Advertisement

ವಿಶ್ವಾಸದ ಕಸರತ್ತು: ಇಂದೂ ಮುಂದುವರಿಯಲಿದೆ ವಿಶ್ವಾಸದ ಚರ್ಚೆ

03:38 AM Jul 22, 2019 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಸೋಮವಾರ ವಿಶ್ವಾಸ ಮತ ಯಾಚಿಸುತ್ತಾರೆಯೇ ಅಥವಾ ಚರ್ಚೆಗೆ ಜೋತು ಬೀಳುವರೇ ಎಂಬುದರ ಮೇಲೆ ರಾಜ್ಯದ ಮೈತ್ರಿ ಸರಕಾರದ ಭವಿಷ್ಯ ನಿಂತಿದೆ.

Advertisement

ವಿಶ್ವಾಸಮತ ಯಾಚನೆಯಾದರೆ ಸರ ಕಾರ ಪತನ ಖಚಿತ ಎಂಬ ಲೆಕ್ಕಾಚಾರ ವನ್ನು ಬಿಜೆಪಿ ನಡೆಸಿದ್ದರೆ, ಸುಪ್ರೀಂ ಕೋರ್ಟ್‌ ಸೋಮವಾರ ಎರಡು ಅರ್ಜಿ ಗಳ ವಿಚಾರಣೆ ಕೈಗೊಂಡರೆ ಮೈತ್ರಿ ಸರ ಕಾರಕ್ಕೆ ಜೀವದಾನ ಸಿಗುವುದೇ ಎಂಬ ನಿರೀಕ್ಷೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಇದೆ. ಇದರ ನಡುವೆಯೇ ಇಬ್ಬರು ಪಕ್ಷೇತರ ಶಾಸಕರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ತ್ವರಿತವಾಗಿ ವಿಚಾರಣೆ ನಡೆಸಿ, ಶೀಘ್ರವಾಗಿ ವಿಶ್ವಾಸಮತಯಾಚನೆ ಮುಗಿಸುವಂತೆ ಸರಕಾರಕ್ಕೆ ಸೂಚಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಸರಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್‌, ಜೆಡಿಎಸ್‌ ನಾಯಕರು ರವಿವಾರವೂ ಇಡೀ ದಿನ ನಾನಾ ಕಸರತ್ತು ನಡೆಸಿದರು. ಈ ಮಧ್ಯೆ ಅಗತ್ಯಬಿದ್ದರೆ ನಾಯಕತ್ವ ಬದಲಾವಣೆಗೂ ಸಿದ್ಧವಿರುವುದಾಗಿ ಪ್ರಕಟಿಸಿದ ಜೆಡಿಎಸ್‌, ಮುಖ್ಯಮಂತ್ರಿ ಸ್ಥಾನವನ್ನು ಕಾಂಗ್ರೆಸ್‌ನ ಸಿದ್ದರಾಮಯ್ಯ ಅವರಿಗೆ ಬಿಟ್ಟುಕೊಡುವ ಪ್ರಸ್ತಾವವನ್ನೂ ತೇಲಿಬಿಟ್ಟಿದೆ. ಆದರೆ ಇದನ್ನು ನಯವಾಗಿಯೇ ನಿರಾಕರಿಸಿರುವ ಸಿದ್ದರಾಮಯ್ಯ ಅವರು ಮೊದಲು ಸರಕಾರ ವನ್ನು ಉಳಿಸಿಕೊಳ್ಳಲು ಪ್ರಯತ್ನಿಸೋಣ ಎಂದು ಹೇಳಿ ಕಳಿಸಿದ್ದಾರೆ ಎನ್ನಲಾಗಿದೆ.

