ಬೆಂಗಳೂರು: ಬರ ಪರಿಹಾರ ಕುರಿತು ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿ ಬದಲಾವಣೆಗೆ ಒತ್ತಾಯಿಸಿ ಪ್ರಧಾನಿ ಬಳಿಗೆ ನಿಯೋಗ ಕೊಂಡೊಯ್ಯಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಳೆದ ಬುಧವಾರವಷ್ಟೇ “ಉದಯ ವಾಣಿ’ ಕೇಂದ್ರದಿಂದ ಬರಸಿಡಿಲು ಎಂಬ ಶೀರ್ಷಿಕೆಯಲ್ಲಿ ಮಾರಕ ಮಾರ್ಗಸೂಚಿಗಳ ಬಗ್ಗೆ ವರದಿ ಮಾಡಿತ್ತು.
ಹೊಸ ಮಾರ್ಗಸೂಚಿಗಳ ಪ್ರಕಾರ ಶೇ.50 ರಷ್ಟು ಬೆಳೆನಷ್ಟ ಆಗಿದ್ದರೆ ಮಾತ್ರ ಪರಿಹಾರ ಎಂಬ ನೀತಿಯಿಂದ ರಾಜ್ಯದ ರೈತರಿಗೆ ಮಾರಕವಾಗಲಿದೆ. ಹೀಗಾಗಿ, ಮಾರ್ಗಸೂಚಿ ಬದಲಾವಣೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ಜತೆಗೆ ಪ್ರಧಾನಿ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ ರಾಜ್ಯ ಪ್ರತಿನಿಧಿಸುವ ಎಲ್ಲ ಸಂಸದರಿಗೂ ಪತ್ರ ಬರೆಯಲು ತೀರ್ಮಾನಿಸಿದ್ದಾರೆ. ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, ಕೇಂದ್ರ ಸರ್ಕಾರದ ಹೊಸ ಮಾರ್ಗ ಸೂಚಿ ರಾಜ್ಯಕ್ಕೆ ದೊಡ್ಡ ಆಘಾತ. ಶೇ.50 ರಷ್ಟು ಬೆಳೆನಷ್ಟವಾದರೆ ಮಾತ್ರ ಪರಿಹಾರ ಎಂದರೆ ನಿರಂತರ ಬರದಿಂದ ತತ್ತರಿಸಿರುವ ನಮ್ಮ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದರು.
ಜತೆಗೆ ರಾಜ್ಯ ಸರ್ಕಾರದ ಎಸ್‌ಡಿಆರ್‌ಎಫ್ ನಿಧಿಯಿಂದಲೇ ಹೆಚ್ಚಿನ ಪ್ರಮಾಣದ ನೆರವು ಕೊಡಬೇಕಾಗುತ್ತದೆ. ಎನ್‌ಡಿ ಆರ್‌ಎಫ್ ನಿಧಿಯಿಂದ ನೆರವು ಹೆಚ್ಚಾಗಿ ದೊರೆಯುವುದಿಲ್ಲ. ರಾಜ್ಯ ಸರ್ಕಾರದ ಎಸ್‌ಡಿಆರ್‌ಎಫ್ ನಿಧಿಯಡಿ ಕಡಿಮೆ ಹಣ ಇರುವುದರಿಂದ ತೀರಾ ಕಷ್ಟವಾಗುತ್ತದೆ. ಹೀಗಾಗಿ, ಪ್ರಧಾನಿಗೆ ಮುಖ್ಯಮಂತ್ರಿಯವರು ಪತ್ರ ಬರೆದಿದ್ದಾರೆ. ಜತೆಗೆ ಸಂಸದರಿಗೂ ಪತ್ರ ಬರೆಯಲಿದ್ದಾರೆ. ಕೇಂದ್ರ ಸರ್ಕಾರದ ಬಳಿ ನಿಯೋಗ ಹೋಗಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ವಿತರಣೆ: ಕೇಂದ್ರ ಸರ್ಕಾರ ಹಿಂಗಾರು ಬೆಳೆನಷ್ಟಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಿರುವ 795 ಕೋಟಿ ರೂ. ಪರಿಹಾರದ ಪೈಕಿ 402 ಕೋಟಿ ರೂ.ಗಳನ್ನು 5.51 ಲಕ್ಷ ರೈತರಿಗೆ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುವ ಪ್ರಕಿಯೆಗೆ
ಸಿಎಂ ಸಿದ್ದರಾಮಯ್ಯ ಮಂಗಳವಾರ ಚಾಲನೆ ನೀಡಿದರು. ಒಟ್ಟು 10.25 ಲಕ್ಷ ರೈತರಿಗೆ ಪರಿಹಾರ ಕೊಡಬೇಕಿದ್ದು, ಮುಂದಿನ 10 ದಿನಗಳಲ್ಲಿ ಎಲ್ಲ ರೈತರ ಆಧಾರ್ ಲಿಂಕ್ ಜೋಡಣೆ ಮಾಡಿ ಪರಿಹಾರ ವಿತರಿಸುವಂತೆಯೂ ಗಡುವು ನೀಡಿದರು.
ಈ ಕುರಿತು ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ, ಕಳೆದ ವರ್ಷ 160 ತಾಲೂಕು ಬರ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮುಂಗಾರು ಪರಿಹಾರದಡಿ 1630 ಕೋಟಿ ರೂ. ಕೊಟ್ಟಿತ್ತು. ಎಲ್ಲವನ್ನೂ ರೈತರ ಖಾತೆ ಗಳಿಗೆ ಜಮೆ ಮಾಡಲಾಗಿದೆ. ಹಿಂಗಾರು ನಷ್ಟಕ್ಕೆ ಸಂಬಂಧಿಸಿದಮತೆ 3310 ಕೋಟಿ ರೂ. ಕೇಳಲಾಗಿತ್ತು. 795 ಕೋಟಿ ರೂ ಬಿಡುಗಡೆ ಮಾಡಿತ್ತು. ಆ ಪೈಕಿ 402 ಕೋಟಿ ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂದರು.