Advertisement

ಆಪರೇಷನ್‌ ಕಮಲಕ್ಕೆ ತಿರುಗೇಟು ನೀಡಲು ನಿರ್ಧಾರ

06:05 AM Sep 24, 2018 | |

ಬೆಂಗಳೂರು: ಆಪರೇಷನ್‌ ಕಮಲದ ಮೂಲಕ ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ನಡೆಸುತ್ತಿರುವ ಪ್ರಯತ್ನಗಳಿಗೆ ತಿರುಗೇಟು ನೀಡಲು ಮುಂದಾಗಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಇದೀಗ ಜನತಾ ಪರಿವಾರ ಮೂಲದ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಒದಗಿಸುವ ಮೂಲಕ ಆ ಶಾಸಕರ ಒಲವು ಗಳಿಸಲು ನಿರ್ಧರಿಸಿದ್ದಾರೆ.

Advertisement

ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಯೋಜನೆಗಳಿಗೆ ಅನುದಾನ ಕೋರಿ ಸಂಪರ್ಕಿಸುವ ಜನತಾ ಪರಿವಾರ ಬಿಜೆಪಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆ ಹಣ ಮಂಜೂರು ಮಾಡುವುದರೊಂದಿಗೆ ಅಗತ್ಯ ಬಿದ್ದಾಗ ತಮ್ಮ ನೆರವಿಗೆ ನಿಲ್ಲುವಂತೆ ನೋಡಿಕೊಳ್ಳುವುದು ಮುಖ್ಯಮಂತ್ರಿಗಳ ಈ ನಿರ್ಧಾರದ ಹಿಂದಿರುವ ಉದ್ದೇಶ.

ಈಗಾಗಲೇ ಕ್ಷೇತ್ರಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ತಮ್ಮನ್ನು ಸಂಪರ್ಕಿಸಿರುವ ಮತ್ತು ರಾಜಕೀಯವಾಗಿಯೂ ತಮ್ಮೊಂದಿಗೆ ಆತ್ಮೀಯರಾಗಿರುವ ಬಿಜೆಪಿ ಶಾಸಕರಿಗೆ ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಅಲ್ಲದೆ, ಈ ಶಾಸಕರು ನೆರವು ಕೋರಿ ಬಂದಾಗ ತಕ್ಷಣ ಸ್ಪಂದಿಸಿ ಎಂದು ಜೆಡಿಎಸ್‌ ಸಚಿವರಿಗೂ ತಿಳಿಸಿದ್ದು, ಒಟ್ಟಿನಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಅಪಾಯ ಉಂಟು ಮಾಡದಂತೆ ಬಿಜೆಪಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಮುಖ್ಯಮಂತ್ರಿಗಳು ಸೂಚಿಸಿರುವುದಾಗಿ ಮೂಲಗಳು ತಿಳಿಸಿವೆ.

