ಮೈಸೂರು: ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ಸೇವನೆ ಪ್ರಕರಣದ ಸಾವಿನ ಸರಣಿ ಮುಂದುವರಿದಿದೆ. ಘಟನೆಯಲ್ಲಿ ತೀವ್ರ ಅಸ್ವಸ್ಥಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಮೃತಪಟ್ಟಿದ್ದು, ಇದರೊಂದಿಗೆ ಘಟನೆಯಲ್ಲಿ ಸತ್ತವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದ ನಾಗೇಶ್ (45) ಮೃತ ದುರ್ದೈವಿ. ಘಟನೆಯಲ್ಲಿ ಅಸ್ವಸ್ಥಗೊಂಡಿದ್ದ ನಾಗೇಶ್ ಅವರನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಹೆಚ್ಚಿನ ಅಗತ್ಯವಿದ್ದ ಕಾರಣಕ್ಕೆ ನಂತರ ನಾಗೇಶ್ ಅವರನ್ನು ಜೆಎಸ್‌ಎಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ನಾಗೇಶ್ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆಯಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮತ್ತಿತರ ಕುಟುಂಬಸ್ಥರಲ್ಲಿ ಆತಂಕ ಹೆಚ್ಚಿಸಿದೆ.
ಘಟನೆ ನಡೆದ ಡಿ.14ರಂದು ಆಡು ಮೇಯಿಸಲು ತೆರಳಿದ್ದ ನಾಗೇಶ್, ದೇವಸ್ಥಾನದ ಪ್ರಸಾದ ಸೇವಿಸಿದ್ದರು. ಬಳಿಕ ಆಡು ಮೇಯಿಸುತ್ತಿದ್ದರು. ಈ ನಡುವೆ ದೇವಸ್ಥಾನದಲ್ಲಿ ಪ್ರಸಾದ ಸೇವಿಸಿ ಹಲವರು ಅಸ್ವಸ್ಥಗೊಂಡಿರುವ ವಿಷಯ ತಿಳಿಯುತ್ತಿದ್ದಂತೆ ಆತಂಕಗೊಂಡ ನಾಗೇಶ್ ಕುಟುಂಬ ಸದಸ್ಯರು ನಾಗೇಶ್ ಅವರನ್ನು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೆ.ಆರ್.ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಆದರೆ, ಹೆಚ್ಚಿನ ಚಿಕಿತ್ಸೆಗೆ ಜೆಎಸ್‌ಎಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ಮಧ್ಯೆ, ಕಳೆದ 7 ದಿನಗಳಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ನಾಗೇಶ್ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಮೃತ ನಾಗೇಶ್ ಅವರದ್ದು ಬಡಕುಟುಂಬವಾಗಿದ್ದು, ನಾಲ್ವರು ಹೆಣ್ಣು ಮಕ್ಕಳಲ್ಲಿ ಒಬ್ಬಳಿಗೆ ಮದುವೆ ಮಾಡಿದ್ದಾರೆ. ಗಂಡ ಹೆಂಡತಿ ಇಬ್ಬರೂ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ನಾಗೇಶ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಕೆ.ಆರ್.ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ನೀಡಲಾಯಿತು.
ವಿಷಪ್ರಸಾದ ಸೇವಿಸಿ ಅಸ್ವಸ್ಥರಾದ 101 ಮಂದಿಯನ್ನು ಮೈಸೂರಿನ ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಹಲವರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸದ್ಯ 21 ಮಂದಿಯ ಸ್ಥಿತಿ ಇನ್ನೂ ಚಿಂತಾಜನಕವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಲ್ಲಿ ಹಲವರು ವೆಂಟಿಲೇಟರ್‌ನಲ್ಲಿದ್ದು, ವೈದ್ಯರು ಹೆಚ್ಚಿನ ನಿಗಾ ವಹಿಸಿದ್ದಾರೆ. ಉಳಿದಂತೆ 38 ಮಂದಿ ಆರೋಗ್ಯ ಸ್ಥಿತಿ ಸುಧಾರಿಸಿದ್ದು, ಆದಷ್ಟು ಬೇಗ ಸಂಪೂರ್ಣ ಗುಣಮುಖರಾಗುತ್ತಾರೆ ಎಂದು ವೈದ್ಯರು ತಿಳಿಸಿದ್ದಾರೆ.