ರಾಜ್ಯ ಹೈಕೋರ್ಟ್ 13,352 ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಅಸ್ತು ಎನ್ನುವುದರೊಂದಿಗೆ 6ರಿಂದ 8ನೇ ತರಗತಿಯವರೆಗೆ ಪಾಠ ಮಾಡುವ ಶಿಕ್ಷಕರ ತೀವ್ರ ಕೊರತೆಯಿಂದ ತತ್ತರಿಸಿದ್ದ ರಾಜ್ಯದ ಹಿರಿಯ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಗೆ ತುಸು ಚೈತನ್ಯ ಬಂದಂತೆ ಆಗಿದೆ.
ಇದರೊಂದಿಗೆ ರಾಜ್ಯದಲ್ಲಿನ ಶಿಕ್ಷಕರ ಕೊರತೆ ನ್ಯಾಯಾಲಯಕ್ಕೆ ಮನದಟ್ಟಾಗಿರುವುದು ಅತ್ಯಂತ ಗಮನಾರ್ಹ ಸಂಗತಿಯಾಗಿದೆ. ಹಾಗೆಯೇ ನ್ಯಾಯಾಲಯವು ತಾಂತ್ರಿಕ, ಕಾನೂನಾತ್ಮಕ ಅಂಶಗಳಿಗೆ ಕಟ್ಟು ಬೀಳದೆ ಮಕ್ಕಳ ಹಿತಾಸಕ್ತಿಯಿಂದ ತ್ವರಿತವಾಗಿ ನ್ಯಾಯದಾನ ಮಾಡಿ ಸ್ಪಂದಿಸಿರುವುದು ಶ್ಲಾಘನೀಯ. ಇದೀಗ ನೇಮಕಾತಿ ಪ್ರಕ್ರಿಯೆಯ ಚೆಂಡು ಮತ್ತೆ ರಾಜ್ಯ ಸರಕಾರದ ಅಂಗಳಕ್ಕೆ ಬಂದಿದ್ದು ಕುಂಟು ನೆಪಗಳ ಮೊರೆ ಹೋಗದೆ ನ್ಯಾಯಾಲಯದ ಆಶಯಕ್ಕೆ ಅನುಗುಣವಾಗಿ ಶೀಘ್ರ ನೇಮಕಾತಿ ಪ್ರಕ್ರಿಯೆ ಮುಕ್ತಾಯಗೊಳಿಸಿ ಮಕ್ಕಳ ಶೈಕ್ಷಣಿಕ ಹಿತಾಸಕ್ತಿಯನ್ನು ಕಾಪಾಡುವ ಉತ್ತರಾದಾಯಿತ್ವವನ್ನು ಪ್ರದರ್ಶಿಸಬೇಕಿದೆ.
ರಾಜ್ಯ ಸರಕಾರವೇ ತಿಳಿಸಿರುವಂತೆ ರಾಜ್ಯದಲ್ಲಿ ವೃಂದ ಬಲವಾರು ಮುಂಜೂರಾದ ಹುದ್ದೆಗಳ ಸಂಖ್ಯೆ 1.88 ಲಕ್ಷವಿದ್ದು ಈ ಪೈಕಿ ಈಗ 52,299 ಹುದ್ದೆಗಳು ಖಾಲಿ ಇವೆ. ಅಂದರೆ ಮಂಜೂರಾದ ಹುದ್ದೆಗಳಲ್ಲಿ ಶೇ. 27ರಷ್ಟು ಖಾಲಿ ಉಳಿದಿವೆ. ಈ ಪೈಕಿ ಆರರಿಂದ ಎಂಟನೇ ತರಗತಿಯವರೆಗೆ ಪಾಠ ಮಾಡುವ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ 51,781 ಹುದ್ದೆಗಳು ಮಂಜೂರಾಗಿದ್ದು ಈ ಪೈಕಿ ಶೇ. 50ಕ್ಕಿಂತ ಹೆಚ್ಚು ಅಂದರೆ 25,365 ಹುದ್ದೆಗಳು ಖಾಲಿಯಿವೆ. ಇದೀಗ 13,352 ಶಿಕ್ಷಕರ ನೇಮಕಕ್ಕೆ ಹೈಕೋರ್ಟ್ ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಈ ಕೊರತೆ ಪ್ರಮಾಣ ಕಡಿಮೆ ಆಗಲಿದೆ. ಈ ನೇಮಕಾತಿ ಪ್ರಕ್ರಿಯೆ ಹಿಂದಿದ್ದ ಬಿಜೆಪಿ ಸರಕಾರದ ಅವಧಿಯಲ್ಲಿ ಆರಂಭಗೊಂಡಿದ್ದರೂ ಸಹ ಈಗಿರುವ ಕಾಂಗ್ರೆಸ್ ಸರಕಾರ ಅನಾವಶ್ಯಕ ಅಡ್ಡಿ ಸೃಷ್ಟಿಸದೆ ಆ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಲು ಮುಂದಾಗಿದ್ದು ಅಭಿನಂದನಾರ್ಹ.
