Advertisement

ಲೋಕ ಜಯದ ವಿಶ್ವಾಸ ಅದಮ್ಯ ಮಾದರಿ ನಗರವಾಗಿಸುವ ಗಮ್ಯ

12:17 PM Apr 14, 2019 | pallavi |
ಹುಬ್ಬಳ್ಳಿ: ಕೇಂದ್ರದಲ್ಲಿ ಮತ್ತೂಮ್ಮೆ ಮೋದಿ ಸರಕಾರ ಬಂದ ಮೇಲೆ ರಾಜ್ಯದಲ್ಲೂ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲಿದೆ. ಹು-ಧಾ ಅವಳಿ ನಗರವೂ ದೇಶದ ಜನ ತಿರುಗಿ ನೋಡುವಂತೇ ಬದಲಾಗಲಿದೆ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.
ಕೇಶ್ವಾಪುರದಲ್ಲಿ ಜೈನ ಸಂಘ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರದ
ಅಸಹಕಾರದ ಮಧ್ಯೆಯು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಆದರೆ ಇನ್ಮುಂದೆ ಕೇಂದ್ರದಲ್ಲಿ ಮೋದಿ ಸರಕಾರ ರಚನೆಯಾಗಿ ರಾಜ್ಯದಲ್ಲೂ ನಮ್ಮ ಸರಕಾರವೇ ಬರುವುದರಿಂದ ಸ್ಥಳೀಯ ಶಾಸಕರ ಸಹಕಾರದಿಂದ ಅತ್ಯುತ್ತಮ ಕಾರ್ಯಗಳನ್ನು ಮಾಡುವ ಯೋಜನೆ ಹಾಕಿಕೊಂಡಿದ್ದೇನೆ. ದೇಶವೇ ತಿರುಗಿ ನೋಡುವಂತಹ ಸ್ಮಾರ್ಟ್‌ ಸಿಟಿ ಮಾಡುವ ಹೆಬ್ಬಯಕೆ ನನ್ನದು ಎಂದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮಾತನಾಡಿ, ಭಾರತ ಮಾತ್ರವಲ್ಲದೆ ವಿಶ್ವದ ಇತರೆ ದೇಶದ ಪ್ರಜೆಗಳು ಸಹಿತ ಮೋದಿ ಅವರಂಥ ನಾಯಕನನ್ನು ಬಯಸುತ್ತಿದ್ದಾರೆ.
ಭಾರತವೆಂದರೆ ಕೀಳಾಗಿ ಕಾಣುತ್ತಿದ್ದ ದೇಶಗಳೆಲ್ಲ ಇಂದು ಅತ್ಯಂತ ಗೌರವದಿಂದ ಕಾಣುತ್ತಿವೆ. ಆ ಮೂಲಕ ಭಾರತೀಯರ ಗೌರವ ಹೆಚ್ಚಾಗಿದೆ. ಜಗತ್ತೇ ತಲೆಬಾಗುವ ಮೋದಿ ಅವರನ್ನು ಮತ್ತೂಮ್ಮೆ ಪ್ರಧಾನಿಯನ್ನಾಗಿಸಲು ಪ್ರಹ್ಲಾದ ಜೋಶಿ ಅವರನ್ನು ಅತ್ಯಂತ ಬಹುಮತದಿಂದ ಆರಿಸಿ ತರಬೇಕು ಎಂದು ಹೇಳಿದರು.
ಮಾಜಿ ಸಂಸದ ಮಂಜುನಾಥ ಕುನ್ನೂರ, ಭವರಲಾಲ್‌ ಜೈನ, ಮೇನಕಾ ಹುರಳಿ, ಮುತ್ತು ಪಾಟೀಲ, ನಾಗೇಶ ಕಲಬುರ್ಗಿ,
ಮಹೇಂದ್ರ ಕೌತಾಳ, ರವಿ ದಂಡಿನ, ರಾಯನಗೌಡ್ರ, ಪ್ರವೀಣ ಹುರಳಿ, ಶೇಖರಗೌಡ ಸೋಮನಗೌಡ್ರ, ಸುರೇಶ ಜೈನ ಮೊದಲಾದವರಿದ್ದರು.
ಮೋದಿ ಅವರನ್ನೇ ಮತ್ತೂಮ್ಮೆ ಪ್ರಧಾನಿ ಮಾಡಿ 
ಧಾರವಾಡ: ಅಟಲ್‌ ಬಿಹಾರಿ ವಾಜಪೇಯಿ ಅವರನ್ನು ಮತ್ತೆ ಪ್ರಧಾನಿ ಮಾಡಿದ್ದರೆ ಇಂದು ದೇಶದ ಚಿತ್ರಣವೇ ಬೇರೆ ಆಗಿರುತ್ತಿತ್ತು. ದೇಶದ ಹಿತದೃಷ್ಟಿಯಿಂದ ನಾವಿಂದು ನರೇಂದ್ರ ಮೋದಿ ಅವರನ್ನು ಕೈ ಬಿಡಬಾರದು ಎಂದು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಹೇಳಿದರು.
