Advertisement
ಅಮೆರಿಕದ ಟ್ರಂಪ್ ಸರ್ಕಾರ ಹೊರಡಿಸಿರುವ ಹೊಸ ಆದೇಶವೊಂದು ಮೊಬೈಲ್ ಫೋನ್ ಕ್ಷೇತ್ರದಲ್ಲಿ ಅತ್ಯಂತ ಪ್ರಮುಖ ಸುದ್ದಿಯಾಗಿ ಎಲ್ಲೆಡೆ ಹರಿದಾಡುತ್ತಿದೆ. ಅಮೆರಿಕದ ಈ ನಿರ್ಧಾರ ಅಮೇರಿಕೇತರ ಕಂಪೆನಿಗಳು ತಮ್ಮ ನಡೆಯನ್ನು ಪುನರ್‌ಪರಿಶೀಲಿಸಿಕೊಳ್ಳುವಂತೆ ಮಾಡಿದೆ. ತಮ್ಮ ಉತ್ಪನ್ನಗಳಿಗೆ ಅಮೆರಿಕವನ್ನು ಅವಲಂಬಿಸಿದರೆ ಮುಂದೊಂದು ದಿನ ನಮಗೂ ಇದೇ ಗತಿ ಬಂದೊದಗಬಹುದು ಎಂದು ಅಮೇರಿಕೇತರ ಕಂಪೆನಿಗಳು ಯೋಚಿಸುವಂತಾಗಿದೆ.
Related Articles
Advertisement
ಯಾಕೀ ಬ್ಯಾನ್ ಘೋಷಣೆ?: ಹುವಾವೇ ಉತ್ಪನ್ನಗಳಲ್ಲಿ ಅಮೆರಿಕಾದ ರಾಷ್ಟ್ರೀಯ ಭದ್ರತೆಗೆ ಅಪಾಯ ಉಂಟು ಮಾಡುವ ಅಂಶಗಳಿವೆ. ಬಳಕೆದಾರರ ಮಾಹಿತಿ ಸೋರಿಕೆಯಾಗಬಹುದಾಗಿದೆ ಎಂಬ ಆತಂಕ ಅಮೆರಿಕಾ ಸರ್ಕಾರದ್ದು. ಹೀಗಾಗಿಯೇ ಹುವಾವೇ ಫೋನ್‌ಗಳ ಮಾರಾಟಕ್ಕೆ ಅಮೆರಿಕಾದಲ್ಲಿ ಅವಕಾಶ ನೀಡಿಲ್ಲ.
ಅಮೆರಿಕಾದ ಆತಂಕಕ್ಕೆ ಕಾರಣ?: ಅಮೆರಿಕಾದ ಈ ಆದೇಶದಲ್ಲಿ ಅಡಗಿರುವುದು ಪಕ್ಕಾ ವಾಣಿಜ್ಯ ಉದ್ದೇಶ ಎಂಬುದು ಅಮೆರಿಕಾ ಬಲ್ಲವರಿಗೆ ಗೊತ್ತು. ಹುವಾವೇ ಕಂಪೆನಿ ಕೇವಲ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುತ್ತಿಲ್ಲ. ಇಡೀ ಮೊಬೈಲ್ ಫೋನ್ ತಾಂತ್ರಿಕತೆಗೆ ಮೂಲಬೇರಾದ ನೆಟ್‌ವರ್ಕಿಂಗ್‌ನಲ್ಲಿ ಹುವಾವೇ ಪ್ರಮುಖ ಸ್ಥಾನ ಪಡೆದಿದೆ. ಮೊಬೈಲ್ ಫೋನ್ ತಂತ್ರಜ್ಞಾನಕ್ಕೆ ಮೂಲ ತರಂಗಾಂತರಗಳು. ಆ ತರಂಗಾಂತರ ತಂತ್ರಜ್ಞಾನ, ಬೇಸ್‌ಸ್ಟೇಷನ್ (ಟವರ್ ಅಂತೀವಲ್ಲ ಅದು) ವ್ಯವಹಾರದಲ್ಲಿ ಜಗತ್ತಿನಲ್ಲಿ ಇರೋದು ಮೂರೇ ಕಂಪೆನಿಗಳು. 1. ನೋಕಿಯಾ 2. ಎರಿಕ್‌ಸನ್ 3. ಹುವಾವೇ.
