Advertisement
ಒಂದು ರಿಕ್ಷಾ ಅಥವಾ ಬಸ್‌ನಲ್ಲಿ ಸಂಚಾರಿಸುವ ವೇಳೆ ಯಾರೋ ಒಬ್ಬರ ಸಹಾಯ ಇಲ್ಲದೆ ಸಾಧ್ಯವೇ? ಒಂದು ಹೊಟೇಲಿಗೆ ತೆರಳಿ ಒಂದು ಲೋಟ ಕಾಫಿ, ಒಂದು ದೋಸೆ, ಇಡ್ಲಿ ತಿಂದು ದುಡ್ಡು ಕೊಟ್ಟು ಬಂದಾಗ ಅದೆಷ್ಟು ಮಂದಿ ರೈತರು ನಿಮಗಾಗಿ ದುಡಿದಿದ್ದರು, ಹೊಟೇಲಿನ ನೌಕರ ಹಾಗೂ ಅಡುಗೆ ಮಾಣಿ ಶ್ರಮಿಸಿದ್ದರು ಎಂಬ ಯೋಚನೆ ನಮಗೆ ಹೊಳೆದದ್ದು ಉಂಟೆ? ಕಾಯಿಲೆ ಬಿದ್ದು ಆಸ್ಪತ್ರೆ ಸೇರಿದಾಗ ನಾವು ಎಷ್ಟೊಂದು ಮಂದಿಯಿಂದ ಸೇವೆ, ಶುಶ್ರೂಷೆ ಪಡೆದಿ ದ್ದನ್ನು ಗಮನಿಸಿದ್ದೇವೆಯೇ?..ಈ ಎಲ್ಲ ಸಂದರ್ಭಗಳಲ್ಲಿ ನಾವು ಅಂದುಕೊಳ್ಳ ಬಹುದು ಧರ್ಮಾರ್ಥ ಏನೂ ಪಡೆದಿಲ್ಲ. ಪ್ರತಿಯೊಂದನ್ನೂ ಹಣ ಪಾವತಿಸಿಯೇ ಸೇವೆ ಪಡೆದಿದ್ದೇವೆ ಎಂದು.
ಇದು ಹೌದು ಎಂದಾದರೆ ನಾವು ಕೆರೆಯ ನೀರನ್ನು ಯಥೇಷ್ಟ ಬಳಸಿಕೊಂಡು ಬದುಕಿದ್ದೇವೆ. ಹಾಗಿದ್ದರೆ ಕೆರೆಯ ನೀರನ್ನು ಮತ್ತೆ ಕೆರೆಗೆ ಚೆಲ್ಲಿ ಇತರರಿಗೂ ಅದು ಸಿಗುವಂತೆ ಮಾಡಬೇಡವೇ? ನಮಗೆ ದೇವರು ಅದೇನೋ ಸಂಪತ್ತು ನೀಡುವಾಗ ಸ್ವಲ್ಪ ಹೆಚ್ಚೇ ನೀಡಿದ್ದಾನೆ ಅಂತ ನಮಗೆ ತೋಚಿದ್ದು ಹೌದೇ? ಹಾಗಾದರೆ ಸಮಾಜಕ್ಕೆ ಸಾಧ್ಯವಿದ್ದಷ್ಟು ಋಣ ತೀರಿಸಲು ನಾವು ಬದ್ಧರು.
ಅದೆಷ್ಟೋ ಅಸಮತೋಲನಗಳು ಸಮಾಜದಲ್ಲಿ ತಾಂಡವ ಆಡುತ್ತಿವೆ. ಹೊಟ್ಟೆ ಬಟ್ಟೆಗೆ ಇಲ್ಲದ, ಸದಾ ರುಗ್ನ ಶಯ್ಯೆಯಲ್ಲೆ ನರಕಯಾತನೆ ಅನುಭವಿಸುವ, ಮಾನ ಸಿಕ ರೋಗದಿಂದ ರಸ್ತೆ ಬೀದಿಗಳಲ್ಲಿ ಹುಚ್ಚರಾಗಿ ಅಲೆದಾಡುವ, ಅಂಗವೈಕಲ್ಯಕ್ಕೆ ಒಳಗಾಗಿ ನರಳುವ ಮಂದಿ ನಮ್ಮ ಸುತ್ತ ಮುತ್ತ ಎಷ್ಟಿಲ್ಲ ಹೇಳಿ? ಅವರೂ ನಮ್ಮ ಸಮಾಜದ ಅಂಗವಲ್ಲವೆ? ನಮ್ಮ ರಕ್ತ ಸಂಬಂಧಿಗಳು ಅಲ್ಲದೇ ಇರಬಹುದು ನಿಜ. ಎಲ್ಲಿಂದಲೋ ನಮ್ಮ ಪರಿಸರ ಸೇರಿದ ಅನಾಥರು. ನಾವು ಮಾನವತೆಯ ಬಗ್ಗೆ ಕಾಳಜಿ ಉಳ್ಳವರು ಹೌದಾದರೆ ನಮಗೆ ಋಣ ತೀರಿಸಲು ಅದೆಷ್ಟೋ ಅವಕಾಶ, ಸಂದ ರ್ಭಗಳು ಇವೆ. ಅದಕ್ಕಾಗಿಯೇ ಪಣ ತೊಟ್ಟು ಯಾವುದೇ ಲಾಭದ ಆಸೆ ಇಲ್ಲದ ಜೀವಗಳು. ಆನಾಥರು, ವಂಚಿತರು, ಸಂಕಷ್ಟಕ್ಕೀಡಾದವರಿಗೆ ಸಹಾಯ ಹಸ್ತ ಚಾಚಲು ಕಷ್ಟವೇನಿಲ್ಲ. ತನು-ಮನ-ಧನ ಯಾವುದಾದರೂ ಸರಿ. ನಾವು ಸ್ಪಂದಿಸಿದರೆ ಈ ಜಗತ್ತು ಸ್ವಲ್ಪ ಬದಲಾಗಲು ಸಾಧ್ಯ.
Related Articles
Advertisement
– ಬಿ. ನರಸಿಂಗ ರಾವ್, ಕಾಸರಗೋಡು