Advertisement

43 ಸಾವಿರ ಸಸಿ ನೆಡಲು ನಿರ್ಧಾರ

02:46 PM Jul 04, 2017 | Team Udayavani |

ಕಲಬುರಗಿ: ವೇಗವಾಗಿ ಬೆಳೆಯುತ್ತಿರುವ ಮಹಾನಗರದ ಹಸರೀಕರಣಕ್ಕಾಗಿ ಹೈದ್ರಾಬಾದ್‌ ಕರ್ನಾಟಕ ಅಭಿವೃದ್ಧಿ ಮಂಡಳಿ ಮಹಾನಗರ ಪಾಲಿಕೆಗೆ ನೀಡಿರುವ 15 ಲಕ್ಷ ರೂ.ಗಳಲ್ಲಿ 43 ಸಾವಿರ ಸಸಿ ಬೆಳೆಸಲು ನಿರ್ಧರಿಸಲಾಗಿದೆ. ನಗರದ ಎಲ್ಲ ವಾರ್ಡ್‌ಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಹಾಪೌರ ಶರಣಕುಮಾರ ಮೋದಿ ತಿಳಿಸಿದರು.

Advertisement

ಈಗಾಗಲೇ ಪ್ರಥಮ ಹಂತವಾಗಿ 14 ಸಾವಿರ ಸಸಿಗಳನ್ನು ಜೂನ್‌ ಮೊದಲ ವಾರದಲ್ಲಿ ಪಾಲಿಕೆ ಸದಸ್ಯರು ಹಾಗೂ ಸಂಘ ಸಂಸ್ಥೆಗಳಿಗೆ ವಿತರಿಸಲಾಗಿದೆ. ಉಳಿದ 29 ಸಾವಿರ ಸಸಿಗಳನ್ನು ಸಾರ್ವಜನಿಕರಿಗೆ ವಿತರಿಸುವ ಉದ್ದೇಶವಿದ್ದು,
ಸಾರ್ವಜನಿಕರು ನಿಗದಿತ ನಮೂನೆಯಲ್ಲಿ ಬೇಡಿಕೆ ಸಲ್ಲಿಸಿ ತಮಗೆ ಬೇಕಾದಷ್ಟು ಸಸಿ ಪಡೆಯಬಹುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ನಗರವನ್ನು ಹಸೀರನ್ನಾಗಿಸಲು ಸಂಘ ಸಂಸ್ಥೆಯವರು, ಶಾಲಾ-ಕಾಲೇಜು ಮಂಡಳಿಯವರು ಮುಂದೆ ಬಂದು ಸಸಿಗಳನ್ನು ಪಡೆದು ಅವುಗಳ ಸಂರಕ್ಷಣೆ ಮಾಡಬೇಕು. ನಗರದ ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಕೆಲವು ಗಿಡಗಳು ನಾಶವಾಗಿವೆ. ಅವುಗಳ ಬದಲಾಗಿ ಸ್ಮಶಾನ, ರಾಜಾಪುರ ರಸ್ತೆಗುಂಟ ಒಂದಕ್ಕೆ ಹತ್ತರ ಅನುಪಾತದಲ್ಲಿ ಸಸಿಗಳನ್ನು ಬೆಳೆಸಲಾಗುತ್ತಿದೆ. ನಗರದಲ್ಲಿ ಇತ್ತೀಚೆಗೆ ಬಾಲಕನೋರ್ವ ಚರಂಡಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಅವನ ಕುಟುಂಬದವರಿಗೆ
ನಗರದ ಒಂದು ಶೌಚಾಲಯ ನಿರ್ವಹಣೆ ಜವಾಬ್ದಾರಿ ನೀಡಲಾಗುವುದು ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ ಮಾತನಾಡಿ, ಚರಂಡಿ ಸಂಸ್ಕರಣಾ ಘಟಕದವರು, ಕರ್ನಾಟಕ ನಗರ ಮೂಲಭೂತ ಸೌಕರ್ಯಾಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ ಹಾಗೂ ಕೇಂದ್ರ ಕಾರಾಗೃಹದವರು ಸಸಿ ಬೆಳೆಸಲು
ಸ್ವಇಚ್ಛೆಯಿಂದ ಮುಂದೆ ಬಂದಿದ್ದಾರೆ. ವಾರ್ಡ್‌ ನಂ. 42ರಲ್ಲಿನ ಸಾರ್ವಜನಿಕರು ತಾವೇ ಗುಂಡಿ ತೊಡಿ ಸಸಿ ನೆಡಲು ಇಚ್ಛಿಸಿದ್ದಾರೆ. ಹೀಗೆ ಎಲ್ಲ ಸಾರ್ವಜನಿಕರು ಸಸಿ ನೆಡುವಲ್ಲಿ ಸ್ವಇಚ್ಛೆಯಿಂದ ಮುಂದೆ ಬಂದು ಪಾಲಿಕೆಯಿಂದ ಸಸಿಗಳನ್ನು
ಪಡೆಯಬೇಕು ಎಂದು ಕೋರಿದರು.

ನಗರದಲ್ಲಿರುವ ಎಲ್ಲ ಚರಂಡಿಗಳ ಮೇಲ್ಭಾಗವನ್ನು ಶಹಾಬಾದ್‌ ಫರ್ಸಿ ಕಲ್ಲಿನಿಂದ ಮುಚ್ಚಲು ಯೋಜನೆ ರೂಪಿಸಲಾಗುತ್ತಿದೆ. ಈ ಹಿಂದೆ ಹಮ್ಮಿಕೊಂಡಿರುವ ಚರಂಡಿ ಕಾಮಗಾರಿಗಳಲ್ಲಿ ಮೇಲ್ಭಾಗ ಮುಚ್ಚುವ ಕಾಮಗಾರಿ ಕೈಗೊಂಡಿಲ್ಲ. ಇನ್ನು ಮುಂದೆ ನಿರ್ಮಿಸುವ ಎಲ್ಲ ಚರಂಡಿ ಕಾಮಗಾರಿಗಳಲ್ಲಿ ಮೇಲ್ಭಾಗ ಮುಚ್ಚುವ ಕಾಮಗಾರಿ ಸಹ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಕಾಲುವೆಗಳಲ್ಲಿ ತೇಲಿ ಬರುವ ವಸ್ತುಗಳನ್ನು ತಡೆಯಲು ನಿರ್ಮಿಸಿರುವ ಗ್ರೀಲ್‌ ಮಾದರಿಯಲ್ಲಿ ನೂತನ ಚರಂಡಿ ಸಂಸ್ಕರಣಾ ಘಟಕದ ಹತ್ತಿರ ಚರಂಡಿಗೆ ನಿರ್ಮಿಸಲಾಗುವುದು. ನಗರದ
ಹಲವು ಭಾಗಗಳಲ್ಲಿ ಸ್ಟಾರ್ಮ ವಾಟರ್‌ ಡ್ರೇನ್‌ ನಿರ್ಮಿಸಿಲ್ಲ. ರೈಲು ನಿಲ್ದಾಣದಿಂದ ನಾಗನಹಳ್ಳಿ ವರೆಗೆ ಇದರ ತುಂಬಾ ಅವಶ್ಯಕತೆಯಿದೆ. ಆದಷ್ಟು ಬೇಗ ಕಾಮಗಾರಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next