ಶಹಾಪುರ: ಮದ್ರಿಕಿ ಗ್ರಾಮದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಉಪ ಕೇಂದ್ರ ಕಚೇರಿ ಸ್ಥಾಪನೆ ಮತ್ತು ತೊಗರಿ ಖರೀದಿ ಕೇಂದ್ರ ಪುನರಾರಂಭಕ್ಕೆ ಆಗ್ರಹಿಸಿ ರಾಜ್ಯ ರೈತ ಸೇವಾ ಸಂಘ ಮದ್ರಿಕಿ ಕ್ರಾಸ್ ಬಳಿ ಹೆದ್ದಾರಿ ತಡೆದು ಪ್ರತಿಭಟನೆ
ನಡೆಸಿತು.
ಮದ್ರಿಕಿ ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮಗಳ ರೈತಾಪಿ ಜನರ ಅನುಕೂಲಕ್ಕಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಉಪ ಕೇಂದ್ರ ಕಚೇರಿ ಸ್ಥಾಪನೆ ಮಾಡಬೇಕು. ಅಲ್ಲದೆ ಸ್ಥಗಿತಗೊಂಡ ತೊಗರಿ ಖರೀದಿ ಕೇಂದ್ರ ಪುನರಾರಂಭಿಸಬೇಕೆಂದು ಪ್ರತಿಭಟನಾನಿರತರು ಒತ್ತಾಯಿಸಿದರು.
ತೊಗರಿ ಖರೀದಿ ಕೇಂದ್ರ ಸ್ಥಗಿತಗೊಂಡ ಕಾರಣ, ಮಾರಾಟವಾಗದ ತೊಗರಿಯಿಂದ ಬೇಸತ್ತ ರೈತನೋರ್ವ ಏವೂರ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಾಲೂಕಿನಲ್ಲಿ ಸಣ್ಣ ರೈತರ ತೊಗರಿ ಸಮರ್ಪಕವಾಗಿ ಖರೀದಿಯಾಗಿಲ್ಲ. ಆನ್‌ಲೈನ್ ಅರ್ಜಿ ಭರ್ತಿ ಆಗಿರುವುದಿಲ್ಲ. ತೊಗರಿ ಕೇಂದ್ರದ ಎದುರು ತೊಗರಿ ಚೀಲಗಳನ್ನಿಟ್ಟುಕೊಂಡು ಹಾಗೇ ಕುಳಿತ ರೈತರು ಸಾಕಷ್ಟಿದ್ದಾರೆ. ಕಾರಣ ಸರಕಾರ ಕೂಡಲೇ ತೊಗರಿ ಖರೀದಿ ಕೇಂದ್ರ ಆರಂಭಿಸಬೇಕೆಂದು ಒತ್ತಾಯಿಸಿದರು. ಈಚೆಗೆ ರಾಯಚೂರು ನಗರಕ್ಕೆ ಆಗಮಿಸಿದ್ದ ರಾಹುಲ್ ಗಾಂಧಿ ಅವರು, ನಡೆಸಿದ ರೈತ ಸಂವಾದಲ್ಲಿ ರೈತರು ಕೇಳಿದ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಅವರು ಫೆ. 12ರಂದು ತೊಗರಿ ಖರೀದಿ ಕೇಂದ್ರ ಪುನರಾರಂಭಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ರೈತರ ಬಗ್ಗೆ ಮುಖ್ಯಮಂತ್ರಿ ಅವರಿಗೆ ಕಾಳಜಿ ಇಲ್ಲ. ರಾಜ್ಯ ಸರಕಾರದ ನಿರ್ಲಕ್ಷದಿಂದ ರಾಜ್ಯದಲ್ಲಿ ಸಾವಿರಾರು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ರೈತರಿಂದ ಅಣಕು ಶವ ಪ್ರದರ್ಶನ ನಡೆಯಿತು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಶಾಸಕ ಗುರು ಪಾಟೀಲ್ ಶಿರವಾಳ ಮತ್ತು ಮಾಜಿ ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರ ಪ್ರತಿಭಟನಾ ನಿರತರನ್ನು ಮನವೊಲಿಸಿ, ಕೂಡಲೇ ರೈತರ ಬೇಡಿಕೆ ಈಡೇರಿಕೆಗೆ ಸೂಕ್ತ ಸ್ಪಂದನೆ ದೊರೆಯಲಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತನಾಡಿ, ಪರಿಹಾರ ಕಲ್ಪಿಸಲಾಗುವುದು ಎಂದು ಪ್ರತಿಭಟನಾನಿರತರಿಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ರೈತ ಸೇವಾ ಸಂಘದ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀಕಾಂತ ಪಾಟೀಲ್, ಮುಖಂಡ ಮಹೇಶಗೌಡ ಸುಬೇದಾರ, ಜಿಲ್ಲಾಧ್ಯಕ್ಷ ಅಮೃತ ಕೋಟೆಕಾನಿ, ಯಲ್ಲಪ್ಪ ಕಾಶಿರಾಜ, ಮಲ್ಲಣಗೌಡ ಸಿಂಗನಳ್ಳಿ, ಗವಿಸಿದ್ದು, ಸಿದ್ದಣ್ಣ ಯಂಕಂಚಿ, ಶರಣಗೌಡ ಪಾಟೀಲ್, ಭಾಗಣ್ಣ ಮಡಿವಾಳ್ಕರ್ ಇತರರು ಇದ್ದರು.