ಹುರಕಡ್ಲಿ ಕಾಲೇಜು ಮೈದಾನದಲ್ಲಿ ಶನಿವಾರ ಸಂಜೆ ಬಿಜೆಪಿಯಿಂದ ಜರುಗಿದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮೋದಿ ಅವರೊಬ್ಬ ವ್ಯಕ್ತಿಯಲ್ಲ. ಬದಲಾಗಿ ಶಕ್ತಿ. ನಾವು ಎಷ್ಟೇ ಮೋದಿ ಅವರನ್ನು ಹೊಗಳಬಹುದು. ಆದರೆ ಮೋದಿ ಅವರಿಗೆ ಮತ ಹಾಕುತ್ತೇವೆ ಎನ್ನುವ ಯುವ ಪೀಳಿಗೆ ಇದು ಪ್ರಜಾಪ್ರಭುತ್ವದ ಶಕ್ತಿ. ದೇಶದ ಅತ್ಯಂತ ಸಾಮಾನ್ಯರಲ್ಲಿ ಸಾಮಾನ್ಯ ಮೋದಿ ಅವರಿಗೆ ಸಾಮಾನ್ಯರ ಸಮಸ್ಯೆಗಳು ಗೊತ್ತಿವೆಯೇ ಹೊರತು ಶ್ರೀಮಂತ ಪ್ರಧಾನಿಗಳಿಗಲ್ಲ. ಮೋದಿ ದೇಶ ವಿಕಾಸಕ್ಕಾಗಿ ಬಡಿದಾಡಿದರೆ ವಿಪಕ್ಷಗಳು ಮಹಾ ಘಟಬಂಧನ್‌ ಮಾಡಿ ಮೋದಿ ಹಟಾವೋ ಎನ್ನುತ್ತಾರೆ. ಅವರದ್ದು ಅದೇ ಸಿಂಗಲ್‌ ಅಜೆಂಡಾ ಎಂದರು.
ಬುದ್ಧಿಜೀವಿಗಳ ಹೆಡ್‌ ಕ್ವಾರ್ಟರ್ಸ್‌ ಆಗಿರುವ ಧಾರವಾಡದ ಜನತೆ ಆಲೋಚಿಸಿ ದೇಶದ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ಹಾಕಬೇಕು. ಬ್ರಿಟಿಷ್‌ ಕಾಲದಲ್ಲಿ ಬಂದಿದ್ದ 1200ಕ್ಕೂ ಹೆಚ್ಚು ಕಾಯ್ದೆಗಳನ್ನು ಮೋದಿ ಅವರು ನಿರ್ನಾಮ ಮಾಡಿದ್ದಾರೆ. ಅವು ಜನರನ್ನು ಹಿಂಸಿಸುತ್ತಿದ್ದವು. ಜನರ ಒಳಿತಿಗಾಗಿ ದುಡಿದಿರುವ ಮೋದಿ ಅವರನ್ನು ಮತ್ತೂಮ್ಮೆ ಪ್ರಧಾನಿಯನ್ನಾಗಿ ಮಾಡಲು ಪ್ರಹ್ಲಾದ ಜೋಶಿ ಅವರನ್ನು ಮತ್ತೂಮ್ಮೆ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಉದ್ಯಮಿ ಶಂಕರಣ್ಣ ಮುನವಳ್ಳಿ ಮಾತನಾಡಿ, ಸಮಸ್ಯೆಗಳಿಗೆ ಸ್ಪಂದಿಸಿ ಜೋಶಿ ಸೂಕ್ತ ಕೆಲಸ ಮಾಡಿದ್ದಾರೆ. ಮೋದಿ ಅವರ ಕೆಲಸ ದೇಶಕ್ಕಷ್ಟೇ ಅಲ್ಲ. ವಿದೇಶಕ್ಕೂ ಗೊತ್ತು. ಭಾರತ ಯುವಕರ ದೇಶ. ಮೋದಿ ಅವರಿಗೆ ಯುವಕರ ಬೆಂಬಲವಿದೆ. ಪ್ರಹ್ಲಾದ ಜೋಶಿ ಅವರಿಗೆ ಹಾಕುವ ವೋಟು ನರೇಂದ್ರ ಮೋದಿ ಅವರಿಗೆ ಹಾಕಿದ ವೋಟು ಎಂಬುದನ್ನು ಮರೆಯದಿರಿ ಎಂದರು.
ಪ್ರೊ| ಜಿ.ಬಿ. ನಂದನ್‌ ಮಾತನಾಡಿದರು. ಧಾರವಾಡ ವಕೀಲರ ಸಂಘದ ಖಜಾಂಚಿ ಎನ್‌.ಆರ್‌. ಮಟ್ಟಿ ಸೇರಿದಂತೆ
ಹಲವರು ಬಿಜೆಪಿ ಸೇರ್ಪಡೆಯಾದರು. ಈರೇಶ ಅಂಚಟಗೇರಿ, ಯಲ್ಲಪ್ಪ ಅರವಾಳದ, ಶಂಕರ ಶಳಕೆ, ವಿಜಯಾನಂದ ಹೊಸಕೇರಿ, ರವಿ ವಸ್ತ್ರದ, ಶಿವಾನಂದ ಬಾವಿಕಟ್ಟಿ, ಸುನೀಲ ಸರೂರ, ಈರಣ್ಣ ಹಪ್ಪಳಿ, ಮೋಹನ ರಾಮದುರ್ಗಾ, ದೇವರಾಜ ಶಹಾಪುರ, ಶಕ್ತಿ ಹಿರೇಮಠ ಇದ್ದರು.
Advertisement

Udayavani is now on Telegram. Click here to join our channel and stay updated with the latest news.

Next