Advertisement

ಪರಿಹಾರ ವಿಳಂಬ ಉದ್ದೇಶ ಪೂರ್ವಕವಲ್ಲ; ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌

11:45 PM Apr 06, 2024 | Team Udayavani |

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರಕಾರ ನೀಡಿರುವ ಬಹಿರಂಗ ಚರ್ಚೆಯ ಆಹ್ವಾನಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡುವುದಕ್ಕೆ ಕೇಂದ್ರ ಉದ್ದೇಶಪೂರ್ವಕ ವಿಳಂಬ ಮಾಡಿಲ್ಲ. ಎನ್‌ಡಿಆರ್‌ಎಫ್ ಕಾಯ್ದೆ ಪ್ರಕಾರ ಬರ ವಿಚಾರದಲ್ಲಿ ಮಧ್ಯಾಂತರ ಪರಿಹಾರ ಅಥವಾ ವಿಶೇಷ ಅನುದಾನ ನೀಡುವುದಕ್ಕೂ ಅವಕಾಶವಿಲ್ಲ ಎಂದು ಸ್ಪಷ್ಟ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರಕಾರ ಇದುವರೆಗೆ ಮಾಡಿರುವ ಆರೋಪಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿ, ರಾಜ್ಯ ಸರಕಾರ ನವೆಂಬರ್‌ನಲ್ಲಿ ಸಲ್ಲಿಸಿದ ಮನವಿ ಆಧಾರದ ಮೇಲೆ ಪರಿಹಾರ ನೀಡುವುದಕ್ಕೆ ಕೇಂದ್ರ ಉನ್ನತಾಧಿಕಾರ ಸಮಿತಿ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕು. ಕರ್ನಾಟಕ, ಆಂಧ್ರಪ್ರದೇಶ, ಮಧ್ಯಪ್ರದೇಶದ ಬರ, ಚಂಡಮಾರುತದಿಂದ ತತ್ತರಿಸಿದ ಆಂಧ್ರ, ತಮಿಳುನಾಡಿನ ಸಮಸ್ಯೆ, ಪ್ರವಾಹ ಹಾಗೂ ಭೂಕುಸಿತಕ್ಕೆ ಪರಿಹಾರ ಕೊಡುವುದು ಸಹಿತ ಮೂರು ವಿಚಾರಗಳನ್ನು ಇತ್ಯರ್ಥಗೊಳಿಸಬೇಕಿದೆ. ಆದರೆ ಉನ್ನತಾಧಿಕಾರ ಸಮಿತಿ ಸಭೆ ನಡೆಸುವುದಕ್ಕೆ ಕೇಂದ್ರ ಚುನಾವಣ ಆಯೋಗದಿಂದ ಅನುಮತಿ ದೊರಕದ ಹಿನ್ನೆಲೆಯಲ್ಲಿ ಈ ವಿಳಂಬವಾಗಿದೆಯೇ ವಿನಾ ಉದ್ದೇಶಪೂರ್ವಕ ನಡೆಯಲ್ಲವೇ ಅಲ್ಲ. ಪ್ರಕ್ರಿಯೆಯಲ್ಲಿನ ವಿಳಂಬವನ್ನು ಕಡಿಮೆ ಮಾಡಬಹುದಿತ್ತು ಎಂದು ಸ್ಪಷ್ಟಪಡಿಸಿದರು.

