Advertisement

ರೈತರ ಮೇಲಿನ ಸುಳ್ಳು ಕೇಸ್‌ ವಾಪಸಿಗೆ ಆಗ್ರಹ

10:35 AM Feb 22, 2019 | |

ಲಿಂಗಸುಗೂರು: ಸಾಗುವಳಿ ಮಾಡುವ ರೈತರ ಮೇಲೆ ಅರಣ್ಯಾಧಿಕಾರಿಗಳು ದಾಖಲಿಸಿರುವ ಸುಳ್ಳು ಪ್ರಕರಣ ವಾಪಸಿಗೆ ಆಗ್ರಹಿಸಿ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಗುರುವಾರ ಸಹಾಯಕ ಆಯುಕ್ತರ ಕಚೇರಿ ಎದುರು ಅಹೋ ರಾತ್ರಿ ಧರಣಿ ನಡೆಸಿದರು.

Advertisement

ತಾಲೂಕಿನ ಗುಂತಗೋಳ, ಐದಬಾವಿ, ಯರಡೋಣ, ರಾಮಲೂಟಿ ಗ್ರಾಮದ ದಲಿತರು ಹಾಗೂ ಇತರೆ ಜಾತಿಯ ಬಡ ರೈತರು ಸರ್ವೇ ನಂ. 69, 32, 251, 3/2 ನಲ್ಲಿ ಕಳೆದ 40-50 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದಾರೆ. ಇವರು ಅರಣ್ಯ ವಾಸಿಗಳಾಗಿದ್ದಾರೆ. ಸಾಗುವಳಿ ಮಾಡುವ ಭೂಮಿಯಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ. 2006ರ ಅರಣ್ಯ ಹಕ್ಕು ಕಾಯ್ದೆ ಈ ಜನರಿಗೆ ಅನ್ವಯವಾಗುತ್ತದೆ.  2014ರಲ್ಲಿ ಹೈಕೋರ್ಟ್‌ ತನ್ನ ಆದೇಶದಲ್ಲಿ 3 ಎಕರೆಗಿಂತ ಕಡಿಮೆ ಅರಣ್ಯ ಭೂಮಿಯನ್ನು ಸಾಗುವಳಿ ಮಾಡುವ ರೈತರನ್ನು ಒಕ್ಕಲೆಬ್ಬಿಸಬಾರದೆಂದು ಸ್ಪಷ್ಟಪಡಿಸಿದೆ. ಆದರೆ ಇಲ್ಲಿನ ಅರಣ್ಯಾಧಿಕಾರಿ ಕಾಂಬಳೆ ಹಾಗೂ ಇತರರು ಹೈಕೋರ್ಟ್‌ ಹಾಗೂ ಸರ್ಕಾರದ ಆದೇಶ ಉಲ್ಲಂಘಿಸಿ ಸಾಗುವಳಿ ಮಾಡುವ ರೈತರ ಮೇಲೆ ದೌರ್ಜನ್ಯ ನಡೆಸಿ ಒಕ್ಕಲೆಬ್ಬಿಸಿದ್ದಾರೆ. ಕಳೆದ 28 ತಿಂಗಳುಗಳಿಂದ ಉಳುಮೆ ಮಾಡದ್ದರಿಂದ ಭೂಮಿ ಪಾಳು ಬಿದ್ದಿದೆ. ಜನರು ಉದ್ಯೋಗ ಅರಸಿ ಗುಳೆ ಹೋಗಿದ್ದಾರೆ.

ಆದರೂ ಅವರ ಮೇಲೆ ಕೇಸ್‌ ದಾಖಲಿಸಿ ಬಡ ರೈತರಿಗೆ ತೊಂದರೆ ಕೊಡುತ್ತಿದ್ದಾರೆ. ಕೂಡಲೇ ಸಾಗುವಳಿ ಮಾಡುವ ರೈತರಿಗೆ ಭೂಮಿ ಪಟ್ಟಾ ನೀಡಬೇಕು. 40 ಕುಟುಂಬಗಳ ಮೇಲೆ ದಾಖಲಿಸಿರುವ ಸುಳ್ಳು ಕೇಸ್‌ಗಳನ್ನು ವಾಪಸ್‌ ಪಡೆಯಬೇಕು. ಕಳೆದ 2 ವರ್ಷಗಳಿಂದ ಸುಳ್ಳು ಕೇಸ್‌ ದಾಖಲಿಸಿರುವ ಕುರಿತು ಸಮಗ್ರ ತನಿಖೆ ಕೈಗೊಂಡು ಸಂಬಂಧಿ ಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಡಿ.ಎಚ್‌. ಪೂಜಾರಿ, ತಾಲೂಕು ಕಾರ್ಯದರ್ಶಿ ಕೆ.ಆದಪ್ಪ ಗೆಜ್ಜಲಗಟ್ಟಾ, ಡಿ.ಕೆ. ಲಿಂಗಸುಗೂರು, ಬಿ.ಎನ್‌.ಯರದಿಹಾಳ, ಬಾಬು ಭೂಪುರು, ಗೌಸಖಾನ್‌, ಮಿಯ್ನಾಖಾನ್‌, ಯಲ್ಲಪ್ಪ ರಾಯದುರ್ಗ, ಅಮರೇಶ ಯರಡೋಣಾ, ದುರಗಣ್ಣ ಐದಬಾವಿ, ಹುಸೇನಬಿ, ನೌಷಾದ್‌ಬೇಗಂ, ಮರೆಮ್ಮ, ಮಲ್ಲಮ್ಮ ಸೇರಿ ವಿವಿಧ ಗ್ರಾಮಗಳ ಅರಣ್ಯ ಭೂಮಿ ಸಾಗುವಳಿದಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next