ಕಲಬುರಗಿ: ದೇಶದ ಅತ್ಯುನ್ನತ ರಾಷ್ಟ್ರಪತಿ ಸ್ಥಾನಕ್ಕೆ ಎನ್‌ಡಿಎನ ಒಮ್ಮತದ ಅಭ್ಯರ್ಥಿಯನ್ನಾಗಿ ಕೋಲಿ ಸಮಾಜದ ರಾಷ್ಟ್ರ ನಾಯಕ ಹಾಗೂ ಬಿಹಾರ ರಾಜ್ಯಪಾಲ ರಾಮನಾಥ ಕೋವಿಂದ್ ಮಾಡಿರುವುದು ಕೋಲಿ ಸಮಾಜಕ್ಕೆ ದಕ್ಕಿರುವ ಗೌರವಾಗಿದೆ ಎಂದು ಕೋಲಿ ಸಮಾಜದ ಕಲಬುರಗಿ ಜಿಲ್ಲಾ ನಾಯಕರು ಸಂತಸ ವ್ಯಕ್ತಪಡಿಸಿದರು.
ದೇಶದಲ್ಲಿ ಕೋಲಿ ಸಮಾಜಕ್ಕೆ ಸಿಕ್ಕಿರುವ ದೊಡ್ಡ ಗೌರವ ಇದಾಗಿದೆ. ನಮ್ಮ ಸಮಾಜ ಕರ್ನಾಟಕದಲ್ಲಿ ಇನ್ನೂ ಓಬಿಸಿಯಲ್ಲಿದೆ. ಆದರೆ, ಉತ್ತರ ಭಾರತದಲ್ಲಿ ದಲಿತ ಪಟ್ಟಿಯಲ್ಲಿದೆ. ಕೋವಿಂದ್ ದಲಿತ ಹಾಗೂ ಕೃಷಿ ಕುಟುಂಬದವರು.
ಅವರನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಎನ್‌ಡಿಎ ಮಿತ್ರ ಪಕ್ಷಗಳು ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯನ್ನಾಗಿಸಿರುವುದು ನಮ್ಮ ಆತ್ಮವಿಶ್ವಾಸ ಹೆಚ್ಚು ಮಾಡಿದೆ ಎಂದು ಸಮಾಜದ ಹಿರಿಯರಾದ ಪಿ.ಎನ್. ಮಾಲಿಪಾಟೀಲ, ರಾಜಗೋಪಾಲ ರೆಡ್ಡಿ ಮುದಿರಾಜ್, ಅವ್ವಣ್ಣ ಮ್ಯಾಕೇರಿ ಹಾಗೂ ಶರಣಪ್ಪ ತಳವಾರ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಆಯ್ಕೆ ಖಚಿತ: ರಾಮನಾಥ ಕೋವಿಂದ್ ರಾಷ್ಟ್ರಪತಿಗಳಾಗಿ ಆಯ್ಕೆ ಆಗುವುದು ಬಹುತೇಕ ಖಚಿತವಾಗಿದೆ. ಅವರೊಬ್ಬ ದೊಡ್ಡ ಆಶಾವಾದಿ ಹಾಗೂ ಅಪಾರ ಜನಚಿಂತನೆ ಇರುವ ಬುದ್ಧಿವಂತ ರಾಜಕಾರಣಿ ಹಾಗೂ ಅಡಳಿತಗಾರ. ಸದ್ಯ ಬಿಹಾರ ರಾಜ್ಯಪಾಲರಾಗಿರುವ ಅವರನ್ನು ಆಯ್ಕೆ ಮಾಡಿರುವುದು ಸೂಕ್ತವಾಗಿದೆ.
ಎಲ್‌ಎಲ್‌ಬಿ, ಐಎಎಸ್‌ನಲ್ಲಿ ಉತೀರ್ಣರಾಗಿರುವ ಅವರು ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ತಮ್ಮ ನಿಖರ ಹಾಗೂ ಶಾಂತ ನಿರ್ಧಾರಗಳಿಂದ ಗಮನ ಸೆಳೆದಿದ್ದಾರೆ ಎಂದರು. ಸರಳ, ಸಜ್ಜನಿಕೆ ವ್ಯಕ್ತಿಯೊಬ್ಬರು ರಾಷ್ಟ್ರಪತಿ ಸ್ಥಾನಕ್ಕೆ ಏರುತ್ತಿದ್ದಾರೆ. ಈಗಾಗಲೇ ಕೋಲಿ ಸಮಾಜವು ಬಿಹಾರ, ಉತ್ತರಪ್ರದೇಶ, ಹರಿಯಾಣಾ ಮುಂತಾದ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿಯಲ್ಲಿ ಸೇರಿದೆ.
ರಾಜ್ಯದಲ್ಲಿ ಮಾತ್ರ ಕೋಲಿ ಸಮಾಜವು ಇನ್ನೂ ಪರಿಶಿಷ್ಟ ಪಂಗಡಕ್ಕೆ ಸೇರಿಲ್ಲ. ಆ ಕುರಿತು ಬೇಡಿಕೆ ನೆನಗುದಿಗೆ ಬಿದ್ದಿದೆ. ಈಗ ರಾಮನಾಥ ಕೋವಿಂದ ಅವರು ರಾಷ್ಟ್ರಪತಿಗಳಾಗುವುದರಿಂದ ಬೇಡಿಕೆ ಈಡೇರಲಿದೆ. ಕೋಲಿ ಸಮಾಜವನ್ನು ಪರಿಶಿಷ್ಟ ಜಾತಿಗೆ ಇಲ್ಲವೇ ಪರಿಶಿಷ್ಟ ಪಂಗಡಕ್ಕೆ ಸೇರಿಸಬಹುದಾಗಿದೆ ಎಂದು ತಿಳಿಸಿದರು. ನಂತರ ಮುಖಂಡರು ಸಿಹಿ ಹಂಚಿಕೊಂಡು ಸಂಭ್ರಮಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಾಯಬಣ್ಣ ನೀಲಪ್ಪಗೋಳ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶೋಭಾ ಬಾಣಿ, ಪ್ರಕಾಶ ಜಮಾದಾರ, ಇಂದಿರಾ ಶಕ್ತಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವಿದ್ಯಾಸಾಗರ ಮಂಗಳೂರೆ, ದಯಾನಂದ ವಿ.ಕೆ. ಸಲಗರ್, ತಿಪ್ಪಣ್ಣಾರೆಡ್ಡಿ, ಶಾಂತು ಗೌರ್(ಬಿ), ದೇವಿಂದ್ರ ಚಿಗರಳ್ಳಿ, ರಾಜೇಂದ್ರ ರಾಜವಾಳ, ಚಂದ್ರಕಾಂತ ಗಂವ್ಹಾರ ಮುಂತಾದವರು ಹಾಜರಿದ್ದರು.