Advertisement

ಪೊಳಲಿಯ ವಿನ್ಯಾಸ ನಿಜಕ್ಕೂ ಅದ್ಭುತ: ಡಾ.ಹೆಗ್ಗಡೆ

12:30 AM Mar 10, 2019 | |

ಪೊಳಲಿ: ಲೋಹ ಮರ ಶಿಲೆಗಳ ಸುಂದರ ಕೆತ್ತನೆಗಳಿಂದ ನವೀಕರಣಗೊಂಡಿರುವ ಪೊಳಲಿ ದೇವಸ್ಥಾನದ ವಿನ್ಯಾಸವನ್ನು ನೋಡಿ ನಿಜಕ್ಕೂ ಬೆರಗುಗೊಂಡಿದ್ದೇನೆ. ಇದಕ್ಕೆ ಕಾರಣೀಭೂತರಾದ ಶಿಲ್ಪಿಗಳನ್ನು, ಕಾರ್ಮಿಕರನ್ನು, ಸ್ವಯಂಸೇವಕರನ್ನು, ದಾನಿಗಳನ್ನು ಅಭಿನಂದಿಸುತ್ತೇನೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

ಅವರು ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಶನಿವಾರ ನಡೆದ ಧಾರ್ಮಿಕ ಸಭೆಯ ನ್ನುದ್ದೇಶಿಸಿ ಮಾತನಾಡಿದರು.

ಹಿಂದಿನ ಕಾಲದಲ್ಲಾಗಿದ್ದರೆ ಇಷ್ಟು ಸುಂದರವಾಗಿ ವಿನ್ಯಾಸಗೊಳಿಸಲು 20ರಿಂದ 30 ವರ್ಷಗಳೇ ಬೇಕಿತ್ತು. ಆದರೆ ಯಾಂತ್ರೀಕರಣದಿಂದಾಗಿ ಇಷ್ಟು ವರ್ಷಗಳಲ್ಲಿ ಆಗಬೇಕಾದ ಕೆಲಸವು ಕೇವಲ ಎರಡು ವರ್ಷಗಳಲ್ಲಿ ಪೂರ್ಣಗೊಂಡಿದೆ ಎಂದರು.

ಕಳೆದ 150 ವರ್ಷಗಳ ಮುಂಚೆ ಬಿದ್ದು ಹೋದ ಅನೇಕ ದೇವಸ್ಥಾನಗಳು, ಜೈನಪೀಠಗಳು ಇವೆ. 70 ವರ್ಷಗಳ ಮುಂಚಿನ ಯಜಮಾನಿಕೆ ಕಾಲದಲ್ಲಿ ಬಡತನ ಇದ್ದುದರಿಂದ ದೇವಸ್ಥಾನದ ಜೀರ್ಣೋದ್ಧಾರ ನಡೆಯುತ್ತಿರಲಿಲ್ಲ. ಆದರೆ ಇಂದಿನ ಕಾಲಘಟ್ಟದಲ್ಲಿ ಬಡವರಿಗೂ ದಾನ ಮಾಡುವಷ್ಟು ಶಕ್ತಿ ಬಂದಿರುವುದರಿಂದ ದೇವಸ್ಥಾನ ನವೀಕರಣಗೊಳ್ಳುತ್ತಿದೆ. ಪೊಳಲಿ ಮಾತೆಯು ಎಲ್ಲರ ತಾಯಿಯಾಗಿದ್ದು, ಪ್ರಸನ್ನಗೊಂಡಿರುವುದನ್ನು ಇಲ್ಲಿ ಕಂಡುಕೊಳ್ಳಲು ಸಾಧ್ಯ ಎಂದರು.

