Advertisement

ದಾನ ಮಾಡಿದ ಸಮಾಜಕ್ಕೆ ಬೇಡುವ ಸ್ಥಿತಿ

10:52 AM Feb 18, 2019 | |

ಚಿತ್ರದುರ್ಗ: ವಾಲ್ಮೀಕಿ ನಾಯಕ ಸಮಾಜದ ಅಭಿವೃದ್ಧಿಗೆ ಎಲ್ಲರೂ ಪಕ್ಷ ಭೇದ ಮರೆತು ಒಟ್ಟಾಗಿ ಹೋರಾಟ ಮಾಡಬೇಕು ಎಂದು ಮೊಳಕಾಲ್ಮೂರು ಶಾಸಕ ಬಿ. ಶ್ರೀರಾಮುಲು ಕರೆ ನೀಡಿದರು.

Advertisement

ತಾಲೂಕಿನ ಭರಮಸಾಗರದಲ್ಲಿ ಭಾನುವಾರ ಆಯೋಜಿಸಿದ್ದ 77 ಪಾಳೇಗಾರರ ನೆನಪಿನೋತ್ಸವ, “ವಾಲ್ಮೀಕಿ ಧ್ವನಿ’ ಪತ್ರಿಕೆಯ ವಾರ್ಷಿಕೋತ್ಸವ ಹಾಗೂ ಬಿಚ್ಚುಗತ್ತಿ ಭರಮಣ್ಣ ನಾಯಕನ ಪುತ್ಥಳಿ ಸ್ಥಾಪನೆಗೆ ಭೂಮಿಪೂಜೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಮದಕರಿ ನಾಯಕರು ಸೇರಿದಂತೆ ಇತರೆ ನಾಯಕ ಸಮಾಜದ ಆಳ್ವಿಕೆ ಕಾಲದಲ್ಲಿ ಕೆರೆ ಕಟ್ಟೆಗಳನ್ನು ನಿರ್ಮಿಸಿ ಈ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅಲ್ಲದೆ ಸರ್ವ ಸಮುದಾಯದವರ ರಕ್ಷಣೆ ಮಾಡಿದರು. ಇಂತಹ ಹಿರಿಮೆ ಹೊಂದಿರುವ ವಾಲ್ಮೀಕಿ ನಾಯಕ ಸಮಾಜ ಸಂಕಷ್ಟ ಎದುರಿಸುತ್ತಿದೆ. ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಾಲ್ಕನೇ ದೊಡ್ಡ ಸಮಾಜವಾಗಿದ್ದರೂ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ. 7.5 ಮೀಸಲಾತಿ ನೀಡಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಇದರಿಂದ ಸಮಾಜಕ್ಕೆ ಅನ್ಯಾಯವಾಗುತ್ತಿದೆ.

ದಾನ ಮಾಡಿದ ಸಮಾಜಕ್ಕೆ ಬೇಡುವ ಸ್ಥಿತಿ ಎದುರಾಗಿದೆ. ಆದ್ದರಿಂದ ಎಲ್ಲ ಶಾಸಕರು ಮತ್ತು ಸಂಸದರು ಸಮಾಜದ ಅಭಿವೃದ್ಧಿಗೆ ಹೋರಾಟ ಮಾಡಬೇಕು. ಸೂಕ್ತ ಮೀಸಲಾತಿ ನೀಡದೆ ಹೋದರೆ ಪ್ರಸನ್ನಾನಂದಪುರಿ ಸ್ವಾಮೀಜಿಯವರ ನೇತೃತ್ವದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಗುಡುಗಿದರು. ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಮಾತನಾಡಿ, ನಾಯಕ ಸಮಾಜದವರು ನಿಷ್ಠೆ- ಪ್ರಾಮಾಣಿಕತೆಗೆ ಹೆಸರಾದವರು. ನಂಬಿದರೆ ಜೀವ ಕೊಟ್ಟು ಕಾಪಾಡುವಂಥವರು.

ಅಂತಹ ಸಮಾಜದವರೊಂದಿಗೆ ಭೋವಿ ಸಮಾಜದವರು ಸೇರಿಕೊಂಡು ಕೋಟೆ, ಕೆರೆಗಳನ್ನು ಕಟ್ಟಿ ಋಣ ತೀರಿಸಿದ್ದೇವೆ. ಎರಡು ಸಮಾಜದವರು ರಾಜ್ಯಕ್ಕೆ ಮತ್ತು ದೇಶಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಬಿಚ್ಚುಗತ್ತಿ ಭರಮಣ್ಣ ನಾಯಕ ಪುತ್ಥಳಿ ಅನಾವರಣ ನನ್ನ ಕ್ಷೇತ್ರ ಭರಮಸಾಗರದಲ್ಲಿ ಆಗುತ್ತಿರುವುದು ತುಂಬಾ ಸಂತೋಷವಾಗುತ್ತಿದೆ. ಸರ್ಕಾರದಿಂದ ಅದಕ್ಕೆ ಬೇಕಾದ ಅನುದಾನ ಕೊಡಿಸುತ್ತೇವೆ. ವೈಯಕ್ತಿಕವಾಗಿ ಪುತ್ಥಳಿ ನಿರ್ಮಾಣಕ್ಕೆ ಸಹಾಯ ಮಾಡುವುದಾಗಿ ಭರವಸೆ ನೀಡಿದರು. 

