ಬೆಂಗಳೂರು: ನಗರ ಪೊಲೀಸ್ ಆಯುಕ್ತ ಹುದ್ದೆ ಕುರಿತು ಭಾಸ್ಕರ್‌ರಾವ್ ಅವರು ರಾಜಕೀಯ ಮುಖಂಡರೊಬ್ಬರ ಜತೆ ಫೋನ್ ಸಂಭಾಷಣೆ ನಡೆಸಿದ್ದಾರೆ ಎಂದು ಹೇಳಲಾದ ಆಡಿಯೋ ಸೋರಿಕೆ ಪ್ರಕರಣದ ತನಿಖಾಧಿಕಾರಿ ಹಾಗೂ ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತನಿಖೆಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.
ಈ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ಎನ್.ರಾಜು ಅವರನ್ನು ಭೇಟಿಯಾಗಿ ಲಿಖೀತ ರೂಪದಲ್ಲಿ ಮನವಿ ಮಾಡಿರುವ ಸಂದೀಪ್ ಪಾಟೀಲ್, ಆಡಿಯೋ ಸೋರಿಕೆ ಬಗ್ಗೆ ಈಗಾಗಲೇ ತನಿಖೆ ನಡೆಸಿ, 30 ಪುಟಗಳ ಪ್ರಾಥಮಿಕ ವರದಿ ಸಲ್ಲಿಸಲಾಗಿದೆ. ಆದರೆ, ಮುಂದಿನ ಹಂತದ ತನಿಖೆ ಕೈಗೊಳ್ಳಲು ಸಾಧ್ಯವಿಲ್ಲ. ಪ್ರಕರಣದಲ್ಲಿ ಎಡಿಜಿಪಿ ದರ್ಜೆಯ ಅಧಿಕಾರಿಗಳ ಹೆಸರು ಕೇಳಿ ಬಂದಿರುವುದರಿಂದ ತಾಂತ್ರಿಕವಾಗಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಡುವುದು ಅಥವಾ ಸೂಚಿಸಲು ಆಗುವುದಿಲ್ಲ. ಹೀಗಾಗಿ, ಪ್ರಕರಣದ ತನಿಖೆಯನ್ನು ಸ್ವತಂತ್ರ ಸಂಸ್ಥೆಗೆ ವಹಿಸುವಂತೆ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಾಂತ್ರಿಕ ತೊಂದರೆ ಮುಂದಿಟ್ಟ ಅಧಿಕಾರಿ: ಎಡಿಜಿಪಿ ದರ್ಜೆಯ ಅಧಿಕಾರಿಯೊಬ್ಬರ ಸೂಚನೆ ಮೇರೆಗೆ ಕೆಲ ಹಿರಿಯ ಪೊಲೀಸ್ ಅಧಿಕಾರಿಗಳ ಫೋನ್ ಕದ್ದಾಲಿಕೆ ಮಾಡಲಾಗಿತ್ತು. ಅಲ್ಲದೆ, ತಾವೇ ಸಂಭಾಷಣೆಯ ಆಡಿಯೋವನ್ನು ಪೆನ್‌ಡ್ರೈವ್‌ನಲ್ಲಿ ಹಾಕಿಕೊಂಡು ಭಾಸ್ಕರ್‌ರಾವ್ ಅವರು ಅಧಿಕಾರ ವಹಿಸಿಕೊಳ್ಳುವ ಕೆಲವೇ ಗಂಟೆ ಗಳ ಮೊದಲು ಹಿರಿಯ ಪೊಲೀಸ್ ಅಧಿಕಾರಿ ಯೊಬ್ಬರಿಗೆ ಕೊಟ್ಟಿದ್ದಾಗಿ ಪ್ರಕರಣದ ವಿಚಾರಣೆ ವೇಳೆ ಸಿಸಿಬಿಯ ತಾಂತ್ರಿಕ ವಿಭಾಗದ ಇನ್‌ಸ್ಪೆಕ್ಟರ್‌ರೊಬ್ಬರು ಹೇಳಿಕೆ ನೀಡಿದ್ದರು ಎನ್ನಲಾಗಿದೆ. ಹೀಗಾಗಿ, ಮುಂದಿನ ಹಂತದ ತನಿಖೆ ವೇಳೆ ಫೋನ್ ಕದ್ದಾಲಿಕೆಯಾಗಿದ್ದ ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಮತ್ತು ಕದ್ದಾಲಿಕೆಗೆ ಆದೇಶಿಸಿದ್ದ ಇತರ ಹಿರಿಯ ಅಧಿಕಾರಿಗಳನ್ನೂ ಪ್ರಶ್ನಿಸುವ ಸಾಧ್ಯತೆ ಇದೆ.