ಯೋಧರ ಮೇಲೆ ಶಂಕೆ ಖೇದಕರ
ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಮಾತನಾಡಿ ವೃತ್ತಿಧರ್ಮ, ರಾಜಧರ್ಮಗಳನ್ನು ಪಾಲನೆ ಮಾಡಿ ದರೆ ದೇಶ ಸುಭಿಕ್ಷ ಸ್ಥಿತಿಯಲ್ಲಿರುತ್ತದೆ. ಇತಿಹಾಸಗಳು ರಾಜಧರ್ಮವನ್ನು ಬೋಧನೆ ಮಾಡಿವೆ. ರಾಜಕಾರಣಿ ಗಳು ರಾಜಧರ್ಮ ಪಾಲಿಸಿದರೆ ಧರ್ಮಾಧಾರಿತ ವ್ಯವಸ್ಥೆ ಜಾರಿಗೊಂಡು ಭ್ರಷ್ಟಾಚಾರ ಕಡಿಮೆಯಾಗುತ್ತದೆ. ದೇಶದ ಜನರು ಧರ್ಮಕ್ಕೆ ಬದ್ಧರಾಗಿರ ಬೇಕು. ಆದರೆ ಇಂದು ದೇಶಧರ್ಮದ ಬಗ್ಗೆಯೇ ಚರ್ಚೆ ನಡೆಯುತ್ತಿದ್ದು, ನಮ್ಮನ್ನು ರಕ್ಷಿಸುತ್ತಿರುವ ಯೋಧರನ್ನೇ ಸಂಶಯದಿಂದ ನೋಡುತ್ತಿರುವ ಪ್ರವೃತ್ತಿ ಉಂಟಾಗುತ್ತಿರುವುದು ನಿಜಕ್ಕೂ ಖೇದಕರ ಎಂದು ಹೇಳಿದರು.

Advertisement

ಎಡನೀರು ಮಠದ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿ, ಒಂದು ತಿಂಗಳ ಉತ್ಸವ ಇರುವ ಪೊಳಲಿಯು ಅತ್ಯಂತ ಪುಣ್ಯ ಸ್ಥಳವಾಗಿದ್ದು, ಎಲ್ಲರೂ ಕೃತಜ್ಞತೆಯಿಂದ ದೇವಿಯ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿಯೊಬ್ಬರಿಗೂ ಆನಂದ ಸಿಗಬೇಕಾದರೆ ದೇವರ ಸಾನಿಧ್ಯದಲ್ಲಿರಬೇಕು ಎಂದು ನುಡಿದರು.

ಸಚಿವ ಯು.ಟಿ. ಖಾದರ್‌ ಮಾತಾಡಿ, ದೇವಸ್ಥಾನದಂಥ ಶ್ರದ್ಧಾಕೇಂದ್ರಗಳು ಸರ್ವಧರ್ಮದ ಜನರಿಗೂ ಸಮಾನತೆಯ ಭಾವನೆಯನ್ನು ಕಲಿಸಲಿ ಎಂದು ಹೇಳಿದರು. ಬ್ರಹ್ಮಶ್ರೀ ಕುಂಟಾರು ರವೀಶ್‌ ತಂತ್ರಿಯವರು ಧಾರ್ಮಿಕ ಉಪನ್ಯಾಸ ನೀಡಿದರು. ಡಾಣ ಎಂ. ದೇಜಪ್ಪ ದಲ್ಲೋಡಿ ವಿರಚಿತ “ಶ್ರೀ ರಾಜರಾಜೇಶ್ವರಿ ದರ್ಶನಂ’ ಎನ್ನುವ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.

ಐವನ್‌ ಡಿ’ಸೋಜಾ, ಶಾಸಕ ಸುಕುಮಾರ್‌ ಶೆಟ್ಟಿ, ರಮಾನಾಥ ರೈ, ರಾಜೇಶ್‌ ನಾಯ್ಕ, ಯು.ಟಿ. ಆಳ್ವ, ಮಂಜಯ್ಯ ಶೆಟ್ಟಿ, ಚೇರ ಸೂರ್ಯನಾರಾಯಣ ರಾವ್‌, ನಾಗರಾಜ್‌ ಶೆಟ್ಟಿ, ಏರ್ಯ ಲಕ್ಷ್ಮೀ ನಾರಾಯಣ ಆಳ್ವ, ಕೋಡಿಮಜಲು ಅನಂತಪದ್ಮನಾಭ, ಪ್ರವೀಣ್‌ ಮುಂತಾದವರು ಉಪಸ್ಥಿತರಿದ್ದರು. 

ಶಿಲೆಶಿಲ್ಪಿ ಜಯಂತ್‌ ಪಿ. ಕಾರ್ಕಳ, ಸಂದೀಪ್‌ ಪೊಳಲಿ, ಗ್ರಾನೈಟ್‌ ಗುತ್ತಿಗೆದಾರ ಮನೀಷ್‌, ಸುಮೇಶ್‌ ಅವರನ್ನು ಸಮ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next