Advertisement

ಜನರ ಸಮಸ್ಯೆಗೆ ಸ್ಪಂದಿಸಲು ರಕ್ಷಣಾ ತಂಡ

12:03 PM May 18, 2018 | |

ಬೆಂಗಳೂರು: ಮುಂಗಾರು ಪೂರ್ವ ಮಳೆಗೆ ನಗರದ ಹಲವು ಭಾಗಗಳಲ್ಲಿ ಅನಾಹುತಗಳು ಸಂಭವಿಸಿದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಪಾಲಿಕೆ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳಿಗೆ ಮುಂದಾಗಿದ್ದು, ಮಳೆಗಾಲ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯಕ್ಕಾಗಿ ವಲಯವಾರು ರಕ್ಷಣಾ ತಂಡಗಳನ್ನು ನಿಯೋಜಿಸಲು ಯೋಜನೆ ರೂಪಿಸಿದ್ದಾರೆ. 

Advertisement

ಪ್ರತಿ ವರ್ಷ ಮಳೆಗಾಲದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಹತ್ತಾರು ಮರಗಳು ಧರೆಗುರುಳಿ, ಸಂಚಾರ ದಟ್ಟಣೆ ಉಂಟಾಗುತ್ತದೆ. ಜತೆಗೆ ಧಾರಾಕಾರ ಮಳೆಯ ಪರಿಣಾಮ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನರು ತೊಂದರೆ ಅನುಭವಿಸುವಂತಾಗುತ್ತದೆ. ಕೆಲವೊಮ್ಮೆ ಮನೆಗಳು ಜಲಾವೃತಗೊಂಡು ಪ್ರಾಣಾಪಾಯ ಸಂಭವಿಸುವ ಸಾಧ್ಯತೆಯೂ ಇರುತ್ತದೆ.

ಆ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸುವ ಉದ್ದೇಶದಿಂದ ಪಾಲಿಕೆಯ ಕೇಂದ್ರ ವಿಭಾಗದಲ್ಲಿದ್ದ ಅರಣ್ಯ ಘಟಕ ತಂಡಗಳನ್ನು ವಲಯಗಳಿಗೆ ಹಸ್ತಾಂತರಿಸಲು ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿಗಳು ನಿರ್ಧಾರ ಕೈಗೊಂಡಿದ್ದು, ಈ ಕುರಿತು ಪಾಲಿಕೆ ಎಂಟು ವಲಯಗಳ ಮುಖ್ಯ ಎಂಜಿನಿಯರ್‌ಗಳಿಗೆ ಮಾಹಿತಿ ನೀಡಲಾಗಿದೆ. 

ಅದರಂತೆ ಪಾಲಿಕೆಯ ಅರಣ್ಯ ವಿಭಾಗದಲ್ಲಿ 21 ರಕ್ಷಣಾ ತಂಡಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಮುಖ್ಯ ಎಂಜಿನಿಯರ್‌ಗಳ ಬೇಡಿಕೆಗೆ ಅನುಗುಣವಾಗಿ 2 ರಿಂದ 3 ತಂಡಗಳನ್ನು ಹಂಚಿಕೆ ಮಾಡಲಾ ಗುತ್ತದೆ. ಈ ತಂಡಗಳು ನೇರವಾಗಿ ವಲಯದ ಮುಖ್ಯ ಎಂಜಿನಿಯರ್‌ ಅಡಿಯಲ್ಲಿ ಕೆಲಸ ಮಾಡಲಿದ್ದು, ಇದರಿಂದಾಗಿ ಜನರ ಸಮಸ್ಯೆಗೆ ಶೀಘ್ರ ಪರಿಹಾರ ನೀಡಲು ಸಾಧ್ಯವಾಗುತ್ತದೆ ಎಂಬುದು ಅಧಿಕಾರಿಗಳ ಅಭಿಪ್ರಾಯ.