2023-24ರ ಶೈಕ್ಷಣಿಕ ವರ್ಷದ ಮೊದಲಾರ್ಧ ಈಗಾಗಲೇ ಮುಗಿದಿದ್ದು ಮಕ್ಕಳು ದಸರಾ ರಜೆಯ ಸಂಭ್ರಮದಲ್ಲಿದ್ದಾರೆ. ಡಿಸೆಂಬರ್ ಅಂತ್ಯದೊಳಗೆ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಸಿ ಮಕ್ಕಳಿಗೆ ಹೊಸ ಶಿಕ್ಷಕರು ಈ ಶೈಕ್ಷಣಿಕ ವರ್ಷದಲ್ಲೇ ಸಿಗುವಂತೆ ಮಾಡುವ ಬದ್ಧತೆಯನ್ನು ರಾಜ್ಯ ಸರಕಾರ ತೋರಿಸಬೇಕು. ಕಾಲಹರಣ ಮಾಡಿದರೆ ಕೋರ್ಟ್ ಆದೇ ಶಕ್ಕೆ ಭಂಗ ತಂದಂತೆ ಎಂಬ ಭಾವನೆ ಮೂಡುವುದು ಸಹಜ.
ಇದರ ಜತೆಗೆ 1.12 ಲಕ್ಷ ಪ್ರಾಥಮಿಕ ಶಿಕ್ಷಕರ ಹುದ್ದೆ ಮಂಜೂರಾಗಿದ್ದು ಈ ಪೈಕಿ 17,718 ಹುದ್ದೆಗಳು ಖಾಲಿ ಇದೆ. ದೈಹಿಕ ಶಿಕ್ಷಕರ 6,772 ಹುದ್ದೆ ಮಂಜೂರಾಗಿದ್ದು ಈ ಪೈಕಿ 2,645 ಹುದ್ದೆಗಳು ಖಾಲಿ ಇವೆ. ಹಿರಿಯ ಮುಖ್ಯ ಶಿಕ್ಷಕರು, ಮುಖ್ಯ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಹಿರಿಯ ಶ್ರೇಣಿ – ಐಐ ಮತ್ತು ದರ್ಜೆ – ಐಐ, ಸಂಗೀತ ಮತ್ತು ಚಿತ್ರಕಲಾ ಶಿಕ್ಷಕರ ಹುದ್ದೆಗಳು ದೊಡ್ಡ ಪ್ರಮಾಣದಲ್ಲಿ ಖಾಲಿ ಉಳಿದಿವೆ. ಈ ಕೊರತೆಯನ್ನು ತುಂಬಲು ಸರಕಾರ ಅತಿಥಿ ಶಿಕ್ಷಕರ ಮೊರೆ ಹೋಗುತ್ತಿದೆ.
ಇನ್ನಾದರೂ ನ್ಯಾಯಾಲಯ ತೋರಿದ ಕಾಳಜಿಯನ್ನು ಮಾದರಿಯಾಗಿಟ್ಟುಕೊಂಡು ಸರಕಾರ ಶಿಕ್ಷಕರ ಖಾಲಿ ಹುದ್ದೆಗಳನ್ನು ತುಂಬಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ಪ್ರತಿಯೊಂದು ನೇಮಕಾತಿ ಪ್ರಕ್ರಿಯೆಯೂ ಅಂತಿಮವಾಗಿ ನ್ಯಾಯಾಲಯದಲ್ಲೇ ಇತ್ಯರ್ಥಗೊಳ್ಳುವ ಸಂಪ್ರದಾಯ ಹೆಚ್ಚುತ್ತಿರುವುದನ್ನು ಮನಗಂಡು ಮುಂಬರುವ ನೇಮಕಾತಿ ಪ್ರಕ್ರಿಯೆಗಳನ್ನು ಆದಷ್ಟು ಸೂಕ್ಷ್ಮವಾಗಿ ನಿಭಾಯಿಸುವ ಪ್ರಯತ್ನ ನಡೆಸಬೇಕು.