Advertisement

ಸರಕಾರದ ವರ್ಗಾವಣೆ ಆದೇಶದಲ್ಲಿ ಕಡ್ಡಾಯವಾಗಿ ಹುದ್ದೆ ತೋರಿಸಬೇಕು

11:57 PM Aug 30, 2022 | Team Udayavani |

ಬೆಂಗಳೂರು: ಅಧಿಕಾರಿಗಳನ್ನು ಹುದ್ದೆ ತೋರಿಸದೆ ವರ್ಗಾವಣೆಗೊಳಿಸುವ ಸರಕಾರದ ಧೋರಣೆಯನ್ನು ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್‌, ವರ್ಗಾವಣೆ ಆದೇಶ ಹೊರಡಿಸಿದಾಗ ಅಧಿಕಾರಿಗಳಿಗೆ ಕಡ್ಡಾಯವಾಗಿ ಹೊಸ ಹುದ್ದೆ ತೋರಿಸಬೇಕು ಎಂದು ಆದೇಶ ಹೊರಡಿಸಿದೆ.

Advertisement

ಚಾಮಜರಾನಗರ ಜಿಲ್ಲೆಯ ಹನೂರು ಪುರಸಭೆ ಮುಖ್ಯಅಧಿಕಾರಿ ಹುದ್ದೆಯಿಂದ ತಮ್ಮನ್ನು ವರ್ಗಾವಣೆ ಮಾಡಿದ್ದ ಸರಕಾರ, ಅನಂತರ ಯಾವುದೇ ಹುದ್ದೆ ತೋರಿಸಿಲ್ಲ ಎಂದು ಆಕ್ಷೇಪಿಸಿ ಮೂರ್ತಿ ಎನ್ನುವವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌. ಸುನಿಲ್‌ ದತ್‌ ಯಾದವ್‌ ಅವರ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.

ಅಲ್ಲದೆ, ಹನೂರು ಪುರಸಭೆ ಮುಖ್ಯಅಧಿಕಾರಿ ಹುದ್ದೆಯಿಂದ ಅರ್ಜಿದಾರರನ್ನು ವರ್ಗಾಯಿಸಿ 2021ರ ಡಿ. 23ರಂದು ಸರಕಾರ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿರುವ ನ್ಯಾಯಪೀಠ, ವರ್ಗಾವಣೆ ಮುನ್ನ ಹೊಂದಿದ್ದ ಹುದ್ದೆಗೆ ಅರ್ಜಿದಾರರನ್ನು ಮರು ನಿಯೋಜಿಸುವಂತೆ ಸರಕಾರಕ್ಕೆ ನಿರ್ದೇಶಿಸಿದೆ.

ಈ ಪ್ರಕರಣದಲ್ಲಿ ಅರ್ಜಿದಾರರ ಹುದ್ದೆಗೆ ತಮ್ಮನ್ನು ವರ್ಗಾವಣೆ ಮಾಡುವಂತೆ ಪರಶಿವಯ್ಯ ಅವರು ಕೋರಿದ್ದರು. ಆಗ ಹುದ್ದೆ ಖಾಲಿಯಿರಲಿಲ್ಲ. ಶಾಸಕರೊಬ್ಬರ ಪತ್ರದ ಆಧರಿಸಿ ಪರಶಿವಯ್ಯ ವರ್ಗಾವಣೆ ಮಾಡಲಾಗಿದೆ. ಏನೇ ಇದ್ದರೂ ವರ್ಗಾವಣೆ ಪ್ರಕ್ರಿಯೆಯಲ್ಲಿ ನಿಯಮಗಳು ಪಾಲನೆಯಾಗಬೇಕು. ಅರ್ಜಿದಾರರು ವರ್ಗಾವಣೆಯಾಗಿ ಆರು ತಿಂಗಳು ಕಳೆದರೂ ಯಾವುದೇ ಹುದ್ದೆ ತೋರಿಸಿರಲಿಲ್ಲ. ಸಾಮಾನ್ಯ ವರ್ಗಾವಣೆ ಅವಧಿ ಅನಂತರ ಖಾಲಿಯಿರುವ ಹುದ್ದೆಗಳಿಗೆ ಹೊರತುಪಡಿಸಿ ಬೇರೆ ಯಾವುದೇ ವರ್ಗಾವಣೆ ಮಾಡುವಂತಿಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ಅರ್ಜಿದಾರರನ್ನು ಹನೂರು ಪುರಸಭೆ ಮುಖ್ಯ ಅಧಿಕಾರಿಯಾಗಿ ಮರು ನಿಯೋಜಿಸುವಂತೆ ಸರಕಾರಕ್ಕೆ ಆದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next