ಶೀಘ್ರ ಪರಿಹಾರ ಸಾಧ್ಯ: ರಕ್ಷಣಾ ಕಾರ್ಯಾಚರಣೆ ತಂಡಗಳು ವಲಯದಲ್ಲಿ ಕಾರ್ಯ ನಿರ್ವಹಿಸುವುದರಿಂದ ಆಯಾ ವಲಯದಲ್ಲಿನ ಜನರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ನೀಡಲು ಸಾಧ್ಯವಾಗುತ್ತದೆ. ಸದ್ಯ ಅರಣ್ಯ ವಿಭಾಗದಲ್ಲಿರುವ ಎಲ್ಲ 21 ತಂಡಗಳು ಎರಡು ಪಾಳಿಯಲ್ಲಿ ಕೇಂದ್ರ ಭಾಗದಿಂದ ಕಾರ್ಯ ನಿರ್ವಹಿಸುತ್ತಿವೆ. ಹೀಗಾಗಿ ಬೊಮ್ಮನಹಳ್ಳಿ, ಮಹದೇವಪುರ ಹಾಗೂ ದಾಸರಹಳ್ಳಿ ವಲಯಗಳಿಗೆ ಕಾರ್ಯಾಚರಣೆಗೆ ಟ್ರಾಫಿಕ್‌ ನಡುವೆ ಹೋಗುವುದು ತಡವಾಗುತ್ತಿರುವ ಹಿನ್ನೆಲೆಯಲ್ಲಿ ಶೀಘ್ರ ಪರಿಹಾರಕ್ಕಾಗಿ ಈ ಕ್ರಮಕ್ಕೆ ಪಾಲಿಕೆಯ ಅಧಿಕಾರಿಗಳು ಮುಂದಾಗಿದ್ದಾರೆ. 

Advertisement

ವಾಹನಗಳ ಲಭ್ಯತೆ: ಅರಣ್ಯ ವಿಭಾಗದಲ್ಲಿ ರಕ್ಷಣಾ ಕಾರ್ಯಾಚರಣೆಗೆ ವಾಹನಗಳ ಕೊರತೆಯಿರುವುದರಿಂದ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ, ವಲಯ ಮಟ್ಟದಲ್ಲಿ ಹಲವಾರು ವಾಹನಗಳು ಲಭ್ಯವಿರುವುದರಿಂದ ಸಿಬ್ಬಂದಿ ಶೀಘ್ರ ಸಮಸ್ಯೆಗಳಿಗೆ ಸ್ಪಂದಿಸಲು ಧಾವಿಸಬಹುದು. ಇದರೊಂದಿಗೆ ತಂಡಗಳು ಎಲ್ಲಿ ಕಾರ್ಯಾಚರಣೆ ನಡೆಸುತ್ತಿವೆ ಎಂಬುದರ ಕುರಿತು ಮುಖ್ಯ ಎಂಜಿನಿಯರ್‌ ಮೇಲ್ವಿಚಾರಣೆ ನಡೆಸಬಹುದಾಗಿದೆ ಅರಣ್ಯ ವಿಭಾಗದ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ. 

ಪಾಲಿಕೆಯಿಂದ ಮುನ್ನೆಚ್ಚರಿಕೆ ಕ್ರಮಗಳು: ಪಾಲಿಕೆಯಿಂದ ಈಗಾಗಲೇ ನಗರದಲ್ಲಿ ಮಳೆಯಿಂದ ಉಂಟಾಗುವ ಸ್ಥಳಗಳನ್ನು ಗುರುತಿಸಲಾಗಿದೆ. ಜತೆಗೆ ಸಾರ್ವಜನಿಕರು ಹಾಗೂ ಪಾಲಿಕೆ ಸದಸ್ಯರ ಸಹಕಾರದೊಂದಿಗೆ ದುರ್ಬಲಗೊಂಡಿರು ಹಾಗೂ ಶಿಥಿಲಾವಸ್ಥೆಯಲ್ಲಿರುವ ಮರಗಳನ್ನು ತೆರವುಗೊಳಿಸಲು ಕ್ರಮಕೈಗೊಳ್ಳಲಾಗಿದೆ. ಜತೆಗೆ ಒಣಗಿದ ಕೊಂಬೆಗಳ ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹೇಳಿದರು. 

ಮಳೆಗಾಲದಲ್ಲಿ ನಗರದ ಜನತೆಯ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಿ ಪರಿಹಾರ ಕಲ್ಪಿಸುವ ಉದ್ದೇಶದಿಂದ ಅರಣ್ಯ ವಿಭಾಗದಲ್ಲಿರುವ 21 ರಕ್ಷಣಾ ತಂಡಗಳನ್ನು ರಚಿಸಿ, ಪ್ರತಿಯೊಂದು ವಲಯಕ್ಕೂ 2ರಿಂದ 3 ತಂಡಗಳನ್ನು ನಿಯೋಜಿಸಲು ಉದ್ದೇಶಿಸಲಾಗಿದೆ. ಈ ಕುರಿತು ಎಂಟು ವಲಯಗಳ ಮುಖ್ಯ ಎಂಜಿನಿಯರ್‌ಗಳೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ. 
-ಚೋಳರಾಜಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಬಿಬಿಎಂಪಿ

* ವೆಂ.ಸುನೀಲ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next