ಬೆಂಗಳೂರು: ಕಾಲೇಜು ಶಿಕ್ಷಣ ಇಲಾಖೆ ಉಪನ್ಯಾಸಕರಿಗೆ ನೀಡಿರುವ ವಿಶೇಷ ಭತ್ಯೆಯನ್ನು ವಾಪಸ್ ಪಡೆದಿರುವ ಮಾದರಿಯಲ್ಲೇ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಮಂಜೂರು ಮಾಡಿದ ವಿಶೇಷ ಭತ್ಯೆ ವಸೂಲಾತಿಗೂ ಆದೇಶ ನೀಡಿದೆ.
2008 ಆಗಸ್ಟ್ 1ರ ನಂತರ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಶಿಕ್ಷಕರಾಗಿ ನೇಮಕಾತಿ ಪಡೆದವರಿಗೆ ವಿಶೇಷ ಭತ್ಯೆಯ ಸೌಲಭ್ಯ ಇರುವುದಿಲ್ಲ. ಆದರೆ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸರ್ಕಾರಿ, ಅನುದಾನಿತ ಪ್ರೌಢ ಹಾಗೂ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು, ಎಚ್‌ಆರ್‌ಎಂಎಸ್ ತಂತ್ರಾಂಶದಲ್ಲಿ ನೇರ ನೇಮಕಾತಿಗೊಂಡಿರುವ ಸರ್ಕಾರಿ, ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ವಿಶೇಷ ಭತ್ಯೆ ನೀಡಿರುವುದು ಮಹಾಲೇಖಪಾಲಕರ ವರದಿಯಲ್ಲಿ ಸಾಬೀತಾಗಿದೆ.
ರಾಜ್ಯದ 30 ಜಿಲ್ಲೆಗೆ 2008ರ ಆಗಸ್ಟ್ ನಂತರ ಪ್ರಾಥಮಿಕ ಶಾಲೆಗೆ 1,557, ಪ್ರೌಢಶಾಲೆಗೆ 3,789 ಶಿಕ್ಷಕರನ್ನು ಹಾಗೂ ಪಿಯುಗೆ 1,896 ಉಪನ್ಯಾಸಕರು ಸೇರಿ ಒಟ್ಟೂ 7,242 ನೇಮಕಾತಿ ನಡೆಸಿದೆ. ಪ್ರಾಥಮಿಕ ಶಾಲೆಯ 1,557 ಶಿಕ್ಷಕರಿಗೆ 127.39 ಲಕ್ಷ, ಪ್ರೌಢಶಾಲೆಯ 3,789 ಶಿಕ್ಷಕರಿಗೆ 512.49 ಹಾಗೂ 1,896 ಉಪನ್ಯಾಸಕರಿಗೆ 193.25 ಲಕ್ಷ ವಿಶೇಷ ಭತ್ಯೆ ನೀಡಲಾಗಿದೆ. 2008ರ ನಂತರ ನೇಮಕಗೊಂಡಿರುವ ಶಿಕ್ಷಕರ ಉಪನ್ಯಾಸಕರಿಗೆ 8.33 ಕೋಟಿ ವಿಶೇಷ ಭತ್ಯೆ ರೂಪದಲ್ಲಿ ಮಂಜೂರು ಮಾಡಲಾಗಿದೆ.
ವಿಶೇಷ ಭತ್ಯೆ ರೂಪದಲ್ಲಿ ನೀಡಿದ ಹಣವನ್ನು ಪೂರ್ಣ ಪ್ರಮಾಣದಲ್ಲಿ ವಸೂಲಿ ಮಾಡುವಂತೆ ಇಲಾಖೆ ಈಗ ಆದೇಶ ಹೊರಡಿಸಿದೆ. ತಿಂಗಳಿಗೆ 200, 300 ಅಥವಾ 400 ರೂ. ವಿಶೇಷ ಭತ್ಯೆ ಪಡೆಯುತ್ತಿದ್ದ ಶಿಕ್ಷಕ ಅಥವಾ ಉಪನ್ಯಾಸಕರಿಗೆ 10 ರಿಂದ 15 ಸಾವಿರ ರೂ.ಗಳನ್ನು ವಾಪಸ್ ನೀಡಬೇಕು. ಈವರೆಗೆ ವಿಶೇಷ ಭತ್ಯೆಯಾಗಿ ಪಡೆದ ಪೂರ್ತಿ ಹಣವನ್ನು ಒಮ್ಮೆಲೇ ವಸೂಲಿ ಮಾಡಬೇಕೇ ಅಥವಾ ತಿಂಗಳ ಕಂತಿನ ರೂಪದಲ್ಲಿ ವಸೂಲಿ ಮಾಡಬೇಕೆ ಎಂಬುದನ್ನು ಇಲಾಖೆ ಸ್ಪಷ್ಟಪಡಿಸಿಲ್ಲ.
2008ರ ಆಗಸ್ಟ್ 1ರಿಂದ 2012ರ ಏ.30ರವರೆಗೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ 200 ರೂ., 2012ರ ಮೇ 1ರಿಂದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 300 ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ 400 ರೂ. ವಿಶೇಷ ಭತ್ಯೆ ನೀಡಲಾಗಿದೆ. ಈ ಎಲ್ಲಾ ಅವಧಿಯಲ್ಲಿ ಎಷ್ಟು ಹಣವನ್ನು ವಿಶೇಷ ಭತ್ಯೆಯ ರೂಪದಲ್ಲಿ ಜಮಾ ಮಾಡಲಾಗಿದೆ ಎಂಬುದರ ಮಾಹಿತಿಯನ್ನು ಸಲ್ಲಿಸುವಂತೆ ಆಯಾ ಜಿಲ್ಲೆಯ
ಉಪನಿರ್ದೇಶಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಆದೇಶಿಸಿದ್ದಾರೆ.