ಪರಿಹಾರ ಎನ್ನುವುದು ತತ್‌ಕ್ಷಣದ ಸಮಾಧಾನ. ಎನ್‌ಡಿಆರ್‌ಎಫ್ ಕಾಯ್ದೆ ಪ್ರಕಾರ ಪರಿಹಾರ ಶಬ್ದಕ್ಕೆ ಅರ್ಥವೇ ಇಲ್ಲ. ಈ ಕಾಯ್ದೆಯ ಪ್ರಕಾರ 12 ಬಗೆಯ ಸಾರ್ವಜನಿಕ ವಿಕೋಪಕ್ಕೆ ಕೇಂದ್ರ ಪರಿಹಾರ ನೀಡಬಹುದು. ಆದರೆ ರಾಜ್ಯ ಸರ್ಕಾರ ವಾದಿಸುತ್ತಿರುವ ವಿಶೇಷ ಅನುದಾನ, ಮಧ್ಯಂತರ ಪರಿಹಾರಕ್ಕೆ ಅವಕಾಶವಿಲ್ಲ. ಇನ್‌ಪುಟ್‌ ಸಬ್ಸಿಡಿ, ಗ್ರ್ಯಾಚುಟಿ ಮಾರ್ಗದಲ್ಲಿ ಪರಿಹಾರ ನೀಡಲಾಗುತ್ತದೆ. ಅಷ್ಟಕ್ಕೂ ಕೇಂದ್ರ ಸರಕಾರ ಬರ ಬಂದ ಮೇಲೆ ಪರಿಹಾರ ಘೋಷಣೆ ಮಾಡುವುದಿಲ್ಲ. ಪ್ರತಿವರ್ಷವೂ ಬರ ಬಂದರೆ ನಾಗರಿಕರಿಗೆ ನೆರವು ನೀಡುವುದಕ್ಕಾಗಿ ತನ್ನ ಪಾಲಿನ ಹಣವನ್ನು ಕಡ್ಡಾಯವಾಗಿ ರಾಜ್ಯಕ್ಕೆ ಬಿಡುಗಡೆ ಮಾಡುತ್ತದೆ. ಇದರಲ್ಲಿ ಮೋದಿ ಸರಕಾರ ಎಂದಿಗೂ ತಾರತಮ್ಯ ಮಾಡಿಲ್ಲ ಎಂದು ತಿರುಗೇಟು ನೀಡಿದರು.

ಕಲ್ಯಾಣ ಕರ್ನಾಟಕ ಏನಾಗುತ್ತಿತ್ತು?
ನಾವು ದೇಶದ ಹಿತದಲ್ಲಿ ತೆರಿಗೆ ಕಟ್ಟುತ್ತೇವೆ ಎಂಬುದನ್ನು ನೆನಪಿಡಬೇಕು. ಮೈ ಟ್ಯಾಕ್ಸ್‌ ಮೈ ರೈಟ್‌ ಕುರಿತು ತಪ್ಪು ಅರ್ಥದಲ್ಲಿ ಮಾತನಾಡಿದರೆ, ಅದು ದೇಶದ ಹಿತವಲ್ಲ. ಈ ವಾದವನ್ನು ಸಾರ್ವತ್ರೀಕರಿಸುತ್ತ ಹೋದರೆ ಕಷ್ಟವಾಗುತ್ತದೆ. ಮೈ ಟ್ಯಾಕ್ಸ್‌, ಮೈ ರೈಟ್ಸ್‌ ಎಂದು ಬೆಂಗಳೂರಿಗರು ತಮ್ಮ ತೆರಿಗೆ ಪಾಲನ್ನು ಬೆಂಗಳೂರಿಗೆ ಮಾತ್ರ ಕೇಳಲಾರಂಭಿಸಿದರೆ ಕಲ್ಯಾಣ ಕರ್ನಾಟಕದ ಪರಿಸ್ಥಿತಿ ಏನಾದೀತು ಎಂದು ನಿರ್ಮಲಾ ಸೀತಾರಾಮನ್‌ ಪ್ರಶ್ನಿಸಿದರು.

ರಾಜ್ಯಕ್ಕೆ 5000 ಕೋಟಿ ರೂ. ಪರಿಹಾರ ನೀಡುವಂತೆ 15ನೇ ಹಣಕಾಸು ಆಯೋಗದ ಮಧ್ಯಾಂತರ ವರದಿಯಲ್ಲಿ ಹೇಳಲಾಗಿತ್ತು ಎಂಬ ರಾಜ್ಯ ಸರಕಾರದ ವಾದ ಅರ್ಧ ಸತ್ಯ. ಯಾಕೆಂದರೆ ಕೇಂದ್ರ ಮಧ್ಯಾಂತರ ವರದಿಯನ್ನು ಒಪ್ಪಿಕೊಂಡೇ ಇಲ್ಲ. ಪೂರ್ಣ ವರದಿ ಒಪ್ಪಿಕೊಂಡಿದ್ದು ಅದರ ಪ್ರಕಾರ ರಾಜ್ಯಕ್ಕೆ ಅನುದಾನವನ್ನು ಕಾಲಕಾಲಕ್ಕೆ ಹಂಚಿಕೆ ಮಾಡುತ್ತಲೇ ಇದೆ. ಬಂಡವಾಳ ವೆಚ್ಚಕ್ಕೆ ಹಣಕಾಸು ಆಯೋಗ ಎಂದಿಗೂ ಅನುದಾನ ನೀಡಿದ ಉದಾಹರಣೆ ಇಲ್ಲ. ಆದಾಗಿಯೂ ರಾಜ್ಯಕ್ಕೆ 50 ವರ್ಷಗಳಿಗೆ ಅನ್ವಯವಾಗುವಂತೆ 8,035 ಕೋಟಿಯಷ್ಟು ಬಡ್ಡಿರಹಿತ ಅನುದಾನವನ್ನು ನೀಡಲಾಗಿದೆ.ಅದು ವಿಶೇಷ ಅನುದಾನ. ಇದರ ಬಗ್ಗೆ ಮುಖ್ಯಮಂತ್ರಿಯವರನ್ನು ಪ್ರಶ್ನಿಸಿ ಎಂದು ತಿರುಗೇಟು ನೀಡಿದರು.

