Advertisement
ಕುಮಾರಸ್ವಾಮಿಯವರ ಮಿತವ್ಯಯದ ಮಂತ್ರಕ್ಕೆ ನಿರ್ಲಕ್ಷ್ಯ ತೋರಿರುವ ಶಿಕ್ಷಣ ಇಲಾಖೆ 116 ಹೊಸ ಕಾರುಗಳನ್ನು ಖರೀದಿಸಲು ನಿರ್ಧರಿಸಿದೆ. ಈಗಾಗಲೇ ಮೊದಲ ಹಂತದಲ್ಲಿ 28 ಕಾರುಗಳನ್ನು ಖರೀದಿಸಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ವಾಹನ ಸರಬರಾಜು ಮಾಡುವ ಅಧಿಕೃತ ಡೀಲರ್‌ಗಳಿಂದ ಪಡೆಯಲು ಆದೇಶಿಸಲಾಗಿದೆ.
Related Articles
Advertisement
ಆದರೆ, ಸಿಎಂ ಕುಮಾರಸ್ವಾಮಿ ಸಾಲಮನ್ನಾ ಮಾಡಿರುವ ಕಾರಣದಿಂದ ತಮ್ಮ ಇಲಾಖೆ ಸೇರಿ ಸರ್ಕಾರದಲ್ಲಿ ದುಂದು ವೆಚ್ಚಕ್ಕೆ ಕಡಿವಾಣ ಹಾಕಿರುವುದಾಗಿ ಮೇಲಿಂದ ಮೇಲೆ ಹೇಳುತ್ತಿದ್ದರೂ, ಅವರ ಗಮನಕ್ಕೂ ಬಾರದೇ ಸರ್ಕಾರದ ಮಟ್ಟದಲ್ಲಿ ಅನೇಕ ರೀತಿಯ ದುಂದು ವೆಚ್ಚ ನಡೆಯುತ್ತಿದೆ ಎಂಬ ಆರೋಪವೂ ಇದೆ.
ಹಿಂದಿನ ಸಿದ್ದರಾಮಯ್ಯ ಸರ್ಕಾರದ ಯೋಜನೆಗಳಿಗೆ ಕತ್ತರಿ ಹಾಕುವ ಮೂಲಕ ಸಾಲ ಮನ್ನಾಕ್ಕೆ ಹೊಂದಾಣಿಕೆ ಮಾಡಿಕೊಳ್ಳುವ ಲೆಕ್ಕಾಚಾರ ನಡೆಸಿದ್ದಾರೆ ಎನ್ನುವ ಆರೋಪವನ್ನು ಕುಮಾರಸ್ವಾಮಿ ಎದುರಿಸಿದ್ದರು. ಹೊಸ ಸರ್ಕಾರದಲ್ಲಿ ನೂತನ ಸಚಿವರು ಹೊಸ ಕಾರುಗಳ ಖರೀದಿಗೆ ಬೇಡಿಕೆ ಇಟ್ಟಾಗ ಮುಖ್ಯ ಕಾರ್ಯದರ್ಶಿಯಾಗಿದ್ದ ರತ್ನಪ್ರಭಾ ಬ್ರೇಕ್ ಹಾಕಿ ಯಾವುದೇ ಹೊಸ ಕಾರು ಖರೀದಿಗೆ ಅವಕಾಶವಿಲ್ಲ ಎಂದು ಖಡಾಖಂಡಿತವಾಗಿ ನಿರಾಕರಿಸಿದ್ದರು.
ಇದರ ನಡುವೆ ಸಮ್ಮಿಶ್ರ ಸರ್ಕಾರದಲ್ಲಿ ಹತ್ತಕ್ಕೂ ಹೆಚ್ಚು ಸಚಿವರು ವಿಧಾನಸೌಧದಲ್ಲಿರುವ ತಮ್ಮ ಕೊಠಡಿಗಳಿಗೆ ಹೊಸ ಪಿಠೊಪಕರಣಗಳು ಬೇಕು ಎಂದು ಬೇಡಿಕೆ ಇಟ್ಟಿದ್ದು, ಸದ್ದಿಲ್ಲದೇ ಹೊಸ ಪೀಠೊಪಕರಣಗಳ ಖರೀದಿ ಮಾಡಿಸಿ ಸಚಿವರ ಕೊಠಡಿಗಳಿಗೆ ನೀಡಲಾಗುತ್ತಿದೆ ಎಂಬ ಆರೋಪವೂ ಕೇಳಿ ಬಂದಿತ್ತು.
ಚುನಾವಣೆಗೂ ಮುಂಚೆಯೇ ಕಾರು ಖರೀದಿಸಲು ತೀರ್ಮಾನ ಮಾಡಲಾಗಿತ್ತು. ಈಗ ಕಾರು ಪಡೆದುಕೊಳ್ಳಲು ಆದೇಶ ಮಾಡಲಾಗಿದೆ. ಅಲ್ಲದೇ ಇಲಾಖೆಗೆ ಬಹಳ ವರ್ಷಗಳಿಂದ ಕಾರು ಖರೀದಿ ಮಾಡಿರಲಿಲ್ಲ. ಹೀಗಾಗಿ ಅನುಮತಿ ಪಡೆದುಕೊಂಡು ಖರೀದಿ ಮಾಡಲಾಗಿದೆ. ಸರ್ಕಾರದ ಮಿತವ್ಯಯದ ನಿಯಮ ಅನ್ವಯ ಆಗುವುದಿಲ್ಲ.– ಡಾ.ಪಿ.ಸಿ. ಜಾಫರ್, ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ. – ಶಂಕರ ಪಾಗೋಜಿ