ್ಮೆ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು 2000 ದಲ್ಲಿ ಸಂಸ್ಥೆಯೊಂದಕ್ಕೆ 20 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಯಿತು.

ಆದರೆ, ಗುತ್ತಿಗೆ ಅವಧಿ ಮುಗಿಯುವ ಮುನ್ನವೇ ಆ ಸಂಸ್ಥೆ, ಕೆರೆ ನಿರ್ವಹಣೆಯಿಂದ ಹಿಂದೆ ಸರಿಯಿತು. ಕೆರೆ ಮಧ್ಯೆ ದ್ವೀಪ ನಿರ್ಮಿಸಿ, ವಾಕಿಂಗ್‌ ಟ್ರ್ಯಾಕ್‌, ಮಕ್ಕಳ ಆಟಿಕೆ, ದೋಣಿ ವಿಹಾರ ವ್ಯವಸ್ಥೆ ಮಾಡಲಾಗಿತ್ತು. ಆದರೆ, 65 ಎಕರೆ ವಿಸ್ತಿರ್ಣದ ವೆಂಗಯ್ಯನ ಕೆರೆ ಕೊಳಕು ನೀರಿನಿಂದ ತುಂಬಿ, ಜೊಂಡು ಆವರಿಸಿಕೊಂಡು, ಕೆರೆ ನೀರಿನ ಬಣ್ಣ ಕಡುಗಪ್ಪು ಬಣ್ಣಕ್ಕೆ ತಿರುಗಿದ ನಂತರ ದೋಣಿ ವಿಹಾರ ಸ್ಥಗಿತಗೊಂಡಿದೆ. ನೀರು ಕಲುಷಿತಗೊಂಡಿದ್ದರಿಂದ ಮತ್ತು ಆಮ್ಲಜನಕದ ಕೊರತೆಯಿಂದ ಜಲಚರಗಳು ಮೃತಪಟ್ಟಿದೆ.

Advertisement

ಕೆರೆಯ ಪಶ್ಚಿಮ ಭಾಗದಲ್ಲಿ ರಾಮಮೂರ್ತಿನಗರ, ಲಕ್ಷ್ಮಣಮೂರ್ತಿನಗರ, ಕೌದೇನಹಳ್ಳಿ ಭಾಗದ ಚರಂಡಿ ಕೊಳೆಚೆ ನೀರು ಸೇರ್ಪಡೆಯಾದರೆ, ಕೆ.ಆರ್‌.ಪುರದ ಬಡಾವಣೆಗಳ ಕೊಳಚೆ ನೀರು ದಕ್ಷಿಣ ಭಾಗದಲ್ಲಿ ಕೆರೆ ಸೇರುತ್ತದೆ. ಇನ್ನು ಕೆರೆಯ ಪಶ್ಚಿಮ ಭಾಗದಲ್ಲಿ 20 ಎಂಎಲ್‌ಡಿ ಸಾಮರ್ಥ್ಯದ ನೀರು ಶುದ್ಧೀಕರಣ ಘಟಕವಿದ್ದರೂ ಪ್ರಯೋಜನವಾಗುತ್ತಿಲ್ಲ.

ಪ್ರಸುತ್ತ ನಿರ್ವಹಣೆ ಹೊಣೆ ಹೊತ್ತಿರುವ ಅರಣ್ಯ ಇಲಾಖೆ, ಕೆರೆ ಅಭಿವೃದ್ಧಿಗೆ ಹಣವಿಲ್ಲ ಎನ್ನುತ್ತಿದೆ. ಆದರೆ, ಕೆರೆ ಕಲುಷಿತಗೊಳ್ಳಲು ಮತ್ತು ಕೆರೆ ಆವರಣ ಅನೈತಿಕ ಚಟುವಟಿಕೆಗಳ ತಾಣವಾಗಲು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂಬುದು ಸಾರ್ವಜನಿಕರ ಆರೋಪ.

ಕೆಲವರು ರಾತ್ರೋರಾತ್ರಿ ಕಟ್ಟಡ ತ್ಯಾಜ್ಯ ತಂದು ಕೆರೆಗೆ ಸುರಿಯುತ್ತಿದ್ದಾರೆ. ಕೆ.ಆರ್‌.ಪುರ ಸುತ್ತಮುತ್ತ ಸಂಗ್ರಹವಾಗುವ ಕಸವನ್ನು ಕೆರೆ ಅಂಗಳದಲ್ಲಿ ಬೇರ್ಪಡಿಸಿ ನಂತರ ಕಸಕ್ಕೆ ಬೆಂಕಿ ಇಡುತ್ತಾರೆ. ಇದರಿಂದ ಕೆರೆ ಮತ್ತಷ್ಟು ಮಲಿನಗೊಂಡಿದೆ. ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಕೆರೆ ಕಣ್ಮರೆಯಾಗುತ್ತಿದೆ.
-ಲಕ್ಷ್ಮಣ, ರತ್ನ ಭಾರತ ರೈತ ಸಮಾಜದ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next