ಬಿಜೆಪಿಯ ಆಪರೇಷನ್‌ ಕಮಲಕ್ಕೆ ಪ್ರತಿಯಾಗಿ ಈಗಾಗಲೇ ಆ ಪಕ್ಷದ ಕೆಲವು ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಇದರ ಮುಂದುವರಿದ ಭಾಗವಾಗಿ ಜನತಾ ಪರಿವಾರ ಮೂಲದ ಬಿಜೆಪಿ ಶಾಸಕರ ಒಲವು ಗಳಿಸಿ ಅವರನ್ನೂ ತಮ್ಮತ್ತ ಸೆಳೆಯಲು ಯೋಚಿಸಿದ್ದಾರೆ. ಜನತಾ ಪರಿವಾರ ಒಡೆದು ಹೋದ ಸಂದರ್ಭದಲ್ಲಿ ಪಕ್ಷ ಬಿಟ್ಟು ಬಿಜೆಪಿ ಸೇರಿದವರೂ ಸೇರಿದಂತೆ ನಂತರದಲ್ಲಿ ಬಿಜೆಪಿ ಪಾಲಾಗಿ ಇದೀಗ ಗೆದ್ದು ಬಂದಿರುವ ಶಾಸಕರೊಂದಿಗೂ ಉತ್ತಮ ಒಡನಾಟ ಇಟ್ಟುಕೊಳ್ಳುವಂತೆ ಸಚಿವರು ಮಾತ್ರವಲ್ಲದೆ, ಪಕ್ಷದ ಶಾಸಕರಿಗೂ ಸೂಚಿಸಿದ್ದಾರೆ. ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಕೂಡ ಈ ಕೆಲಸದಲ್ಲಿ ಕೈಜೋಡಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ದೇವೇಗೌಡರಿಂದಲೂ ಸೂಚನೆ:
ಈ ಮಧ್ಯೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರೂ ಜನತಾ ಪರಿವಾರ ಮೂಲದ ಬಿಜೆಪಿ ಶಾಸಕರನ್ನು ಸೆಳೆಯಲು ಪ್ರಯತ್ನಿಸುವಂತೆ ಸಚಿವರಿಗೆ ಸೂಚಿಸಿದ್ದಾರೆ. ಶಾಸಕರು ಮಂತ್ರಿಗಳನ್ನು ಸಂಪರ್ಕಿಸುವುದು ಬಹುತೇಕ ರಸ್ತೆ, ವಿದ್ಯುತ್‌, ಶಾಲೆ, ಬಸ್‌ ಮುಂತಾದ ಮೂಲ ಸೌಕರ್ಯ ವಿಚಾರದಲ್ಲಿ. ಹೀಗಾಗಿ ಇತ್ತೀಚೆಗೆ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಅವರನ್ನು ಕರೆಸಿದ್ದ ದೇವೇಗೌಡರು, ರಸ್ತೆ ಸಂಬಂಧಿಸಿದಂತೆ ಬಿಜೆಪಿ ಶಾಸಕರ ಕಡೆಯಿಂದ ಬರುವ ಪ್ರಸ್ತಾವನೆಗಳನ್ನು ನಿರ್ಲಕ್ಷ್ಯ ಮಾಡದೆ ಸ್ಪಂದಿಸುವಂತೆ ತಿಳಿಹೇಳಿದ್ದಾರೆ. ಇಂಧನ ಇಲಾಖೆ ಮುಖ್ಯಮಂತ್ರಿಗಳ ಕೈಯ್ಯಲ್ಲೇ ಇರುವುದರಿಂದ ತೊಂದರೆಯಿಲ್ಲ. ಇನ್ನು ಶಿಕ್ಷಣ ಮತ್ತು ಸಾರಿಗೆ ಸಚಿವರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಮೂಲಕ ಸೂಚನೆ ಕೊಡಿಸಿದ್ದಾರೆ ಎಂದು ಮೂಲಗಳು ಹೇಳಿವೆ.

Advertisement

ಪ್ರಸ್ತುತ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವ ಅಗತ್ಯ ಜೆಡಿಎಸ್‌ಗಿಂತಲೂ ಕಾಂಗ್ರೆಸ್‌ಗೆà ಹೆಚ್ಚು. ಲೋಕಸಭೆಯಲ್ಲಿ ಅಧಿಕಾರದ ಕನಸು ಕಾಣುತ್ತಿರುವ ಕಾಂಗ್ರೆಸ್‌ಗೆ ಈ ಮೈತ್ರಿ ಸರ್ಕಾರ ಮುಂದುವರಿಸಿಕೊಂಡು ಹೋಗುವುದು ಅನಿವಾರ್ಯವಾಗಿದ್ದು, ಅದಕ್ಕಾಗಿ ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುತ್ತದೆ. ಸಣ್ಣ ಪುಟ್ಟ ಅಸಮಾಧಾನಗಳನ್ನು ಹೈಕಮಾಂಡ್‌ ಬಗೆಹರಿಸುತ್ತದೆ. ಇದನ್ನು ಮೀರಿ ಕೆಲವರು ಬಿಜೆಪಿಯತ್ತ ಹೋದರೂ ಸರ್ಕಾರ ಉರುಳಿಸಲು ಬೇಕಾದ ಮ್ಯಾಜಿಕ್‌ ಸಂಖ್ಯೆ 18 ತಲುಪುವುದು ಕಷ್ಟಸಾಧ್ಯ. ಒಂದೊಮ್ಮೆ ತಲುಪಿದರೂ ಬಿಜೆಪಿಯ ಮೂರ್ನಾಲ್ಕು ಶಾಸಕರನ್ನು ಸೆಳೆದರೆ ಸರ್ಕಾರ ಉರುಳಿಸುವ ಬಿಜೆಪಿಯ ಕನಸು ಈಡೇರುವುದಿಲ್ಲ. ಹೀಗಾಗಿ ಸರ್ಕಾರ ಉರುಳುವ ಸ್ಥಿತಿ ಬಂದರೆ ಬಿಜೆಪಿ ಶಾಸಕರನ್ನು ಸೆಳೆಯುವ ಉದ್ದೇಶದಿಂದ ಅವರ ವಿಶ್ವಾಸ ಗಳಿಸಿಕೊಳ್ಳಲು ಮುಖ್ಯಮಂತ್ರಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next