Advertisement

ಇಲಾಖೆಗೆ ಸುತ್ತಿ ಸುತ್ತಿ ನಾಗರಿಕರು ಹೈರಾಣು ಬಿಪಿಎಲ್‌ ಬಿಡಿ, ಎಪಿಎಲ್‌ ಗೂ ಅವಕಾಶವಿಲ್ಲ!

11:34 PM Feb 13, 2024 | Team Udayavani |

ಉಡುಪಿ: ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಸದಸ್ಯರು ಹೊಸದಾಗಿ ಬಿಪಿಎಲ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಎಪಿಎಲ್‌ ಕಾರ್ಡ್‌ ಬೇಕಾಗಿರುವವರೂ ಸಹ ಅರ್ಜಿ ಸಲ್ಲಿಸದಂತಾಗಿದೆ.

Advertisement

ಕರಾವಳಿಯ ಎರಡು ಜಿಲ್ಲೆಗಳಲ್ಲಿ ಒಂದು ವರ್ಷದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ 7,067 ಬಿಪಿಎಲ್‌ ಹಾಗೂ 2052 ಎಪಿಎಲ್‌ ಅರ್ಜಿ ವಿಲೇವಾರಿಗೆ ಬಾಕಿಯಿವೆ. ಅವುಗಳು ವಿಲೇವಾರಿಯಾಗದೇ ಹೊಸ ಪ್ರಕ್ರಿಯೆ ನಡೆಯದು. ಆದರೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸರಕಾರದ ಅನುಮತಿಗೆ ಕಾದು ಕುಳಿತಿದೆ.

ಮನೆಯ ಯಜಮಾನಿಗೆ ಮಾಸಿಕ 2 ಸಾವಿರ ರೂ. ನೀಡುವ ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನದ ಬಳಿಕ ಈ ಸಮಸ್ಯೆ ಉದ್ಭವವಾಗಿದೆ. ರೇಷನ್‌ ಕಾರ್ಡ್‌ ಮಾಹಿತಿ ಆಧಾರದಲ್ಲೇ ಈ ಯೋಜನೆ ಅನುಷ್ಠಾನವಾಗುತ್ತಿದ್ದು, ಹೊಸ ಕಾರ್ಡ್‌ ನೀಡಿದರೆ ಫ‌ಲಾನುಭವಿಗಳ ಸಂಖ್ಯೆ ಇನ್ನಷ್ಟು ಹೆಚ್ಚುತ್ತದೆ ಎಂಬ ಕಾರಣದಿಂದಲೂ ಸರಕಾರ ಹೊಸ ಅರ್ಜಿಗಳನ್ನು ಸ್ವೀಕರಿಸುತ್ತಿಲ್ಲ. ಯೋಜನೆ ಅನುಷ್ಠಾನದ ಬಳಿಕ ಅರ್ಜಿ ಸಲ್ಲಿಸಿದವರಿಗೆ ಇನ್ನೂ ಕಾರ್ಡ್‌ ಬಂದಿಲ್ಲ. ತಿದ್ದುಪಡಿಗೆ ಅರ್ಜಿ ಸಲ್ಲಿಸಿದವರಿಗೂ ತಿದ್ದುಪಡಿಗೊಂಡ ಕಾರ್ಡ್‌ ಬಂದಿಲ್ಲ. ತೀವ್ರ ಆನಾರೋಗ್ಯದಿಂದ ಬಳಲುತ್ತಿರುವವರಿಗೆ ಮಾತ್ರ ಹೊಸ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಬಿಪಿಎಲ್‌ ಕಾರ್ಡ್‌ ಪಡೆಯಲು ಆದಾಯದ ಮಿತಿ ಸಹಿತ ಹಲವು ನಿಬಂಧನೆ ಇರುತ್ತದೆ.

ಸರಕಾರದಿಂದ ಉಚಿತ ಪಡಿತರ ನೀಡಲಾಗುವುದರಿಂದ ಬಿಪಿಎಲ್‌ ಕಾರ್ಡ್‌ ವಿತರಣೆಯಲ್ಲಿ ಮಿತಿ ವಿಧಿಸಲಾಗಿದೆ. ಆದರೆ ಎಪಿಎಲ್‌ಗೆ ಆದಾಯದ ಮಿತಿಯಿಲ್ಲ. ಬಡತನ ರೇಖೆಗಿಂತ ಮೇಲಿರುವ ಯಾರು ಬೇಕಾದರೂ ಪಡೆಯಬಹುದಾಗಿದೆ(ಇದರಲ್ಲೂ ಕನಿಷ್ಠ ಬೆಲೆಗೆ ಪಡಿತರ ಪಡೆಯುವ ಅವಕಾಶವಿದ್ದರೂ ಸದ್ಯ ಎಪಿಎಲ್‌ಗೆ ಸಿಗುತ್ತಿಲ್ಲ). ಪಡಿತರ ಹೊರತುಪಡಿಸಿ ಹಲವು ಸಂಗತಿಗಳಿಗೆ ಎಪಿಎಲ್‌ ಕಾರ್ಡಿನ ಆವಶ್ಯಕತೆ ಇದೆ. ಈ ಬಗ್ಗೆ ನಿತ್ಯವೂ ಆಹಾರ ಇಲಾಖೆ ಹಾಗೂ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ವಿಚಾರಿಸುತ್ತಿರುವವರ ಸಂಖ್ಯೆಯೂ ದಿನೇದಿನೆ ಏರುತ್ತಿದೆ.

ಅತಂತ್ರ ಸ್ಥಿತಿ
ಅನೇಕರು ಆದಾಯದ ಮಿತಿ ಹೆಚ್ಚಿದ ಹಿನ್ನೆಲೆಯಲ್ಲಿ ಕುಟುಂಬದ ಬಿಪಿಎಲ್‌ ಕಾರ್ಡ್‌ನಿಂದ ತಮ್ಮ ಹೆಸರನ್ನು ತೆಗೆಸಿದ್ದಾರೆ. ಬಳಿಕ ಎಪಿಎಲ್‌ಗೆ ಅರ್ಜಿ ಸಲ್ಲಿಸಲು ಹೋದರೆ ಅವಕಾಶವಿಲ್ಲ. ಹಾಗಾಗಿ ಅತಂತ್ರ ಸ್ಥಿತಿಯಲ್ಲಿದ್ದಾರೆ. ಈಗ ಬಿಪಿಎಲ್‌ನಿಂದ ಹೆಸರು ಅಳಿಸುವುದನ್ನೂ ಸರಕಾರ ನಿರ್ಬಂಧಿಸಿದೆ.

Advertisement

ಸರಕಾರ ಅನುಮತಿ ನೀಡಿದಾಗ ಅವಕಾಶ
ರಾಜ್ಯಾದ್ಯಂತ ಈ ಸಮಸ್ಯೆ ಇರುವುದರಿಂದ ಜಿಲ್ಲಾ ಹಂತದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲಾಗದು. ಸರಕಾರ ಅನುಮತಿ ಕೊಟ್ಟ ಅನಂತರ ಆನ್‌ಲೈನ್‌ನಲ್ಲಿ ಲಿಂಕ್‌ ತೆಗೆದುಕೊಂಡು ಡಿಲೀಟ್‌ ಮತ್ತು ಹೊಸ ಅರ್ಜಿ ಸಲ್ಲಿಸಲು ಅವಕಾಶ ಸಿಗಲಿದೆ ಎಂದು ಇಲಾಖೆಯ ಉಡುಪಿ ಜಿಲ್ಲಾ ಉಪನಿರ್ದೇಶಕ (ಪ್ರಭಾರ) ರವೀಂದ್ರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next