ನಾಯಕತ್ವ ಬದಲಾವಣೆ ಪ್ರಸ್ತಾವ

ಮೈತ್ರಿ ಸರಕಾರವನ್ನು ಶತಾಯಗತಾಯ ಉಳಿಸಿಕೊಳ್ಳಬೇಕು. ಕಳೆದ 15 ದಿನಗಳ ರಾಜಕೀಯ ವಿದ್ಯಮಾನದುದ್ದಕ್ಕೂ ಆಗಾಗ್ಗೆ ಕೇಳಿಬಂದಿದ್ದ ನಾಯಕತ್ವ ಬದಲಾವಣೆಯ ವಿಚಾರವನ್ನು ಇದೇ ಮೊದಲ ಬಾರಿಗೆ ಜೆಡಿಎಸ್‌ ಅಧಿಕೃತವಾಗಿ ಪ್ರಸ್ತಾವಿಸಿದೆ. ಅಗತ್ಯಬಿದ್ದರೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಸರಕಾರವನ್ನು ಮುನ್ನಡೆಸಲು ಜೆಡಿಎಸ್‌ ಒಪ್ಪಿಗೆ ಇದೆ ಎಂಬ ವರಿಷ್ಠರ ನಿರ್ಧಾರದಂತೆ ಜೆಡಿಎಸ್‌ ಸಚಿವರು ಮಂಡಿಸಿದ ಪ್ರಸ್ತಾವವನ್ನು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಈ ಹಂತದಲ್ಲಿ ಬೇಡ ಎಂದು ನಯವಾಗಿ ತಿರಸ್ಕರಿಸಿದ್ದಾರೆ.

Advertisement

ನಾಲ್ವರಿಗೆ ಸ್ಪೀಕರ್‌ ನೋಟಿಸ್‌?

ರಾಜೀನಾಮೆ ಸಲ್ಲಿಸಿ ವಿಚಾರಣೆಗೆ ಹಾಜರಾಗದಿರುವ ಕಾಂಗ್ರೆಸ್‌ನ ಅತೃಪ್ತ ಶಾಸಕರಾದ ರಮೇಶ್‌ ಜಾರಕಿಹೊಳಿ, ಮಹೇಶ್‌ ಕುಮಟಳ್ಳಿ, ಬಿ.ಸಿ. ಪಾಟೀಲ್, ಆರ್‌. ಶಂಕರ್‌ಗೆ ವಿವರಣೆ ಕೋರಿ ಸ್ಪೀಕರ್‌ ನೋಟಿಸ್‌ ನೀಡಿದ್ದಾರೆ ಎನ್ನಲಾಗಿದೆ.

ನಾವು ಬರುವುದಿಲ್ಲ: ಅತೃಪ್ತರ ಖಡಕ್‌ ಪ್ರತಿಕ್ರಿಯೆ

ಅತೃಪ್ತ ಶಾಸಕರನ್ನು ಗನ್‌ ಪಾಯಿಂಟ್‌ನಲ್ಲಿ ಇರಿಸಲಾಗಿದೆ ಎಂದು ರವಿವಾರ ಡಿ.ಕೆ. ಶಿವಕುಮಾರ್‌ ಆರೋಪ ಮಾಡಿದ ಕೆಲವೇ ಹೊತ್ತಿನಲ್ಲೇ 11 ಶಾಸಕರು ಒಟ್ಟಿಗೆ ಸೇರಿ ವೀಡಿಯೊ ಸಂದೇಶವೊಂದನ್ನು ಕಳುಹಿಸಿದ್ದು, ತಾವು ಯಾರೊಬ್ಬರೂ ಗನ್‌ ಪಾಯಿಂಟ್‌ನಲ್ಲಿಯೂ ಇಲ್ಲ. ಎಲ್ಲರೂ ಬದುಕಿದ್ದು, ಆರೋಗ್ಯವಾಗಿಯೇ ಇದ್ದೇವೆ. ಯಾವುದೇ ಕಾರಣಕ್ಕೂ ಕಲಾಪದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಖಂಡತುಂಡವಾಗಿ ತಿಳಿಸಿದ್ದಾರೆ.

ಈ ಕೂಡಲೇ ವಿಶ್ವಾಸ ಮತಕ್ಕೆ ನಿಗದಿಪಡಿಸಿ

ಹೊಸದಿಲ್ಲಿ: ವಿಶ್ವಾಸಮತ ಯಾಚನೆಯಲ್ಲಿ ಮಂದಗತಿ ಅನುಸರಿಸುತ್ತಿರುವ ಕರ್ನಾಟಕ ಸರಕಾರಕ್ಕೆ ಈ ಕೂಡಲೇ ಸದನದಲ್ಲಿ ಬಹುಮತ ಸಾಬೀತುಪಡಿಸುವಂತೆ ಸೂಚನೆ ನೀಡಬೇಕೆಂದು ನಿವೇದಿಸಿ ಕರ್ನಾಟಕದ ಇಬ್ಬರು ಪಕ್ಷೇತರ ಶಾಸಕರಾದ ಆರ್‌. ಶಂಕರ್‌ ಮತ್ತು ಎಚ್. ನಾಗೇಶ್‌ ಅವರು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ. ಶಾಸಕರ ಅರ್ಜಿಯು ಜು. 22ರಂದು ತ್ವರಿತ ವಿಚಾರಣೆಗೆ ಬರುವ ಸಾಧ್ಯತೆಗಳಿವೆ.