ಈಗ 5ಜಿ ತಂತ್ರಜ್ಞಾನ ಜಗತ್ತಿನೆಲ್ಲೆಡೆ ದಾಪುಗಾಲಿಡಲು ಬರುತ್ತಿದೆ. 5ಜಿಯಲ್ಲಿ ಹುವಾವೇ ನೋಕಿಯಾ, ಎರಿಕ್ಸನ್‌ಗಿಂತಲೂ ಮುಂದಿದೆ. ಜಗತ್ತಿನ ಅನೇಕ ದೇಶಗಳು (ಭಾರತ ಸೇರಿದಂತೆ) ತಮ್ಮ ದೇಶದ 5ಜಿ ತಂತ್ರಜ್ಞಾನ ಒದಗಿಸಲು ಹುವಾವೇ ಜೊತೆ ಒಪ್ಪಂದ ಮಾಡಿಕೊಂಡಿವೆ. ಇದಕ್ಕೆ ಕಾರಣ ಹುವಾವೇ ನೋಕಿಯಾ ಮತ್ತು ಎರಿಕ್ಸನ್‌ಗಿಂತ ಕಡಿಮೆ ವೆಚ್ಚದಲ್ಲಿ ತಂತ್ರಜ್ಞಾನ ಒದಗಿಸಲು ಸಿದ್ಧವಾಗಿರುವುದು. ಹೀಗೆ ಹುವಾವೇ, ನೆಟ್‌ವರ್ಕ್ ಕ್ಷೇತ್ರದಲ್ಲಿ ಜಗತ್ತಿನಾದ್ಯಂತ ದೈತ್ಯನಾಗಿ ಬೆಳೆದರೆ, ಅಮೆರಿಕಾ ಕಂಪೆನಿಗಳಿಗೂ ಸೆಡ್ಡು ಹೊಡೆದರೆ ಗತಿಯೇನು? ಇದರಿಂದಾಗಿ ಚೀನಾದ ಕಂಪೆನಿಯೊಂದು ಆರ್ಥಿಕವಾಗಿ ಬೆಳೆದರೆ ತಮಗೇ ತೊಂದರೆ ಎಂಬುದು ಅಮೆರಿಕಾ ಆತಂಕ ತನ್ನ ಫೋನ್‌ಗಳಲ್ಲಾಗಲೀ, ಇತರ ಉತ್ಪನ್ನಗಳಲ್ಲಾಗಲೀ ಅಮೆರಿಕಾದ ಭದ್ರತೆಗೆ ತೊಂದರೆಯುಂಟಾಗುವ ಅಂಶಗಳಿದ್ದರೆ ಅದನ್ನು ಸಾಬೀತು ಮಾಡಲಿ ಎಂಬುದು ಹುವಾವೇ ವಾದ. ತನ್ನ ಮೊಬೈಲ್ ಫೋನ್ ಸಾಫ್ಟ್ವೇರ್‌ನ ಸಂಪೂರ್ಣ ಸೋರ್ಸ್ ಕೋಡನ್ನು ಅಮೆರಿಕಾದ ಮಾಧ್ಯಮಗಳಿಗೆ ನೀಡುವುದಾಗಿಯೂ, ಅಮೆರಿಕಾದ ಯಾವುದೇ ಮಾಧ್ಯಮ ಒಂದು ವೇದಿಕೆಯಲ್ಲಿ ಇದನ್ನು ಪರಿಶೀಲಿಸಿ, ಭದ್ರತೆಗೆ ಅಪಾಯವುಂಟಾಗುವ ಅಂಶಗಳನ್ನು ಪತ್ತೆ ಮಾಡಬಹುದು, ಈ ಬಗ್ಗೆ ಚರ್ಚೆಗೆ ಸಿದ್ಧ ಎಂದು ಹುವಾವೇ ಆಹ್ವಾನ ನೀಡಿತ್ತು.
