Advertisement

“ಅವಿಭಕ್ತ ಕುಟುಂಬಗಳ ಅವನತಿ ಆತ್ಮಹತ್ಯೆಗೆ ಪ್ರಮುಖ ಕಾರಣ’

10:14 PM Oct 10, 2019 | sudhir |

ಉಡುಪಿ: ಅವಿಭಕ್ತ ಕುಟುಂಬಗಳ ಅವನತಿಯಿಂದಾಗಿ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಉಪೇಂದ್ರ ಪೈ ಸ್ಮಾರಕ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ| ಕೆ.ಎಸ್‌. ಅಡಿಗ ಅಭಿಪ್ರಾಯಪಟ್ಟರು
ಗುರುವಾರ ಬಾಳಿಗಾ ಆಸ್ಪತ್ರೆಯ ಆಶ್ರಯದಲ್ಲಿ ಆಸ್ಪತ್ರೆಯ ಕಮಲ್‌ ಎ. ಬಾಳಿಗಾ ಸಭಾಂಗಣದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಭಾವನೆ ಹಂಚಿ ಕೊಳ್ಳಲು ಯಾರು ಇಲ್ಲ. ಒತ್ತಡ ನಿಭಾಯಿಸಲು ಸಾಧ್ಯವಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ವಿಷಾದಿಸಿದರು.

Advertisement

ವಿಶ್ವ ಆರೋಗ್ಯ ಸಂಸ್ಥೆಯ 2014ರ ಸಮೀಕ್ಷೆ ಪ್ರಕಾರ ವಿಶ್ವದಲ್ಲಿ ಪ್ರತಿ 40 ಸೆಕೆಂಡಿಗೆ ಒಬ್ಬ ವ್ಯಕ್ತಿ ಆತ್ಮಹತ್ಯೆಗೆ ಬಲಿಯಾಗುತ್ತಿದ್ದಾನೆ. ಪ್ರತಿ 3 ಸೆಕೆಂಡಿಗೆ ಒಂದು ಆತ್ಮಹತ್ಯೆಗೆ ಪ್ರಯತ್ನ ನಡೆಯುತ್ತಿದೆ. ಪ್ರತಿ ಒಂದು ಸೆಕೆಂಡಿಗೆ ಸಾವಿರಾರು ಆತ್ಮಹತ್ಯೆ ಪ್ರಯತ್ನಗಳ ನಿರ್ಧಾರವಾಗುತ್ತಿದೆ. ಮುಂದುವರೆದ ರಾಷ್ಟ್ರ ಅಮೇರಿಕಾದಲ್ಲೂ ಕೂಡ ಸಾವಿಗೆ ಪ್ರಮುಖ ಕಾರಣ ಆತ್ಮಹತ್ಯೆ ಆಗಿದೆ ಎಂದು ಮಾಹಿತಿ ನೀಡಿದರು.

ಆತ್ಮಹತ್ಯೆ ಇಂದು ಜಾಗತಿಕ ಮಟ್ಟದ ಸವಾಲು. 4 ದಶಕಗಳಿಂದ ಈಚೆಗೆ ಆತ್ಮಹತ್ಯೆ ನಿಯಂತ್ರಣಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಆತ್ಮಹತ್ಯೆಯಿಂದ ಇಡೀ ಕುಟುಂಬಕ್ಕೆ ಆಘಾತ ಆಗುತ್ತದೆ. ಈ ಕುರಿತು ಅರಿವು ಮೂಡಿಸುವುದರ ಜತೆಗೆ ಖನ್ನತೆ, ಒತ್ತಡದಿಂದ ಹೊರಬರುವ ಆಯಾಮಗಳನ್ನು ಕಂಡುಕೊಳ್ಳಬೇಕು ಎಂದು ಹೇಳಿದರು.

ಡಾ| ಎ.ವಿ. ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ| ಪಿ.ವಿ. ಭಂಡಾರಿ ಮಾತನಾಡಿ, ಭಾರತಕ್ಕೆ ಸುಮಾರು 36,000 ಮನೋತಜ್ಞರ ಅಗತ್ಯವಿದೆ. ಆದರೆ ನಮ್ಮಲ್ಲಿ ಇರುವುದು ಕೇವಲ 9,000 ವೈದ್ಯರು ಮಾತ್ರ. ಸರಕಾರ ಆತ್ಮಹತ್ಯೆ ತಡೆಗೆ ಅಗತ್ಯವಿರುವ ಕಾರ್ಯಕ್ರಮವನ್ನು ರೂಪಿಸಬೇಕು ಎಂದರು.

ಆಸ್ಪತ್ರೆ ವೈದ್ಯ ಡಾ| ದೀಪಕ್‌ ಮಲ್ಯ, ಆಡಳಿತಾಧಿಕಾರಿ ಸೌಜನ್ಯ ಉಪಸ್ಥಿತರಿದ್ದರು. ನಾಗರಾಜ್‌ ಮೂರ್ತಿ ಸ್ವಾಗತಿಸಿದರು, ಸುರೇಶ್‌ ಎಸ್‌.ನಾವೂರು ವಂದಿಸಿದರು. ಪಂಚಮಿ, ದೀಪಶ್ರೀ ಕಾರ್ಯಕ್ರಮ ನಿರ್ವಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next