ತಾಂತ್ರಿಕವಾಗಿ ಅದು ಸಾಧ್ಯವಾಗುವುದಿಲ್ಲ. ಜತೆಗೆ, ಫೋನ್ ಕದ್ದಾಲಿಕೆಗೆ ಸೂಚನೆ ನೀಡಿದ್ದರು ಎಂದು ಹೇಳಲಾದ ಎಡಿಜಿಪಿ ದರ್ಜೆಯ ಅಧಿಕಾರಿಯ ಹೇಳಿಕೆಯನ್ನು ದಾಖಲಿಸ ಬೇಕಿದೆ. ಈ ಎಲ್ಲ ಕಾರಣಗಳಿಂದ ಮುಂದಿನ ತನಿಖೆ ನಡೆ ಸಲು ಸಾಧ್ಯವಿಲ್ಲ ಎಂದು ಸಂದೀಪ್ ಪಾಟೀಲ್ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ನಡುವೆ, ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಅವರೂ ಸಹ ಈ ಬಗ್ಗೆ ಸ್ವತಂತ್ರ ಸಂಸ್ಥೆ ಅಥವಾ ಉನ್ನತ ಮಟ್ಟದ ತನಿಖೆ ನಡೆಸುವುದು ಸೂಕ್ತ ಎಂದು ಡಿಜಿಪಿ ಅವರಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.
ಏನಿದು ಆಡಿಯೋ ವೈರಲ್ ಪ್ರಕರಣ?: ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಒಂದೆರಡು ದಿನಗಳ ಬಳಿಕ ಭಾಸ್ಕರ್‌ರಾವ್ ಅವರು ಮಾತನಾಡಿದ್ದಾರೆ ಎಂದು ಹೇಳಲಾದ ಆಡಿಯೋ ವೈರಲ್ ಆಗಿತ್ತು. ಅದನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು, ಆಡಿಯೋ ಸೋರಿಕೆ ಸಂಬಂಧ ತನಿಖೆ ನಡೆಸಿ ವರದಿ ನೀಡುವಂತೆ ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದ ತಂಡ ತನಿಖೆ ನಡೆಸಿ ಸೋಮವಾರ 30 ಪುಟಗಳ ವರದಿ ಸಲ್ಲಿಸಿತ್ತು.
ಸಿಬಿಐ ಅಥವಾ ಸಿಐಡಿಗೆ ವರ್ಗಾವಣೆ ಸಾಧ್ಯತೆ?: ಡಿಐಜಿ ಸಂದೀಪ್ ಪಾಟೀಲ್ ಅವರು ಸದ್ಯ ಕದ್ದಾಲಿಕೆಯಾಗಿದ್ದ ಆಡಿಯೋ ಸೋರಿಕೆ ಬಗ್ಗೆ ಮಾತ್ರ ತನಿಖೆ ನಡೆಸಿದ್ದಾರೆ. ಒಂದು ವೇಳೆ, ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಅವರು ಸಂದೀಪ್ ಪಾಟೀಲ್ ಅವರ ಮನವಿಯನ್ನು ಪುರಸ್ಕರಿಸಿದರೆ ಇಡೀ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಬಹುದು. ಈಗಾಗಲೇ ಹಿಂದಿನ ಸರ್ಕಾರ ಹಲವು ರಾಜಕಾರಣಿಗಳ ಮತ್ತು ಅಧಿಕಾರಿಗಳ ದೂರವಾಣಿ ಕದ್ದಾಲಿಕೆ ಮಾಡಿದೆ ಎಂಬ ಆರೋಪ ಇರುವುದರಿಂದ ಈ ಪ್ರಕರಣವನ್ನೂ ಸೇರಿಸಿ ಒಟ್ಟಾರೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವ ಸಾಧ್ಯತೆಯೂ ಇದೆ. ರಾಜಕಾರಣಿಗಳ ದೂರವಾಣಿ ಕದ್ದಾಲಿಸಲು ಕೆಲ ಹಿರಿಯ ದರ್ಜೆ ಪೊಲೀಸ್ ಅಧಿಕಾರಿಗಳು ಸಹಕರಿಸಿದ್ದರು ಎನ್ನಲಾಗಿದೆ.
ಎಲ್ಲರ ರಕ್ಷಣೆ ಮಾಡುವವರು ಈ ರೀತಿಯ ಫೋನ್ ಕದ್ದಾಲಿಕೆ ಮಾಡುವುದು ಎಷ್ಟು ಸರಿ? ಇದೊಂದು ಕ್ರಿಮಿನಲ್ ಅಪರಾಧ. ಈ ಬಗ್ಗೆ ರಾಜ್ಯ ಸರ್ಕಾರ ಮಾಹಿತಿ ಕಲೆ ಹಾಕಿದೆ. ಯಾರು ಎಷ್ಟೇ ದೊಡ್ಡವರಿರಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು.
-ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ
ಟೆಲಿಫೋನ್ ಕದ್ದಾಲಿಕೆ ಮಾಡುತ್ತಿರುವ ಬಗ್ಗೆ ನಮಗೆ ಅನುಮಾನ ಬಂದಿತ್ತು. ಹೀಗಾಗಿ, ಫೋನ್ ಸ್ವಿಚ್ ಆಫ್ ಮಾಡಿಟ್ಟುಕೊಂಡಿದ್ದೆವು. ಯಾರೇ ಆಗಲಿ ಫೋನ್ ಕದ್ದಾಲಿಕೆ ಮಾಡಬಾರದು. ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು.
-ಎಂ.ಟಿ.ಬಿ.ನಾಗರಾಜ್, ಅನರ್ಹ ಶಾಸಕ