ಕೆ.ಆರ್ ಪುರ/ಬೆಂಗಳೂರು: ಅಂಬೆಗಾಲಿಟ್ಟು ನಡೆದಾಡುತ್ತಿದ್ದ ಸಹೋದರಿ ಹಾಗೂ ಜತೆಯಲ್ಲಿಯೇ ಇರುತ್ತಿದ್ದ ನಾಲ್ಕು ವರ್ಷದ ಸಹೋದರ ಆಟವಾಡುತ್ತಿದ್ದಾಗ ನೀರಿನ ಸಂಪ್‌ಗೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಗುರುವಾರ ಮಧ್ಯಾಹ್ನ ಕೆ.ಆರ್ ಪುರ ಸಮೀಪದ ಕೊಡಿಗೇಹಳ್ಳಿಯಲ್ಲಿ ನಡೆದಿದೆ.
ನವೀನ್ (4) ಬಸಮ್ಮ (18 ತಿಂಗಳು) ಮೃತ ಮಕ್ಕಳು. ಕೊಡಿಗೇಹಳ್ಳಿಯ ನಿರ್ಮಾಣ ಹಂತದ ಕಟ್ಟಡದ ಸಮೀಪ ಶೆಡ್ ಹಾಕಿಕೊಂಡು ಯಾದಗಿರಿ ಮೂಲದ ಕವಿತಾ ಇಬ್ಬರು ಮಕ್ಕಳು ಹಾಗೂ ಅತ್ತೆ ಭೀಮವ್ವ ಜತೆ ವಾಸವಿದ್ದರು.
ಗುರುವಾರ ಮಧ್ಯಾಹ್ನ 12.30ರ ಸುಮಾರಿಗೆ ಕವಿತಾ ಎಂದಿನಂತೆ ಕಟ್ಟಡ ನಿರ್ಮಾಣ ಕೆಲಸದಲ್ಲಿದ್ದರು. ಭೀಮವ್ವ ಶೆಡ್‌ನಲ್ಲಿ ಅಡುಗೆ ಸಿದ್ಧಪಡಿಸುತ್ತಿದ್ದರು. ಈ ವೇಳೆ ಹೊರಗಡೆ ಬಂದ ನವೀನ್ ಹಾಗೂ ಬಸಮ್ಮ, ಆಟವಾಡುತ್ತಾ ಸಂಪ್ ಬಳಿ ಬಂದು ಅಚಾನಕ್ ಆಗಿ ಸಂಪ್‌ನ ಹಲಗೆ ಮೇಲೆ ಕಾಲಿಟ್ಟಿದ್ದು, ಒಳಗಡೆ ಬಿದ್ದಿದ್ದಾರೆ.
ಒಂದು ಗಂಟೆ ಸುಮಾರಿಗೆ ಊಟಕ್ಕೆ ಎಂದು ಶೆಡ್ ಬಳಿ ಬಂದ ತಾಯಿ ಕವಿತಾ, ಮಕ್ಕಳಿಲ್ಲದಿರುವುದನ್ನು ಗಮನಿಸಿ ಸುತ್ತಮುತ್ತಲೂ ಹುಡುಕಾಡಿದ್ದಾರೆ. ಎಲ್ಲಿಯೂ ಅವರ ಸುಳಿವು ಸಿಕ್ಕಿಲ್ಲ. ಕಡೆಗೆ ಸಂಪ್ ಮುಚ್ಚಿದ್ದ ಹಲಗೆ ತೆರೆದಿರುವುದನ್ನು ಗಮನಿಸಿ, ಸಂಪ್‌ನೊಳಗೆ ಇಣುಕಿ ನೋಡಿದ್ದಾರೆ.
ಮಕ್ಕಳಿಬ್ಬರೂ ತೇಲಾಡುತ್ತಿರುವುದನ್ನು ಕಂಡು ಆಘಾತಗೊಂಡ ಅವರು ಸಹಾಯಕ್ಕೆ ಕಿರುಚಿಕೊಂಡಿದ್ದಾರೆ. ಕಿರುಚಾಟ ಕೇಳಿ ಧಾವಿಸಿದ ಸ್ಥಳೀಯರು ಮಕ್ಕಳಿಬ್ಬರನ್ನು ಸಂಪ್‌ನಿಂದ ಮೇಲಿತ್ತಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರೀಕ್ಷಿಸಿದ ವೈದ್ಯರು ಮಕ್ಕಳು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಕ್ಕಳಿಬ್ಬರು ಆಟವಾಡುವಾಗ ಹಲಗೆ ಮೇಲೆ ಕಾಲಿಟ್ಟು ಇಣುಕಿ ನೋಡಿದಾಗ ಆಯತಪ್ಪಿ ಒಳಗಡೆ ಬಿದ್ದಿರುವ ಸಾಧ್ಯತೆಯಿದೆ. ಈ ಕುರಿತು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.ಮಕ್ಕಳ ತಾಯಿ ಕವಿತಾ ವಿರುದ್ಧ ನಿರ್ಲಕ್ಷ್ಯ ಆರೋಪ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಕವಿತಾ ಪತಿ ಮಲ್ಲಪ್ಪ 15 ದಿನಗಳ ಹಿಂದೆ ಜಗಳ ಮಾಡಿಕೊಂಡು ಯಾದಗಿರಿಗೆ ಹೋಗಿ ಮೊದಲ ಪತ್ನಿ ಜತೆ ವಾಸಿಸುತ್ತಿದ್ದಾನೆ. ಹೀಗಾಗಿ, ಕವಿತಾ ತಮ್ಮ ಅತ್ತೆಯ ಜೊತೆ ನಿರ್ಮಾಣ ಹಂತದ ಕಟ್ಟಡದ ಬಳಿಯೇ ಶೆಡ್ ಹಾಕಿಕೊಂಡು ಮಕ್ಕಳ ಜತೆ ವಾಸವಿದ್ದರು ಎಂದು ಅಧಿಕಾರಿ ಹೇಳಿದರು.