ಅಫಜಲಪುರ: ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಪರೀತವಾಗಿ ಕಾಡಿತ್ತು. ಆದರೆ ಮಳೆಗಾಲ ಆರಂಭವಾಗುತ್ತಿದ್ದಂತೆ ನೀರಿನ ಸಮಸ್ಯೆ ನೀಗಿ ಎಲ್ಲೆಡೆ ನೀರು ಲಭ್ಯವಾಗುತ್ತದೆ ಎಂದುಕೊಂಡಿದ್ದ ಜನರಿಗೆ ಇನ್ನೂ ಬರಗಾಲದ ಶಾಕ್ ಬಿಟ್ಟು ಹೋಗಿಲ್ಲ. ಮಳೆ ಬಂದರೂ ತಪ್ಪಿಲ್ಲ ನೀರಿನ ಬವಣೆ.
ತಾಲೂಕಿನಾದ್ಯಂತ ಕುಡಿಯುವ ನೀರಿನ ಬವಣೆ ಇದೆ. ಅದರಲ್ಲೂ ಮಲ್ಲಾಬಾದ, ಮಾತೋಳಿ, ಚಿಂಚೋಳಿ, ರೇವೂರ(ಕೆ), ರೇವೂರ(ಬಿ), ಹೊಸೂರ, ರಾಮನಗರ, ಚವಡಾಪುರ, ಗೊಬ್ಬೂರ(ಬಿ), ಚಿಣಮಗೇರಾ, ಆನೂರ, ಮಾಶಾಳ, ಭೈರಾಮಡಗಿ ಸೇರಿದಂತೆ ಹತ್ತಾರು ಊರುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹುವಾಗಿ ಕಾಡುತ್ತಿದೆ.
ಮಳೆ ಬಂದರೂ ಕೊಳವೆ ಬಾವಿಗಳು, ತೆರೆದ ಬಾವಿಗಳಿಗೆ ನೀರು ಬಂದಿಲ್ಲ. ಅಂತರ್ಜಲ ಮಟ್ಟ ವೃದ್ದಿಯಾಗಿಲ್ಲ. ಹೀಗಾಗಿ ಜನಸಾಮಾನ್ಯರು ಮತ್ತೆ ಬೇಸಿಗೆಯಲ್ಲಿ ನೀರಿಗಾಗಿ ಅಲೆದಾಡಿದಂತೆ ಮಳೆಗಾಲದಲ್ಲೂ ನೀರಿಗಾಗಿ ಪರದಾಡುವ ಪರಿಸ್ಥಿತಿ ಬಂದಿದೆ.
ತಾಲೂಕಿನ ಮಲ್ಲಾಬಾದ ಗ್ರಾಪಂ ವ್ಯಾಪ್ತಿಯಲ್ಲಿ ಸಾಕಷ್ಟು ನೀರಿನ ಸಮಸ್ಯೆ ಉದ್ಭವಿಸಿದೆ. ಇಲ್ಲಿ ನೀರು ತರಬೇಕಾದರೆ ಕಿಲೋಮೀಟರ್‌ಗಟ್ಟಲೇ ಅಲೆಯಬೇಕು. ಖಾಸಗಿಯವರ ಹೊಲ ಗದ್ದೆಗಳಿಂದ ನೀರು ತರಬೇಕಾದ ಅನಿವಾರ್ಯತೆ ಎದುರಾಗಿದೆ. ಗ್ರಾಪಂನವರು ಟ್ಯಾಂಕರ್ ನೀರು ಪೂರೈಸುತ್ತಿದಾರೂ ಸಮಸ್ಯೆಗೆ ಪರಿಹಾರ ಮಾತ್ರ ಸಿಗುತ್ತಿಲ್ಲ.
ಒಟ್ಟಿನಲ್ಲಿ ತಾಲೂಕಿನಾದ್ಯಂತ ಮಳೆ ಇದ್ದರೂ ಕೂಡ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಅದರಲ್ಲೂ ನದಿ ದಡದಲ್ಲಿರುವ ಊರುಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಮಳೆ ಬಂದರೂ ನೀರಿನ ಸಮಸ್ಯೆ ಕಾಡುತ್ತಿರುವ ಬಗ್ಗೆ ಜನಸಾಮಾನ್ಯರು ಚಿಂತಾಕ್ರಾಂತರಾಗಿದ್ದಾರೆ.
•ಮಲ್ಲಿಕಾರ್ಜುನ ಹಿರೇಮಠ