ಮುಂದ??: ಹುವಾವೇ ಮೇಲಿನ ತನ್ನ ಆದೇಶವನ್ನು ಅಮೆರಿಕಾ ಹಿಂತೆಗೆದುಕೊಳ್ಳದಿದ್ದರೆ ಏನಾಗಬಹುದು? ಈಗಿರುವ ಹುವಾವೇ ಆನರ್ ಫೋನ್ ಬಳಕೆದಾರರಿಗೆ ಯಾವುದೇ ಆತಂಕವಿಲ್ಲ. ಮುಂದೆ ತಯಾರಾಗುವ ಹುವಾವೇ-ಆನರ್ ಫೋನ್‌ಗಳು ಅಂಡ್ರಾಯ್ಡ ಆಪರೇಟಿಂಗ್ ಸಿಸ್ಟಂ ಬಳಸಲಾಗುವುದಿಲ್ಲ. ಅದರಲ್ಲಿ ಗೂಗಲ್ ಪ್ಲೇ ಸ್ಟೋರ್ ಇರುವುದಿಲ್ಲ. ಯೂಟ್ಯೂಬ್ ಬರುವುದಿಲ್ಲ, ಜಿಮೇಲ್ ಆ್ಯಪ್ ಇರಲ್ಲ. ಸ್ನಾಪ್‌ಡ್ರಾಗನ್ ಪ್ರೊಸೆಸರ್ ಹಾಕುವ ಹಾಗಿಲ್ಲ ಇತ್ಯಾದಿ.ಅಮೆರಿಕಾ ಕಂಪೆನಿಗಳನ್ನು ನಂಬಿಕೊಂಡರೆ ಮುಂದೊಂದು ದಿನ ಕೈಗೊಡಬಹುದು ಎಂದು ಹುವಾವೇ ಬಹಳ ಹಿಂದೆಯೇ ಎಚ್ಚೆತ್ತುಕೊಂಡಿದೆ. ಈಗಾಗಲೇ ತನ್ನ ಎಲ್ಲ ಫೋನ್‌ಗಳಲ್ಲಿ ತನ್ನದೇ ಸ್ವಂತ ತಯಾರಿಕೆಯಾದ ಹೈಸಿಲಿಕಾನ್ ಕಿರಿನ್ ಪ್ರೊಸೆಸರ್‌ಗಳನ್ನು ಬಳಸುತ್ತಿದೆ ಮತ್ತವು ಯಶಸ್ವಿಯಾಗಿವೆ. ಇನ್ನು ಅಂಡ್ರಾಯ್ಡ ಓಎಸ್‌ಗೆ ಪರ್ಯಾಯವಾಗಿ ತನ್ನದೇ ಹೋಂಗ್‌ಮೆಂಗ್ ಓಎಸ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಪ್ಲಾನ್ ಬಿ ಅಷ್ಟೇ. (ಅಮೆರಿಕಾ ಜೊತೆ ಸಂಧಾನ ನಡೆಸಿ ಮತ್ತೆ ಗೂಗಲ್ ಲೈಸೆನ್ಸ್ ಪಡೆಯುವ ಸಾಧ್ಯತೆಯೂ ಇದೆ.) ಆದರೆ ಪ್ಲೇಸ್ಟೋರ್ ನದೇ ಹುವಾವೇಗೆ ಸಮಸ್ಯೆಯಾಗಬಹುದು. ಈಗಾಗಲೇ ಹುವಾವೇ ಫೋನ್‌ಗಳಲ್ಲಿ ಪ್ಲೇಸ್ಟೋರ್ ಜೊತೆ ಆ್ಯಪ್ ಗ್ಯಾಲರಿ ಎಂಬ ಪರ್ಯಾಯ ಇದೆ. ಗ್ರಾಹಕರು ಅಲ್ಲಿಂದಲೂ ಆಪ್‌ಗ್ಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಆದರೆ ಗೂಗಲ್ ಪ್ಲೇ ಸ್ಟೋರ್ ದೈತ್ಯವಾಗಿ ಬೆಳೆದಿದ್ದು, ಅದರಲ್ಲಿ ದೊರಕುವಷ್ಟು ಆ್ಯಪ್‌ಗ್ಳು ದೊರಕಲಾರವು. ಉಳಿದ ಕಂಪೆನಿಗಳಿಗೂ ಆತಂಕ: ಅಮೆರಿಕಾದ ಈ ನಿರ್ಧಾರ ಕೇವಲ ಹುವಾವೇಗಷ್ಟೇ ತಲೆನೋವಾಗಿಲ್ಲ. ಚೀನಾದ ಒಪ್ಪೋ,ಒನ್‌ಪ್ಲಸ್, ಶಿಯೋಮಿ ಜೊತೆಗೆ ಸ್ಯಾಮ್‌ಸಂಗ್ ಗೂ ಆತಂಕ ಮೂಡಿಸಿರಲಿಕ್ಕೂ ಸಾಕು. ಹೀಗಾಗಿಯೇ ಸ್ಯಾಮ್‌ಸಂಗ್ ತನ್ನದೇ ಟೈಜನ್ ಓಎಸ್ ಸೃಷ್ಟಿ ಮಾಡಿತ್ತು. ಹುವಾವೇಗೆ ತನ್ನದೇ ಕಿರಿನ್ ಪ್ರೊಸೆಸರ್ ಇದೆ. ಸ್ಯಾಮ್‌ಸಂಗ್ ಕೂಡ ತನ್ನದೇ ಎಕ್ಸಿನಾಸ್ ಪ್ರೊಸೆಸರ್ ಬಳಸುತ್ತಿದೆ. ಒನ್‌ಪ್ಲಸ್, ಶಿಯೋಮಿ ಅಮೆರಿಕಾದ ಸ್ನಾಪ್‌ಡ್ರಾಗನ್ ಅನ್ನೇ ನೆಚ್ಚಿಕೊಂಡಿವೆ. ನಿನ್ನೆ ಝಡ್‌ಟಿಇ, ಇಂದು ಹುವಾವೇ, ಮುಂದೊಂದು ದಿನ ಅಮೆರಿಕಾ ಸರ್ಕಾರ ಚೀನಾದ ಯಾವುದೇ ಕಂಪೆನಿಗೂ ಅಮೆರಿಕಾ ಜೊತೆ ವ್ಯವಹಾರ ರದ್ದು ಪಡಿಸುವ ನಿಲುವು ತೆಗೆದುಕೊಂಡರೆ?! ಮೂರು ತಿಂಗಳ ತಾತ್ಕಾಲಿಕ ನಿರಾಳ: ತನ್ನ ಆದೇಶ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಮತ್ತೆ, ಅಮೆರಿಕಾ ಸರ್ಕಾರ ತನ್ನ ಈ ಆದೇಶವನ್ನು ತಾತ್ಕಾಲಿಕವಾಗಿ ಮೂರು ತಿಂಗಳವರೆಗೆ ತಡೆ ಹಿಡಿದಿರುವುದಾಗಿ ಪ್ರಕಟಿಸಿದೆ. ಈ ಮೂರು ತಿಂಗಳ ಅವಧಿಯಲ್ಲಿ ಏನಾಗುತ್ತದೋ ಗೊತ್ತಿಲ್ಲ. -ಕೆ.ಎಸ್. ಬನಶಂಕರ ಆರಾಧ್ಯ