ಕರ್ನಾಟಕದಲ್ಲಿ ಆಡಳಿತಾರೂಢ ಪಕ್ಷಗಳಾದ ಕಾಂಗ್ರೆಸ್‌-ಜೆಡಿಎಸ್‌ನ ಒಟ್ಟು 14 ಶಾಸಕರು ರಾಜೀನಾಮೆ ಸಲ್ಲಿಸಿರುವುದರಿಂದ ಕರ್ನಾಟಕ ರಾಜ್ಯ ಸರಕಾರ ಅಸ್ಥಿರಗೊಂಡಿದೆ.

ಈ ಹಿನ್ನೆಲೆಯಲ್ಲಿ, ಸರಕಾರಕ್ಕೆ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಕುಮಾರಸ್ವಾಮಿ ಯವರಿಗೆ ಸೂಚಿಸಿದ್ದಾರೆ. ಸದನ ದಲ್ಲಿ ಬಹುಮತ ಸಾಬೀತಿಗೆ ಈಗಾಗಲೇ ರಾಜ್ಯಪಾಲರು ಎರಡು ಬಾರಿ ಗಡುವು ಕೊಟ್ಟಿದ್ದರೂ ಸರಕಾರ ಅವನ್ನು ನಿರ್ಲಕ್ಷಿಸಿದೆ. ಹೀಗಾಗಿ ನ್ಯಾಯಾಲಯದ ಮೊರೆ ಹೋಗಿರುವ ಪಕ್ಷೇತರರು, ಸಂವಿಧಾನದ 36ನೇ ಕಲಂನ ಅನುಸಾರ, ಸರಕಾರಕ್ಕೆ ಬಹು ಮತ ಸಾಬೀತುಪಡಿಸಲು ನ್ಯಾಯಾಲಯ ಸೂಚಿಸಬೇಕೆಂದು ಕೇಳಿಕೊಂಡಿದ್ದಾರೆ.

ಸುಪ್ರೀಂ ಕೋರ್ಟ್‌ನತ್ತ ದೃಷ್ಟಿ
ವಿಪ್‌ ಉಲ್ಲಂಘನೆ ಸಂಬಂಧ ದಿನೇಶ್‌ ಗುಂಡೂರಾವ್‌ ಸಲ್ಲಿಸಿ ರುವ ಅರ್ಜಿ, ರಾಜ್ಯಪಾಲರು ಕಲಾಪದಲ್ಲಿ ಹಸ್ತಕ್ಷೇಪ ಮಾಡುತ್ತಿ ದ್ದಾರೆ ಎಂದು ಆರೋಪಿಸಿ ಕುಮಾರಸ್ವಾಮಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ಕೈಗೆತ್ತಿ ಕೊಳ್ಳುವ ನಿರೀಕ್ಷೆ ಇದೆ. ಹಾಗಾಗಿ ಸುಪ್ರೀಂ ಕೋರ್ಟ್‌ನಿಂದಾದರೂ ಮೈತ್ರಿ ಸರಕಾರಕ್ಕೆ ಜೀವದಾನ ಸಿಗುವ ನಿರೀಕ್ಷೆಯಲ್ಲಿ ಕಾಂಗ್ರೆಸ್‌ ಜೆಡಿಎಸ್‌ ನಾಯಕರು ಸುಪ್ರೀಂ ಕೋರ್ಟ್‌ನತ್ತ ದೃಷ್ಟಿ ನೆಟ್ಟಿದ್ದಾರೆ.

ಇನ್ನೊಂದೆಡೆ ಬಿಜೆಪಿ ಸಹ ಸುಪ್ರೀಂ ಕೋರ್ಟ್‌ ಈ 2 ಅರ್ಜಿಗಳ ವಿಚಾರಣೆ ಕೈಗೆತ್ತಿ ಕೊಂಡರೆ ಯಾವ ಬೆಳವಣಿಗೆ ಗಳಾಗಬಹುದು ಎಂಬುದನ್ನು ಗಮನಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next