Advertisement

ಸಾನ್ನಿಧ್ಯ ವಹಿಸಿದ್ದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಆಶೀರ್ವಚನ ನೀಡಿ, ನಾಯಕ ಸಮಾಜದವರು ಸಾಕಷ್ಟು ಬದಲಾವಣೆ ಕಾಣುತ್ತಿದ್ದೇವೆ. ದೇಶಕ್ಕೆ ರಾಮಾಯಣ ನೀಡಿದ ವಾಲ್ಮೀಕಿ, ವ್ಯಾಸ, ಬೇಡರ ಕಣ್ಣಪ್ಪ, ಹಕ್ಕ ಬುಕ್ಕ, ಗುರುದಕ್ಷಿಣೆಯಾಗಿ ಬೆರಳು ಕೊಟ್ಟ ಏಕಲವ್ಯ ಅವರಂತಹ ಮಹಾಪುರುಷರನ್ನು ದೇಶಕ್ಕೆ ಕೊಡುಗೆ ನೀಡಿದ ಸಮಾಜ ನಮ್ಮದು. ಇಂದು ಕಷ್ಟ ಕಾಲದಲ್ಲಿ ಇದ್ದೇವೆ. ಆದ್ದರಿಂದ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. 

ಯುವಕರು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಯನ್ನು ಅಲಂಕರಿಸಬೇಕು. ದುಶ್ಚಟಗಳಿಗೆ ಬಲಿಯಾಗದೆ ಬದುಕು ಕಟ್ಟಿಕೊಳ್ಳಬೇಕು ಎಂದರು. ಪ್ರೊ| ಗುಡದೇಶ್ವರಪ್ಪ ಮಾತನಾಡಿ, ವಾಲ್ಮೀಕಿ ನಾಯಕ ಸಮಾಜದ ಮಕ್ಕಳು ಎಲ್ಲ ರಂಗದಲ್ಲಿ ಕೆಲಸ ಮಾಡುವಷ್ಟು ಸಮರ್ಥರಿದ್ದಾರೆ. ಗ್ರಾಮೀಣ ಭಾಗದ ಪೋಷಕರು ಶಿಕ್ಷಣಕ್ಕೆ ಒತ್ತು ನೀಡಿದರೆ ಕುಟುಂಬ ಮತ್ತು ಸಮಾಜದ ಅಭಿವೃದ್ಧಿ ಸಾಧ್ಯ. ಅದಕ್ಕಾಗಿ ಎಲ್ಲರಿಗೂ ಶಿಕ್ಷಣವೇ ಮೂಲಮಂತ್ರವಾಗಬೇಕು ಎಂದು ತಿಳಿಸಿದರು. 

ಡಾ| ಶಿವಮೂರ್ತಿ ಮುರುಘಾ ಶರಣರು ಬಿಚ್ಚುಗತ್ತಿ ಭರಮಣ್ಣ ನಾಯಕನ ಪುತ್ಥಳ ಸ್ಥಾಪನೆಗೆ ಭೂಮಿ ಪೂಜೆ ನೆರವೇರಿಸಿದರು. ಸ್ಮರಣಸಂಚಿಕೆ ಬಿಡುಗಡೆ ಮಾಡಿ ಸಾಧಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಹರ್ತಿಕೋಟೆ ವೀರೇಂದ್ರಸಿಂಹ, ಜಿಪಂ ಸದಸ್ಯರಾದ ಡಾ| ಬಿ. ಯೋಗೇಶ್‌ಬಾಬು, ಡಿ.ವಿ. ಶರಣಪ್ಪ, ರಾಜೇಶ್ವರಿ, ಮುಖಂಡರಾದ ಚೌಳಳ್ಳಿ ನಾಗೇಂದ್ರಪ್ಪ, ಆರ್‌. ಕೃಷ್ಣಮೂರ್ತಿ, ಎಸ್‌.ಎಂ.ಎಲ್‌. ತಿಪ್ಪೇಸ್ವಾಮಿ, ತಿಪ್ಪೇಶ್‌, ರುದ್ರೇಶ್‌, ನೀಲಕಂಠಪ್ಪ, ವಸಂತಕುಮಾರ್‌, ವೀರೇಶ್‌, ರತ್ನಮ್ಮ ಭಾಗವಹಿಸಿದ್ದರು.  

ವಾಲ್ಮೀಕಿ ನಾಯಕ ಸಮಾಜಕ್ಕೆ ರಾಜ್ಯ ಸರ್ಕಾರ ಶೇ. 7.5 ಮೀಸಲಾತಿಯನ್ನು ಕೂಡಲೇ ಕೊಡಬೇಕು. ನ್ಯಾಯಯುತ ಬೇಡಿಕೆ ಈಡೇರಿಕೆಗೆ ಏಕೆ ಯೋಚನೆ ಮಾಡುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ.
 ಪ್ರಸನ್ನಾನಂದಪುರಿ ಸ್ವಾಮೀಜಿ.

Advertisement

Udayavani is now on Telegram. Click here to join our channel and stay updated with the latest news.

Next