Advertisement

ಅಭಿವೃದ್ಧಿಯ ಸಮಾಧಿ
ರಾಜ್ಯದಲ್ಲಿ ಅಭಿವೃದ್ಧಿ ಯೋಜನೆಗಳು ಸಮಾಧಿಯಾಗಿದೆ. ಗ್ಯಾರಂಟಿ ಯೋಜನೆಗಳಿಗೆ 58,000 ಕೋಟಿ ರೂ. ವ್ಯಯ ಮಾಡಲಾಗುತ್ತಿದೆ. ಇದು ಆರ್ಥಿಕ ಹೊರೆ ಎಂದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆರ್ಥಿಕ ಸಲಹೆಗಾರ ಬಸವರಾಜ್‌ ರಾಯರೆಡ್ಡಿ ಹೇಳಿದ್ದರು. ಡಿ.ಕೆ.ಶಿವಕುಮಾರ್‌ ಕೂಡ ಇದೇ ಮಾತು ಹೇಳಿದ್ದರು. ಹಿಮಾಚಲ ಪ್ರದೇಶದಲ್ಲಿ ಓಪಿಎಸ್‌ ಮರು ಜಾರಿ ಸೇರಿದಂತೆ ಅನೇಕ ಪೂರ್ವತಯಾರಿ ಇಲ್ಲದ ಘೋಷಣೆಗಳನ್ನು ಕಾಂಗ್ರೆಸ್‌ ಮಾಡಿತ್ತು ಎಂದರು.

ಆರೋಗ್ಯ ಸಚಿವರಿಗೆ ತಿರುಗೇಟು
ರಾಜ್ಯದಲ್ಲಿ ಪಾಕ್‌ ಪರ ಘೋಷಣೆ ಮೊಳಗಿದೆ. ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ ಸಂಭವಿಸಿದೆ. 2008ರಲ್ಲಿ ನಡೆದ ಬಾಂಬ್‌ ಸ್ಫೋಟದ ವೇಳೆ ಕಾಂಗ್ರೆಸ್‌ ಹಿಂದೂ ಭಯೋತ್ಪಾದನೆ ಎಂಬ ಶಬ್ದವನ್ನು ಹುಟ್ಟು ಹಾಕಿತ್ತು. ಈ ಮನಃಸ್ಥಿತಿಯ ಪಕ್ಷದ ಸಚಿವರಾದ ದಿನೇಶ್‌ ಗುಂಡೂರಾವ್‌ ಈ ಬಾರಿ ಸಾಕ್ಷಿಯ ಹೆಸರನ್ನು ಬಹಿರಂಗಪಡಿಸಿದ್ದಾರೆ. ಇದು ಅತ್ಯಂತ ಕಳವಳಕಾರಿ ಸಂಗತಿ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದರು. ಭಾರತೀಯ ಸಾಕ್ಷಿ ಕಾಯಿದೆ ಪ್ರಕಾರ ಇದು ಎಷ್ಟು ದೊಡ್ಡ ಅಪರಾದ ಎಂಬ ಪ್ರಜ್ಞೆ ಇದೆಯೇ ? ಇಂಥ ನಡೆ ಸಾಕ್ಷಿದಾರರ ಬದುಕಿಗೆ ಸಮಸ್ಯೆ ತರಬಲ್ಲದು ಎಂಬ ಅರಿವಿಲ್ಲವೇ ? ಎಂದು ಪ್ರಶ್ನಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next