ಚಿಂಚೋಳಿ: ಪಟ್ಟಣದ ತಾಂಡೂರ-ಚಿಂಚೋಳಿ ರಾಜ್ಯ ಹೆದ್ದಾರಿ ಮಾರ್ಗದಲ್ಲಿನ ಚಂದಾಪುರ ನಗರದಲ್ಲಿ 4.33ಎಕರೆ ಜಮೀನಿನಲ್ಲಿ ಇದ್ದ ಐತಿಹಾಸಿಕ ಸರ್ಕಾರಿ ಪ್ರೌಢಶಾಲೆ-ಸಂಯುಕ್ತ ಪದವಿ ಪೂರ್ವ ಕಾಲೇಜು ಕಟ್ಟಡವನ್ನು ವಾರದ ಹಿಂದೆ ಪಿಡಬ್ಲ್ಯುಡಿಯವರು ನೆಲಸಮಗೊಳಿಸಿದ್ದಾರೆ.
ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 1960ರಲ್ಲಿ 24ಪ್ರೌಢ ಶಾಲಾ ಕೋಣೆಗಳಿಗೆ ಅಂದಿನ ಮೈಸೂರು ರಾಜ್ಯದ ಮುಖ್ಯಮಂತ್ರಿ ಎಸ್ .ನಿಜಲಿಂಗಪ್ಪ ಶಂಕುಸ್ಥಾಪನೆ ನೆರವೇರಿಸಿದ್ದರು. 1966ರಲ್ಲಿ ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲ ಕಟ್ಟಡವನ್ನು ಉದ್ಘಾಟಿಸಿದ್ದರು. 56 ವರ್ಷ ಹಳೆಯದಾದ ಈ ಕಟ್ಟಡವನ್ನು ನೆಲಸಮ ಮಾಡಲಾಗಿದೆ. ಈ ಸರ್ಕಾರಿ ಪ್ರೌಢ ಶಾಲೆ ತಾಲೂಕಿನಲ್ಲಿಯೇ ಮೊದಲು ಸ್ಥಾಪನೆಯಾದ ಶಾಲೆ ಎನ್ನುವ ಹೆಗ್ಗಳಿಕೆ ಪಡೆದಿತ್ತು. ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಐಎಎಸ್, ಕೆಎಎಸ್ ಸೇರಿದಂತೆ ಅನೇಕ ಉನ್ನತ ಶಿಕ್ಷಣ ಪಡೆದು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಲೋಕೋಪಯೋಗಿ ಇಲಾಖೆಯಿಂದ ಐದು ಕೋಣೆಗಳಿರುವ ಸರ್ಕಾರಿ ಕಟ್ಟಡವನ್ನು ಬೇರೆಡೆ ನಿರ್ಮಿಸಲಾಗಿದೆ. ಆದರೆ ಈ ಕೋಣೆಗಳಲ್ಲಿ ವಿದ್ಯುತ್ ಸಂಪರ್ಕ, ಫರಸಿ (ನೆಲಹಾಸಿಗೆ) ಕಾಮಗಾರಿ ನಡೆಯದೇ ಇರುವುದರಿಂದ ಕಟ್ಟಡ ಅನಾಥವಾಗಿ ಕಾಣುತ್ತಿದೆ. ಈ ಸರ್ಕಾರಿ ಪ್ರೌಢ ಶಾಲೆ-ಕಾಲೇಜಿಗೆ ಆಟದ ಮೈದಾನ, ಕಾಂಪೌಂಡ್ ಇಲ್ಲ. ಒಂದು ಕಡೆ ಕಾಲೇಜು ಕಟ್ಟಡ ನೆಲಸಮ, ಮತ್ತೊಂದು ಕಡೆ ಅನಾಥವಾಗಿ ಬಿದ್ದಿರುವ ಕಾಲೇಜು ಕಟ್ಟಡ. ಈ ಕುರಿತು ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆ, ಪಿಡಬ್ಲ್ಯೂಡಿ ಅಧಿಕಾರಿಗಳು ಗಮನಹರಿಸಬೇಕೆಂದು ವಿದ್ಯಾರ್ಥಿಗಳ ಪಾಲಕರು ಒತ್ತಾಯಿಸಿದ್ದಾರೆ.
ಶಾಲೆ-ಕಾಲೇಜು ಕಟ್ಟಡ ಸೋರಿಕೆಯಾಗುತ್ತಿತ್ತು. ಅಲ್ಲದೇ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿತ್ತು. ಈ ಕುರಿತು ಶಾಸಕ ಡಾ| ಅವಿನಾಶ ಜಾಧವ ಆಸಕ್ತಿ ತೋರಿ 2ಕೋಟಿ ರೂ. ಮಂಜೂರಿಗೊಳಿಸಿದ್ದು, ಸದ್ಯ ಹೊಸ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಸದ್ಯ ಮಕ್ಕಳು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಅಭ್ಯಸಿಸುತ್ತಿದ್ದಾರೆ. ಕಾಲೇಜು ವಿದ್ಯಾರ್ಥಿಗಳಿಗೂ ಕೂಡಾ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. -ದೇವಿದಾಸ ರಾಠೊಡ, ಮುಖ್ಯ ಶಿಕ್ಷಕ, ಸರ್ಕಾರಿ ಪ್ರೌಢಶಾಲೆ, ಚಿಂಚೋಳಿ